ಮತ್ತೆ ಪ್ರೇಮಲೋಕದೊಂದಿಗೆ ಹಂಪಿ ಉತ್ಸವಕ್ಕೆ ಬರುವೆ

| Published : Feb 05 2024, 01:46 AM IST

ಸಾರಾಂಶ

ಹಂಪಿಯ ಕಲ್ಲು, ಕಲ್ಲುಗಳಲ್ಲೂ ಸ್ವರ ಇದೆ. ಸಂಗೀತ ಅಡಗಿದೆ. ನಮಗೆ ಆಡಂಬರ ಮಾಡಿ ಗೊತ್ತಿಲ್ಲ. ಜನರ ಪ್ರೀತಿ ಮುಖ್ಯ, ಹಾಗಾಗಿ ನಾನು ಬರುವಾಗ ಜನರ ನಡುವೆ ಬಂದೇ, ಅವರಿಗೆ ಸೆಲ್ಫಿಗೆ ಪೋಸು ನೀಡಿದೆ. ನನಗೆ ಜನರ ಪ್ರೀತಿ ಮುಖ್ಯ

ಹಂಪಿ: ಹಂಪಿ ಉತ್ಸವಕ್ಕೆ ಮೂವತ್ತೇಳು ವರ್ಷಗಳಾಗಿದೆ. ನಾನು ಪ್ರೇಮಲೋಕ ಸಿನಿಮಾ ಮಾಡಿ 37 ವರ್ಷಗಳಾಗಿದೆ. ಮುಂದಿನ ವರ್ಷ ಪ್ರೇಮಲೋಕ-2 ಸಿನಿಮಾ ಮಾಡಿ ಹಂಪಿ ಉತ್ಸವಕ್ಕೆ ಬರುವೆ. ನಾನು ಎಂದಿಗೂ ದುಡ್ಡಿಗೆ ಬೆಲೆ ನೀಡಿಲ್ಲ. ಜನರ ಪ್ರೀತಿಗೆ ಬೆಲೆ ನೀಡಿರುವೆ. ನನಗೆ ಗನ್ ಹಿಡಿಯುವ ಸಿನಿಮಾ ಮಾಡೋದು ಗೊತ್ತಿಲ್ಲ. ರಾಗದೊಂದಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದಿರುವೆ ಎಂದು ಕ್ರೇಜಿಸ್ಟಾರ್‌ ವಿ.ರವಿಚಂದ್ರನ್‌ ಹೇಳಿದರು.

ಹಂಪಿ ಉತ್ಸವದ ಪ್ರಧಾನ ವೇದಿಕೆ ಗಾಯತ್ರಿಪೀಠದಲ್ಲಿ ಭಾನುವಾರ ನಡೆದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ಸವಗಳು ನಮಗೆ ಹುಮ್ಮಸ್ಸು ಕೊಡುತ್ತವೆ. ನಮ್ಮನ್ನೂ ಒಂದು ಮಾಡುತ್ತವೆ. ಹಾಗಾಗಿ ಇಡೀ ಊರು, ನಾಡನ್ನು ಒಂದು ಮಾಡುವ ಹಂಪಿ ಉತ್ಸವ ಪ್ರತಿ ವರ್ಷ ನಡೆಯಬೇಕು. ಇದು ನಾಡಹಬ್ಬವಾಗಿದೆ .ಹಾಗಾಗಿ ಹಂಪಿ ಉತ್ಸವ ನಡೆಯಬೇಕು. ವಿಜಯನಗರದ ಗತ ವೈಭವ, ಶ್ರೀಕೃಷ್ಣದೇವರಾಯರ ಆಡಳಿತವನ್ನು ನಾವೆಲ್ಲರೂ ಮೆಲುಕು ಹಾಕಲು ಹಂಪಿ ಉತ್ಸವ ನಡೆಯಬೇಕು ಎಂದರು.

ಹಂಪಿಯ ಕಲ್ಲು, ಕಲ್ಲುಗಳಲ್ಲೂ ಸ್ವರ ಇದೆ. ಸಂಗೀತ ಅಡಗಿದೆ. ನಮಗೆ ಆಡಂಬರ ಮಾಡಿ ಗೊತ್ತಿಲ್ಲ. ಜನರ ಪ್ರೀತಿ ಮುಖ್ಯ, ಹಾಗಾಗಿ ನಾನು ಬರುವಾಗ ಜನರ ನಡುವೆ ಬಂದೇ, ಅವರಿಗೆ ಸೆಲ್ಫಿಗೆ ಪೋಸು ನೀಡಿದೆ. ನನಗೆ ಜನರ ಪ್ರೀತಿ ಮುಖ್ಯ ಎಂದರು.

