ಸಾರಾಂಶ
ಉಸ್ತಾದ್ ಹಮೀದ್ ಖಾನ್ ಅವರ ಸ್ಮರಣಾರ್ಥ ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು ಇದು 4ನೇ ವರ್ಷದ ಸಂಗೀತೋತ್ಸವವಾಗಿದೆ.
ಹುಬ್ಬಳ್ಳಿ:
ಘರಾಣೆಯ ಪ್ರಸಿದ್ಧ ಸಿತಾರ್ ವಾದಕರಾದ ಉಸ್ತಾದ್ ಹಮೀದ್ ಖಾನ್ ಅವರ ಸ್ಮರಣಾರ್ಥ ಕೊಡಮಾಡುವ ''''ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ಸಂಗೀತ ಸಾಧಕ ಪ್ರಶಸ್ತಿ''''ಯನ್ನು ಈ ಬಾರಿ ಪುಣೆಯ ಹಿರಿಯ ಗಾಯಕ ಪಂ. ಆನಂದ ಭಾಟೆ ಅವರಿಗೆ ನೀಡಲಾಗುತ್ತಿದೆ.ಅ. 20ರಂದು ಸಂಜೆ 5ಕ್ಕೆಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು. ಖ್ಯಾತ ಕವಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಖ್ಯಾತ ಕಲಾವಿದ ಆನಂದ ಭಾಟೆ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವೂ ನಡೆಯಲಿದೆ ಎಂದು ಕಲಾ ಸಂವಹನ ಟ್ರಸ್ಟ್ ತಿಳಿಸಿದೆ.
ಉಸ್ತಾದ್ ಹಮೀದ್ ಖಾನ್ ಅವರ ಸ್ಮರಣಾರ್ಥ ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು ಇದು 4ನೇ ವರ್ಷದ ಸಂಗೀತೋತ್ಸವವಾಗಿದೆ. ಸಂಗೀತಗಾರರನ್ನು ಗೌರವಿಸುವ ಜತೆಗೆ ಸಂಗೀತವಾದ್ಯ ಉಪಕರಣಗಳ ತಯಾರಕ ಮೀರಜ್‌ನ ನೌಶಾದ್ ಗುಲಾಬ್ ಸಾಹೇಬ್ ಸಿತಾರಮೇಕರ್ ಅವರನ್ನೂ ಸನ್ಮಾನಿಸುವುದು ಈ ಬಾರಿಯ ವಿಶೇಷ.ಕಾರ್ಯಕ್ರಮದಲ್ಲಿ ಕಲಾವಿದರಾದ ನೌಶಾದ್ ಮತ್ತು ನಿಶಾದ್ ಹರ್ಲಾಪುರ ಗಾಯನ ಜುಗಲ್ ಬಂಧಿ ಪ್ರಸ್ತುತಪಡಿಸಲಿದ್ದಾರೆ.. ಚಂದ್ರಿಕಾ ಮಾನ್ವಿ ಅವರಿಂದ ಸುಗಮ ಸಂಗೀತ ಮತ್ತು 30ಕ್ಕೂ ಹೆಚ್ಚು ಕಲಾವಿದರ ವಿಶಿಷ್ಠ ಸಂಯೋಜನೆಯ ಸಿತಾರ್ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ. ಉಸ್ತಾದ್ ನಿಸಾರ್ ಅಹ್ಮದ್, ಪಂಡಿತ್ ಶಾಂತಲಿಂಗಪ್ಪ ದೇಸಾಯಿ, ಪಂಡಿತ್ ಚಿನ್ಮಯ್ ನಾಮಣ್ಣನವರ, ಶ್ರೀಧರ ಮಾಂಡ್ರೆ, ಗುರುಪ್ರಸಾದ ಹೆಗಡೆ ಮುಂತಾದ ಕಲಾವಿದರು ಸಾಥಿ ನೀಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ ವಸ್ತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.