ಸಾಂಸ್ಕೃತಿಕ, ಕಲೆ, ನಾಟಕ ಹೀಗೆ ವಿವಿಧ ರೀತಿಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಸಮಾನ ಅವಕಾಶ ನೀಡಲಾಗುವುದು

ಹೊಸಪೇಟೆ: ಹಂಪಿ ಉತ್ಸವ ಫೆಬ್ರವರಿ 13ರಿಂದ 15ರವರೆಗೆ ನಡೆಯುತ್ತಿದೆ. ಸಂಗೀತ, ಸಾಂಸ್ಕೃತಿಕ, ಕಲೆ, ನಾಟಕ ಹೀಗೆ ವಿವಿಧ ರೀತಿಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಸಮಾನ ಅವಕಾಶ ನೀಡಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಸ್ಥಳೀಯ ಕಲಾವಿದರು ಮತ್ತು ಸಂಘ, ಸಂಸ್ಥೆಗಳೊಂದಿಗೆ ಹಂಪಿ ಉತ್ಸವ ಪೂರ್ವಭಾವಿ ಸಭೆ ಮಾತನಾಡಿದರು.

ಉತ್ಸವವನ್ನು ಕಳೆದ ಬಾರಿಗಿಂತಲೂ ವಿಶೇಷ ಮತ್ತು ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಎಲ್ಲ ಕಲಾವಿದರು, ಸಂಘ ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಬೇಕು. ಹಂಪಿ ಉತ್ಸವ ಎಂದರೆ ಕಲಾವಿದರ ದಂಡೇ ಸೇರುತ್ತದೆ. ಸ್ಥಳೀಯ ಕಲಾವಿದರನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹ ಮತ್ತು ನೈಜ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಸಮಾನ ಅವಕಾಶ ಕೊಡಿ:

ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಮಾತನಾಡಿ, ಈ ಹಿಂದೆ ಹಣ, ಮೂಲಭೂತ ಸೌಲಭ್ಯಗಳು ಕಡಿಮೆ, ಆದರೆ ಉತ್ಸವ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುತ್ತಿತ್ತು. ಈಗ ಎಲ್ಲವೂ ಇದ್ದರೂ ಕಟ್ಟುನಿಟ್ಟಾಗಿ ಆಯೋಜನೆ ಮಾಡಲಾಗುತ್ತಿಲ್ಲ. ಸಿನಿಮಾ ತಾರೆಯರಿಗೆ, ಖ್ಯಾತ ಕಲಾವಿದರಿಗೆ ಮಾತ್ರ ಮುಖ್ಯ ವೇದಿಕೆಗೆ ಅವಕಾಶ ನೀಡಲಾಗುತ್ತದೆ. ನಮ್ಮಂತಹ ಸ್ಥಳೀಯ ಕಲಾವಿದರಿಗೆ ಕಡೆಗಣಿಸಲಾಗುತ್ತದೆ. ಈ ರೀತಿ ಭೇದಭಾವ ಧೋರಣೆ ಅನುಸರಿಸದೇ ಎಲ್ಲರನ್ನೂ ಸಮಾನತೆಯಿಂದ ಕಾಣುವುದರ ಜೊತೆಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸರ್ಕಾರಿ ಕಟ್ಟಡಗಳಿಗೆ ಪುಷ್ಪಾಲಂಕಾರ:

ವಿಶ್ವ ವಿಖ್ಯಾತ ವಿಶ್ವಪಾರಂಪರಿಕ ತಾಣವಾದ ಹಂಪಿ ಉತ್ಸವದ ಅಂಗವಾಗಿ, ಜೋಳದರಾಶಿ ಗುಡ್ಡ, ವಿರೂಪಾಕ್ಷ ದೇವಾಲಯ ಸೇರಿದಂತೆ ನಗರದಲ್ಲಿನ ಎಲ್ಲಾ ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು. ವೈದ್ಯಕೀಯ ಹಾಗೂ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಘಸಂಸ್ಥೆಗಳ ಪದಾಧಿಕಾರಿಗಳು ಬೇಡಿಕೆ ಇಟ್ಟರು.