ಜನರ ಪ್ರೀತಿ ಪಡೆಯಬೇಕು ಎಂದು ನನ್ನ ತಂದೆ, ತಾಯಿ ಹೇಳಿಕೊಟ್ಟಿದ್ದಾರೆ. ಅವರನ್ನು ನಾನು ಈಗ ಕಳೆದುಕೊಂಡಿರುವೆ. ಆದರೆ, ನೀವು ಕೊಡುವ ಪ್ರೀತಿಯಲ್ಲಿ ನಾನು ಅವರನ್ನು ಕಾಣುವೆ. ಈ ಹಿಂದೆ ವರನಟ ಡಾ. ರಾಜಕುಮಾರ ಸಿನಿಮಾ ಬಿಟ್ಟರೆ ಉಳಿದವರ ಸಿನಿಮಾಗಳನ್ನು ₹10 ಲಕ್ಷಗಳಲ್ಲಿ ಮಾಡುತ್ತಿದ್ದರು. ನಾನು ₹1.15 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದೆ. ನನ್ನ ತಂದೆ ನನಗೆ ಕರೆದು ಈತ ಬಿಳಿಯಾನೆ, ಹಾಕಿದ ದುಡ್ಡು ಮರಳಿ ಬರುವುದಿಲ್ಲ ಎಂದು ಬೈದಿದ್ದರು. ಆದರೆ, ಆ ಸಿನಿಮಾ ನಿಮ್ಮ ಪ್ರೀತಿ ಮುಂದೆ ಗೆದ್ದಿದೆ. ನಾನು ಯಾವತ್ತೂ ಸೋತಿಲ್ಲ. ನನ್ನ ಇಷ್ಟದ ಸಿನಿಮಾ ಮಾಡಿದಾಗ ನಾನು ಸೋತಿರುವೆ. ಆದರೆ, ನಿಮಗೆ ಇಷ್ಟವಾದ ಸಿನಿಮಾ ಮಾಡಿದಾಗ ಗೆದ್ದಿರುವೆ. ಈಗ ನಿಮಗೆ ಇಷ್ಟದ ಸಿನಿಮಾ ಪ್ರೇಮಲೋಕ-2 ಮಾಡುವೆ ಎಂದರು.

ಒಂದು ವರ್ಷದಲ್ಲಿ ಪ್ರೇಮಲೋಕ-2 ಸಿನಿಮಾ ಮಾಡುವೆ. ಈ ಹಿಂದೆ ಪ್ರೇಮಲೋಕ ಸಿನಿಮಾ ಮಾಡುವಾಗ ಚೆನ್ನೈನಲ್ಲಿ ಎಲ್ಲ ಕಲಾವಿದರು ಮ್ಯೂಸಿಕ್‌ ಬಾರಿಸಿದ್ದರು. ಈಗ ನೀವು ವೈಲಿನ್‌ ಕಡೆಗೆ ಹೊರಳುತ್ತಿಲ್ಲ. ವೈಲೆನ್ಸ್‌ ಕಡೆಗೆ ಹೊರಟಿದ್ದೀರಾ. ನಾನು ಮತ್ತೆ 20ರಿಂದ 25 ಹಾಡುಗಳುಳ್ಳ ಪ್ರೇಮಲೋಕ-2 ಮಾಡುವೆ.ನಿಮ್ಮ ಇಷ್ಟದ ಸಿನಿಮಾ ಮಾಡುವೆ. ಗೆದ್ದೇ ಗೆಲ್ಲುವೆ. ನಿಮ್ಮ ಮುಂದೆ ಬಂದು ಖಂಡಿತ ನಿಲ್ಲುವೆ. ಇದೇ ಹಂಪಿ ಉತ್ಸವದಲ್ಲಿ ಎಂದರು.

ಹಂಪಿ ಐತಿಹಾಸಿಕ ನೆಲವಾಗಿದೆ. ಅಯೋಧ್ಯೆ ಸಂಪತ್ತು ನಾವು ಕಳೆದುಕೊಂಡಿದ್ದೆವು. ಮತ್ತೆ ಗತ್ತು, ತಾಕತ್ತಿನೊಂದಿಗೆ ಮರಳಿ ವೈಭವ ಪಡೆದಿದ್ದೇವೆ. ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ಹಂಪಿ ಉತ್ಸವ ನಡೆಯಬೇಕು. ನಾನು ಸದಾ ಜೊತೆಗಿರುವೆ, ಪರದೆಯಲ್ಲಿ ಹಾಗಾಗಿ ನಿಮ್ಮ ಪ್ರೀತಿ ಸದಾ ನನ್ನ ಮೇಲಿರಲಿ ಎಂದರು.

