ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಶ್ವವಿಖ್ಯಾತ ಹಂಪಿಯ ಕಚ್ಚಾ ರಸ್ತೆಗಳು ಒಂದೇ ಮಳೆಗೆ ಹಾಳಾಗಿದ್ದು, ಈ ರಸ್ತೆಯಲ್ಲಿ ತಿರುಗಾಡಲು ಪ್ರವಾಸಿಗರು ಮೂಗು ಮುರಿಯುತ್ತಿದ್ದಾರೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಲ್ಲಿ ಸಂಬಂಧಿಸಿದ ಇಲಾಖೆ ಎಡವಿದೆ ಎಂದು ಪ್ರವಾಸಿಗರು ದೂರುತ್ತಿದ್ದಾರೆ.ಹಂಪಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಕೊಡುವಲ್ಲಿ ಕೇಂದ್ರ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ವಿಫಲವಾಗಿವೆ. ಹಂಪಿಯ ರಾಣಿಸ್ನಾನ ಗೃಹದಿಂದ ಹಜಾರ ರಾಮ ದೇವಾಲಯ ಬಳಸಿ ಕಮಲ ಮಹಲ್ ಮಾರ್ಗದ ರಸ್ತೆ ಮತ್ತು ಗಜಶಾಲೆ ಬಳಸಿ ನೆಲಸ್ತರದ ಶಿವಾಲಯ ದೇವಾಲಯದ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆ ಬರೀ ಒಂದೇ ಒಂದು ಭಾರೀ ಮಳೆಗೆ ಕಿತ್ತುಕೊಂಡಿದೆ. ರಸ್ತೆಯ ಅಲ್ಲಲ್ಲಿ ನೀರು ಕೂಡ ನಿಂತಿದೆ.
ಹಂಪಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಹಿಂದಿನಿಂದಲೂ ಬೇಡಿಕೆ ಇದ್ದೇ ಇದೆ. ಆದರೆ, ಸಂಬಂಧಿಸಿದ ಇಲಾಖೆಗಳು ಈ ಬೇಡಿಕೆಗೆ ಸ್ಪಂದಿಸದೇ ಇರುವುದರಿಂದ ವಿಶ್ವವಿಖ್ಯಾತ ಸ್ಮಾರಕಗಳ ವೀಕ್ಷಣೆಗೆ ಹಾಳಾದ ರಸ್ತೆಯಲ್ಲೇ ತಿರುಗಾಡುವ ಸ್ಥಿತಿ ನಿರ್ಮಾಣಗೊಂಡಿದೆ.ಹಂಪಿಗೆ ಆಗಮಿಸುವ ವಿದೇಶಿ ಪ್ರವಾಸಿಗರು ಸೈಕಲ್ ಏರಿ ತಿರುಗಾಡುತ್ತಾರೆ. ಇನ್ನು ಬಹಳಷ್ಟು ಪ್ರವಾಸಿಗರು ಕಾಲ್ನಡಿಗೆಯಲ್ಲೇ ಹಂಪಿ ಸುತ್ತುತ್ತಾರೆ. ಕಡ್ಡಿರಾಂಪುರದಿಂದ ಶ್ರೀ ವಿರೂಪಾಕ್ಷೇಶ್ವರ ರಥಬೀದಿವರೆಗೆ ಡಾಂಬಾರ್ ರಸ್ತೆ ಇದೆ. ಇನ್ನು ರಥಬೀದಿಯಿಂದ ರಾಣಿಸ್ನಾನ ಗೃಹದ ವರೆಗೆ ಡಾಂಬಾರ್ ರಸ್ತೆ ಇದೆ. ಆದರೆ, ರಾಣಿಸ್ನಾನ ಗೃಹದಿಂದ ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ಕಮಲ ಮಹಲ್, ಗಜಶಾಲೆ, ಅರಮನೆ ಪ್ರದೇಶ, ನೆಲಸ್ತರದ ಶಿವಾಲಯ ಸೇರಿದಂತೆ ವಿವಿಧ ಸ್ಮಾರಕಗಳ ವೀಕ್ಷಣೆಗೆ ಕಚ್ಚಾ ರಸ್ತೆಯೇ ಆಸರೆಯಾಗಿದೆ. ಹಂಪಿಯ ರಸ್ತೆಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕು ಎಂದು ಯುನೆಸ್ಕೊ ಕೂಡ ಸಲಹೆ ನೀಡಿದೆ. ಹಾಗಾಗಿ ಹಂಪಿಯ ಸ್ಮಾರಕಗಳ ಬಳಿ ಕಚ್ಚಾ ರಸ್ತೆ ಇದೆ. ಆದರೆ, ಈ ರಸ್ತೆಗಳನ್ನು ದುರಸ್ತಿ ಮಾಡಬೇಕಾದ ಇಲಾಖೆಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ದೇಶ-ವಿದೇಶಿ ಪ್ರವಾಸಿಗರು ಮೂಗು ಮೂರಿಯುವಂತಾಗಿದೆ.
ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ವಿಜಯ ವಿಠ್ಠಲ ದೇವಾಲಯ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆ ಸ್ಥಿತಿಯು ಹೇಳ ತೀರದಾಗಿದೆ. ಹಂಪಿಯ ಜನತಾ ಪ್ಲಾಟ್ ರಸ್ತೆಯೂ ಹಾಳಾಗಿದೆ. ಹಂಪಿಯ ರಸ್ತೆಗಳನ್ನು ದುರಸ್ತಿಗೊಳಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಕೂಡ ಒತ್ತಾಯಿಸಿದ್ದಾರೆ.ದುರಸ್ತಿ ಮಾಡಲಿಹಂಪಿಯಲ್ಲಿ ತಿರುಗಾಡಲು ಗುಣಮಟ್ಟದ ರಸ್ತೆಗಳಿಲ್ಲ. ಹೊರ ರಸ್ತೆಗಳು ಉತ್ತಮವಾಗಿವೆ. ಆದರೆ, ಸ್ಮಾರಕಗಳ ಬಳಿ ತೆರಳಲು ಇರುವ ರಾಣಿ ಸ್ನಾನ ಗೃಹದ ರಸ್ತೆ, ನೆಲಸ್ತರದ ಶಿವಾಲಯ ರಸ್ತೆಗಳು ಹಾಳಾಗಿವೆ. ಈ ರಸ್ತೆಗಳನ್ನು ದುರಸ್ತಿಗೊಳಿಸಬೇಕಿದೆ. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು.
ರಾಮಕಿಶನ್, ಮನೋಹರ್ ಪ್ರವಾಸಿಗರು.