ಅಂಗವಿಕಲರಿಗೂ ಅವಕಾಶ ನೀಡಿ:

ಉತ್ಸವದಲ್ಲಿ ಅಂಧ, ವಿಕಲಾಂಗ, ವಿಶೇಷ ಚೇತನರಿಗೆ ಪಾರ್ಕಿಂಗ್ ವ್ಯವಸ್ಥೆಯೇ ಕಗ್ಗಂಟಾಗಿ ಪರಿಣಮಿಸಿದೆ. ಮುಖ್ಯ ವೇದಿಕೆಗೂ ಪಾರ್ಕಿಂಗ್ ಸ್ಥಳಕ್ಕೂ ಅಜಗಜಾಂತರ ದೂರವಿದ್ದು, ಸಾರಿಗೆ ಸೌಲಭ್ಯ, ಪಾಸ್ ವ್ಯವಸ್ಥೆಯಿಲ್ಲದೇ ಮುಖ್ಯ ವೇದಿಕೆ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ. ವಿಜಯನಗರ ಸಾಮ್ರಾಜ್ಯ ಗತವೈಭವ ಸಾರುವ ಹಂಪಿ ಉತ್ಸವ ನೋಡಲಾಗುತ್ತಿಲ್ಲ. ಕೇಳಲಾಗುತ್ತಿಲ್ಲ. ಇದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಅಂತಹವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಬೇಕು. ಹಾಗೆಯೇ ವಿಶೇಷ ಚೇತನ, ಮತ್ತು ಅಂಧ ಕಲಾವಿದರಿಗೂ ಹಂಪಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಕಲಾವಿದರೊಬ್ಬರು ಮಾತನಾಡಿ, ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾದ ಕಲಾವಿದರಿಗೆ ಮುಂಗಡವಾಗಿ ಇಂತಿಷ್ಟು ಹಣ ಪಾವತಿಸಿದಲ್ಲಿ ಬಡ ಕಲಾವಿದರಿಗೆ ಸಹಾಯವಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಸಿದ ಜಿಲ್ಲಾಧಿಕಾರಿ ಉತ್ಸವಕ್ಕಾಗಿ ಸರ್ಕಾರಕ್ಕೆ ₹22 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಅನುದಾನ ಕೊರೆತೆಯಿದೆ. ಆಗಾಗಿ ಕಲಾವಿದರಿಗೆ ಮುಂಗಡವಾಗಿ ಹಣ ಸಂದಾಯ ಮಾಡಲಾಗುವುದಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ಸಂಪೂರ್ಣವಾಗಿ ಒಂದೇ ಕಂತಿನಲ್ಲಿ ಸಂಭಾವನೆ ಪಾವತಿಸಲಾಗುವುದು ಉತ್ತರಿಸಿದರು.

ಹಂಪಿ ಉತ್ಸವ ಆರಂಭವಾದಗಿನಿಂದಲೂ ಎಲ್ಲ ರೀತಿಯ ಕಲೆ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಆದರೆ ಇತ್ತೀಚೆಗೆ ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನಶಿಸಿ ಹೋಗುತ್ತಿರುವ ತೊಗಲು ಗೊಂಬೆಯಾಟ, ಸೂತ್ರ ಗೊಂಬೆಯಾಟ ಹೀಗೆ ದೇಶಿಯ ಸಂಸ್ಕೃತಿ ಒಳಗೊಂಡ ಕಲೆಗಳಿಗೂ ಪ್ರತ್ಯೇಕ ವೇದಿಕೆ ಕಲ್ಪಿಸಬೇಕು. ಹಂಪಿ ಉತ್ಸವಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸಾವಯವ ಕೃಷಿ, ದವಸ ಧಾನ್ಯ ಪ್ರದರ್ಶನ ಮಾಡಬೇಕು. ಅದಷ್ಟೇ ಅಲ್ಲದೇ ಈ ಕುರಿತು ವಿಶೇಷ ಉಪನ್ಯಾಸ ಆಯೋಜಿಸಬೇಕು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಸರ್ಕಾರದ ನಿಯಮಾನುಸಾರ, ಪರಿಮಿತಿಯೊಳಗೆ ಉತ್ಸವ ನಡೆಸಲಾಗುವುದು. ಆದರೂ ಸಾಧ್ಯವಾದಷ್ಟು ತಮ್ಮ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮತ್ತು ಸಕಲ ರೀತಿಯಲ್ಲೂ ಉತ್ತಮವಾಗಿ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಜಿಪಂ ಸಿಇಒ ಅಲಿ ಅಕ್ರಂ ಷಾ, ಉಪವಿಭಾಗಾಧಿಕಾರಿ ವಿವೇಕಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಲಿಂಗೇಶ್‌ ರಂಗಣ್ಣವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.