ಸಮಾರೋಪ ಭಾಷಣ ಮಾಡಿದ ಸಚಿವ ಜಮೀರ್ ಅಹಮದ್‌ ಖಾನ್ ಅವರು, ವೈಟ್ ಅಂಡ್ ಬ್ಲಾಕ್ ಲೋಕವನ್ನು ಕಲರ್ ಫುಲ್ ಮಾಡಿದ್ದು ರವಿಚಂದ್ರನ್‌. ಹೊಸ ಪ್ರೇಮಲೋಕಕ್ಕೆ 25 ಹಾಡು ಇರ್ತದೆ ಅಂದ್ರು, ಹಾಗಾದ್ರೆ ಪಿಚ್ಚರ್ ನಲ್ಲಿ ಏನಿರ್ತದೆ ಹೇಳಿ ಸರ್? ಎಂದು ರವಿಚಂದ್ರನ್‌ರನ್ನು ಪ್ರಶ್ನಿಸಿದರು.

ಈ ವೇಳೆ ರವಿಚಂದ್ರನ್‌ ಅವರು, ಪ್ರೇಮಲೋಕ-2 ಸಿನಿಮಾದಲ್ಲಿ ಹಾಡೇ ಮಾತುಗಳು ಎಂದು ಸೂಚ್ಯವಾಗಿ ಹೇಳಿ ನಗೆಗಡಲಲ್ಲಿ ತೋರಿಸಿದರು.

ಮಾಜಿ ಸಚಿವ ಆನಂದ ಸಿಂಗ್‌ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಉತ್ಸವ ಒಂದು ಪಕ್ಷಕ್ಕೆ ಸೀಮಿತವಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಜಮೀರ್‌ ಹೇಳಿದರು. ಆನಂದ ಸಿಂಗ್‌ ಸಹ ಅದ್ಧೂರಿಯಾಗಿ ಹಂಪಿ ಉತ್ಸವ ಮಾಡಿದ್ದರು. ಈಗ ನಾವು ಅದಕ್ಕೂ ಅದ್ಧೂರಿಯಾಗಿ ಮಾಡಿದ್ದೇವೆ ಎಂದರು.

ಮಾಜಿ ಸಚಿವ ಆನಂದ ಸಿಂಗ್‌, ಶಾಸಕರಾದ ಎಂ.ಪಿ.ಲತಾ, ಜೆ.ಎನ್‌.ಗಣೇಶ, ರಾಘವೇಂದ್ರ ಹಿಟ್ನಾಳ, ಹಂಪಿ ಗ್ರಾಪಂ ರಜನಿ ಷಣ್ಮುಖಗೌಡ ನಟ ನೆನಪಿರಲಿ ಪ್ರೇಮ, ಸಾಧುಕೋಕಿಲ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಜಿಪಂ ಸಿಇಒ ಸದಾಶಿವಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಮತ್ತಿತರರಿದ್ದರು.

ಆನಂದ ಸಿಂಗ್‌ ವೇದಿಕೆಗೆ ಏರುತ್ತಲೇ ಹೊರಟು ನಿಂತ ಗವಿಯಪ್ಪ!

ಹಂಪಿ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎಚ್.ಆರ್‌.ಗವಿಯಪ್ಪನವರು ಮಾಜಿ ಸಚಿವ ಆನಂದ ಸಿಂಗ್ ವೇದಿಕೆ ಏರುತ್ತಲೇ, ಹೊರಟು ನಿಂತರು. ಈ ವೇಳೆ ಸಚಿವರು ಹಾಗೂ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರು ಆಹ್ವಾನಿಸಿದರೂ ಅವರು ವೇದಿಕೆ ಏರದೇ ಹೊಸಪೇಟೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು.

ಹಂಪಿ ಉತ್ಸವಕ್ಕೆ ಆನಂದ ಸಿಂಗ್‌ರನ್ನು ಆಹ್ವಾನಿಸಿ ಸ್ಥಳೀಯ ಶಾಸಕರನ್ನೇ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್ ಕಡೆಗಣಿಸಿದ್ದಾರೆ. ಈ ರೀತಿ ನಡೆದುಕೊಂಡರೆ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸದಂತೆ ಆಗುತ್ತದೆ ಎಂದು ಶಾಸಕ ಗವಿಯಪ್ಪನವರು ಸಚಿವರ ವಿರುದ್ಧ ಗರಂ ಆಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.