ಹಮ್ಮಿಗಿ ಬ್ಯಾರೇಜ್ ಭರ್ತಿ, ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ !

| Published : May 30 2024, 12:51 AM IST

ಸಾರಾಂಶ

ಬ್ಯಾರೇಜ್ ನಲ್ಲಿನ ನೀರು ಸಂಪೂರ್ಣ ಖಾಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡುವಂತೆ ಸಾಕಷ್ಟು ಬಾರಿ ವಿನಂತಿಸಿದ್ದರು

ಶಿವಕುಮಾರ ಕುಷ್ಟಗಿ ಗದಗ

ಜಿಲ್ಲೆಯ ಕುಡಿಯುವ ನೀರಿನ ಪ್ರಮುಖ ಜಲಮೂಲ, ತುಂಗಭದ್ರಾ ನದಿಗೆ ಮುಂಡರಗಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಹಮ್ಮಿಗಿ ಬ್ಯಾರೇಜ್‌ ಬುಧವಾರ ಭರ್ತಿಯಾಗಿದೆ. ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ತಾಲೂಕುಗಳ ಜನರ ನೀರಿನ ಬವಣೆ ನೀಗಿದಂತಾಗಿದ್ದು, ಸದ್ಯಕ್ಕೆ ಗದಗ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.

2012 ರಲ್ಲಿ ಉದ್ಘಾಟನೆಯಾಗಿದ್ದ ಹಮ್ಮಿಗಿ ಬ್ಯಾರೇಜ್ ಕಳೆದ 10 ವರ್ಷದ ಇತಿಹಾಸದಲ್ಲಿ ಅತೀ ಕಡಿಮೆ ನೀರಿನ ಮಟ್ಟಕ್ಕೆ ಕುಸಿದಿದ್ದು ಪ್ರಸಕ್ತ ಸಾಲಿನಲ್ಲಿ ಮಾತ್ರ. ಇದಕ್ಕೆ ಕಾರಣ ಕಳೆದ ವರ್ಷ ಉಂಟಾಗಿದ್ದ ತೀವ್ರ ಮಳೆ ಕೊರತೆ. ಮಲೆನಾಡ ಭಾಗದಲ್ಲಿಯೇ ಮಳೆಯಾಗದ ಹಿನ್ನೆಲೆಯಲ್ಲಿ ಡೆಡ್ ಸ್ಟೋರೇಜ್ ಕೂಡಾ ಸಂಪೂರ್ಣ ಖಾಲಿಯಾಗಿತ್ತು. ಇದರಿಂದ ಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ಅವಳಿ ನಗರ ಸಂಪೂರ್ಣ ತತ್ತರಿಸಿ ಹೋಗಿದ್ದು, ಸಾರ್ವಜನಿಕರಿಗೆ ಅಗತ್ಯವಿರುಷ್ಟು ನೀರು ಕೊಡಲು ಸಾಧ್ಯವಾಗದೇ ನಗರಸಭೆ ಕೈ ಚೆಲ್ಲಿ ಕುಳಿತಿತ್ತು.

ಬ್ಯಾರೇಜ್ ಭರ್ತಿ: ಬ್ಯಾರೇಜ್ ನಲ್ಲಿನ ನೀರು ಸಂಪೂರ್ಣ ಖಾಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡುವಂತೆ ಸಾಕಷ್ಟು ಬಾರಿ ವಿನಂತಿಸಿದ್ದರು. ಆದರೆ ಆ ಭಾಗದಲ್ಲಿಯೂ ಮಳೆ ಕೊರತೆಯಿಂದ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿತ್ತು. ಇದರಿಂದ ನೀರು ಬಿಡಲು ಸಾಧ್ಯವಿಲ್ಲ ಎನ್ನುವ ಮಾಹಿತಿ ಬಂದಾಗ ಗದಗ ಜಿಲ್ಲಾಡಳಿತ ಅಕ್ಷರಶಃ ನಡುಗಿ ಹೋಗಿತ್ತು. ಹಾವೇರಿ, ದಾವಣಗೇರೆ, ಅಲ್ಪಸ್ವಲ್ಪ ಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿದ ಬೇಸಿಗೆ ಮಳೆಯೇ ಗದಗ ಜಿಲ್ಲೆಗೆ ವರದಾನವಾಗಿ ಪರಿಣಮಿಸಿತು. ತುಂಗಭದ್ರಾ ನದಿ ಪಾತ್ರಕ್ಕೆ ವ್ಯಾಪಕವಾಗಿ ನೀರು ಹರಿದು ಬಂದು, ಬುಧವಾರ ಬೆಳಗಿನ ಜಾವವೇ ಹಮ್ಮಿಗಿ ಬ್ಯಾರೇಜ್ ಭರ್ತಿಯಾಗಿದೆ.

