ಹಂಪಾಪುರ ಶ್ರೀ ಪಟ್ಟಲದಮ್ಮ ದೇವಿ ಪೂಜೆ ಹಕ್ಕು ನಮ್ಮದು; ಪರಿಶಿಷ್ಟ ಜಾತಿ, ಪಂಗಡ, ಗಂಗಾಮತಸ್ಥರಿಂದ ಪ್ರತಿಪಾದನೆ

| Published : May 20 2025, 01:18 AM IST

ಹಂಪಾಪುರ ಶ್ರೀ ಪಟ್ಟಲದಮ್ಮ ದೇವಿ ಪೂಜೆ ಹಕ್ಕು ನಮ್ಮದು; ಪರಿಶಿಷ್ಟ ಜಾತಿ, ಪಂಗಡ, ಗಂಗಾಮತಸ್ಥರಿಂದ ಪ್ರತಿಪಾದನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಆದರೆ ಅರ್ಚಕ ಸೇವೆಯನ್ನು ಹಂಪಾಪುರದ ಗ್ರಾಮಕ್ಕೆ ನೀಡಿ, ದೇವಾಲಯದ ಹೆಸರಿನಲ್ಲಿರುವ ೭ ಎಕರೆ ಜಮೀನನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಬೇಕು. ದೇವಾಲಯದ ಹುಂಡಿ ಹಣ ಎಣಿಕೆ ಮಾಡಿ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹಂಪಾಪುರದ ಶ್ರೀ ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕ ವೃತ್ತಿಯನ್ನು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಗಂಗಾಮತಸ್ಥರ ಸುಪರ್ದಿಗೆ ವಹಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಿಂದ ವಾಹನಗಳಲ್ಲಿ ಆಗಮಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಕಾಲ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಲದಮ್ಮ ದೇವಾಲಯ ಹಂಪಾಪುರ ಗ್ರಾಮಕ್ಕೆ ಸೇರಿದ್ದು, ೬೦ ವರ್ಷಗಳಿಂದಲೂ ಗ್ರಾಮಸ್ಥರೇ ಪೂಜೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ಮುಜರಾಯಿ ಇಲಾಖೆ ಮಧ್ಯ ಪ್ರವೇಶದಿಂದಾಗಿ ತಹಸೀಲ್ದಾರ್ ಹಳೇ ಅರ್ಚಕರು ಪೂಜೆ ಸಲ್ಲಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದರು.

ಪಟ್ಟಲದಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎನ್ನಲಾಗುತ್ತಿದ್ದು, ಇದುವರೆಗೂ ಮುಜರಾಯಿ ಇಲಾಖೆಯಿಂದ ದೇವಾಲಯದ ಯಾವುದೇ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ನೆರವೇರಿಲ್ಲ. ಆದರೂ ಇದೀಗ ಇವರ ಮಧ್ಯಸ್ಥಿಕೆಯಿಂದ ನೆರೆ ಗ್ರಾಮ ಹಬ್ಬದ ಮಾರನಹಳ್ಳಿಯ ಗ್ರಾಮಸ್ಥರನ್ನು ಅರ್ಚಕರನ್ನಾಗಿ ನೇಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೧೯೦೪ರಿಂದಲೂ ದೇವಾಲಯವು ಹಂಪಾಪುರದ ಪಟ್ಟಲದಮ್ಮ ಎಂಬ ದಾಖಲೆಗಳಿದ್ದು, ಈಗ ಏಕಾಏಕಿ ಕಳೆದೊಂದು ತಿಂಗಳಲ್ಲಿ ಚೋಕನಹಳ್ಳಿ ಪಟ್ಟಲದಮ್ಮ ಎಂಬುದಾಗಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಸರಿಪಡಿಸಿ ಮೊದಲಿನಂತೆಯೇ ಹಂಪಾಪುರದ ಪಟ್ಟಲದಮ್ಮ ಎಂದು ಬದಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಆದರೆ ಅರ್ಚಕ ಸೇವೆಯನ್ನು ಹಂಪಾಪುರದ ಗ್ರಾಮಕ್ಕೆ ನೀಡಿ, ದೇವಾಲಯದ ಹೆಸರಿನಲ್ಲಿರುವ ೭ ಎಕರೆ ಜಮೀನನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಬೇಕು. ದೇವಾಲಯದ ಹುಂಡಿ ಹಣ ಎಣಿಕೆ ಮಾಡಿ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು ಆಗ್ರಹಿಸಿದರು.

ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ಮುಖಂಡರಾದ ಕೃಷ್ಣಯ್ಯ, ಜಿಲ್ಲಾ ಗಂಗಾಮತಸ್ಥ ಸಂಘದ ಉಪಾಧ್ಯಕ್ಷ ಕೆ.ತಮ್ಮಣ್ಣ, ಮಹಿಳಾ ಅಧ್ಯಕ್ಷೆ ಗಾಯಿತ್ರಿ, ಬೋರಯ್ಯ, ದೇವಣ್ಣ, ಉಮೇಶ್, ಪುಟ್ಟಯ್ಯ, ಮಂಚಯ್ಯ, ಜವರಯ್ಯ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

೧೯ಕೆಎಂಎನ್‌ಡಿ-೩

ಮಂಡ್ಯ ತಾಲೂಕು ಹಂಪಾಪುರ ಗ್ರಾಮದ ಶ್ರೀ ಪಟ್ಟಲದಮ್ಮ ದೇವಿ ದೇವಸ್ಥಾನದ ಪೂಜಾ ಹಕ್ಕನ್ನು ತಮಗೇ ನೀಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ, ಪಂಗಡ, ಗಂಗಾಮತಸ್ಥ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.