1.70 ಟಿಎಂಸಿ ನೀರು ಸಂಗ್ರಹ: ಬ್ಯಾರೇಜ್ ನಲ್ಲಿ ಮಳೆಯಾಗುವ ಮೊದಲು 500.700 ಅಡಿ (0.30 ಟಿಎಂಸಿ) ನೀರಿತ್ತು, ಸದ್ಯ 507.00 ಅಡಿ (2.026 ಟಿಎಂಸಿ) ನೀರು ಸಂಗ್ರಹವಾಗಿದ್ದು, ಹಮ್ಮಿಗಿ ಬ್ಯಾರೇಜ್ ನಲ್ಲಿ ಬುಧವಾರ ಬೆಳಗ್ಗೆ ನೀರು ಸಂಗ್ರಹದ ಒಟ್ಟು ಪ್ರಮಾಣದ 1.70 ಟಿಎಂಸಿಗೆ ತಲುಪಿದ್ದು, ಬೇಸಿಗೆಯಲ್ಲಿಯೇ (ಮೇ ತಿಂಗಳಲ್ಲಿ ) ಇಷ್ಟೊಂದು ಪ್ರಮಾಣದ ನೀರು ಹರಿದು ಬಂದಿದ್ದು ಇದೇ ಮೊದಲ ಬಾರಿಗೆ ಎನ್ನುವುದು ಕೂಡಾ ಗದಗ ಜಿಲ್ಲೆಯ ಜನರಿಗೆ ಅತೀವ ಸಂತಸದ ಸಂಗತಿಯಾಗಿದೆ.

300 ಕ್ಯೂಸೆಕ್‌ ನೀರು ಹೊರಕ್ಕೆ: ಹಮ್ಮಿಗಿ ಬ್ಯಾರೇಜ್ ಬಹುತೇಕ ಭರ್ತಿಯಾಗಿರುವ ಹಿನ್ನೆಲೆ ಹಾಗೂ ನದಿಯಲ್ಲಿ ಇದುವರೆಗೂ ಇದ್ದ ಡೆಡ್ ಸ್ಟೋರೇಜ್ ನೀರು ಬಹಳ ದಿನಗಳಿಂದ ಸಂಗ್ರಹವಿದ್ದ ಹಿನ್ನೆಲೆಯಲ್ಲಿ ಮಲೀನಗೊಂಡಿರುತ್ತದೆ ಅದಕ್ಕಾಗಿ ನಿಂತಿರುವ ನೀರು ಹರಿದು ಹೊರ ಹೋಗಲಿ ಎನ್ನುವ ಕಾರಣಕ್ಕಾಗಿ ಬುಧವಾರ ಮಧ್ಯಾಹ್ನ 3.30 ರಿಂದ ಒಂದು ಗೇಟ್ ಮೂಲಕ 300 ಕ್ಯೂಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಸದ್ಯ 1483 ಕ್ಯೂಸೆಕ್‌ ನೀರಿನ ಒಳ ಹರಿವು ಇದ್ದು, ಹಂತ ಹಂತವಾಗಿ ಅಷ್ಟೇ ಪ್ರಮಾಣದ (1483 ಕ್ಯೂಸೆಕ್‌ ) ನೀರನ್ನು ಹೊರ ಬಿಡಲಾಗುತ್ತಿದೆ.

ನದಿ ಪಾತ್ರದ ಜಿಲ್ಲೆಗಳಲ್ಲಿ ಉತ್ತಮ ಬೇಸಿಗೆ ಮಳೆಯಾದ ಹಿನ್ನೆಲೆಯಲ್ಲಿ ಬ್ಯಾರೇಜ್ ಗೆ ಸಾಕಷ್ಟು ನೀರು ಹರಿದು ಬಂದಿದೆ. 1.70 ಟಿಎಂಸಿ ನೀರು ಸಂಗ್ರಹವಾಗಿದ್ದು. ಸದ್ಯ ಒಳಹರಿವು ಎಷ್ಟಿದೆ ಅಷ್ಟೇ ಪ್ರಮಾಣದ ಹೊರ ಹರಿವು ಪ್ರಾರಂಭಿಸಲಾಗಿದೆ. ಬ್ಯಾರೇಜ್ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ 3 ತಿಂಗಳುಗಳ ಕಾಲ ನೀರಿನ ಕೊರತೆ ಉಂಟಾಗುವುದಿಲ್ಲ.

ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಪ್ರಕಾಶ ಐಗೋಳ ತಿಳಿಸಿದ್ದಾರೆ.

ಹಮ್ಮಿಗಿ ಬ್ಯಾರೇಜ್ ನಲ್ಲಿನ ನೀರು ಬೇಸಿಗೆ ಪೂರ್ವದಲ್ಲಿಯೇ ಸಂಪೂರ್ಣ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ನಮಗೆ ನೀರು ಪೂರೈಕೆ ಮಾಡುವುದು ಕಷ್ಟ ಸಾಧ್ಯವಾಗಿತ್ತು. ಇದೇ ರೀತಿಯ ಪರಿಸ್ಥಿತಿ ಮುಂದುವರಿದಿದ್ದರೆ ಬಹಳಷ್ಟು ಸಂಕೀರ್ಣ ಸ್ಥಿತಿ ನಿರ್ಮಾಣವಾಗುತ್ತಿತ್ತು. ದೇವರ ದಯೆಯಿಂದ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಬ್ಯಾರೇಜ್ ನಲ್ಲಿ 1.70 ಟಿಎಂಸಿ ಅಷ್ಟು ನೀರು ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್. ಹೇಳಿದರು.