ಹಂಪಿ ಪ್ರವಾಸಿಗರಿಗೆ ದೊರೆತ ನೆರಳಿನ ವ್ಯವಸ್ಥೆ!

| Published : Feb 20 2024, 01:45 AM IST

ಸಾರಾಂಶ

ಹಂಪಿ ಪ್ರವಾಸಿಗರಿಗೆ ಬೇಕಿದೆ ನೆರಳಿನ ವ್ಯವಸ್ಥೆ! ಎಂಬ ಶೀರ್ಷಿಕೆ ಹಾಗೂ ಉಪ ಶೀರ್ಷಿಕೆಯಡಿಯಲ್ಲಿ ಕನ್ನಡಪ್ರಭ ಫೆ. 12ರಂದು ವಿಶೇಷ ವರದಿ ಪ್ರಕಟಿಸಿತ್ತು.

ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇವಾಲಯದ ಬಳಿ ಬ್ಯಾಟರಿಚಾಲಿತ ವಾಹನಗಳಿಗೆ ಕಾಯುವ ದೇಶ- ವಿದೇಶಿ ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಲ್ಪಿಸಿದೆ. ಈ ಮೂಲಕ ಪ್ರವಾಸಿಗರಿಗೆ ಪ್ರಾಧಿಕಾರ ಅನುಕೂಲ ಮಾಡಿದೆ.

ಹಂಪಿ ಪ್ರವಾಸಿಗರಿಗೆ ಬೇಕಿದೆ ನೆರಳಿನ ವ್ಯವಸ್ಥೆ! ಎಂಬ ಶೀರ್ಷಿಕೆ ಹಾಗೂ ಉಪ ಶೀರ್ಷಿಕೆಯಡಿಯಲ್ಲಿ ಕನ್ನಡಪ್ರಭ ಫೆ. 12ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆಯುಕ್ತ ನೋಂಗ್ಝಾಯ್‌ ಮಹಮ್ಮದ್ ಅಲಿ ಅಕ್ರಮ್‌ ಶಾ ಅವರು ಆಸ್ಥೆ ವಹಿಸಿ ಹಂಪಿ ವಿಜಯ ವಿಠ್ಠಲ ದೇವಾಲಯದ ಬಳಿ ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಪಕ್ಕದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಇರುವುದರಿಂದ ದೇಶ, ವಿದೇಶಿ ಪ್ರವಾಸಿಗರಿಗೆ ಅನುಕೂಲ ಆಗಲಿದೆ. ಇನ್ನೂ ಹಿರಿಯರು, ಮಕ್ಕಳು, ಮಹಿಳೆಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಮಾಡಲಾಗಿದೆ. ಇದರಿಂದ ಪ್ರವಾಸಿಗರು ಬ್ಯಾಟರಿ ಚಾಲಿತ ವಾಹನ ಬರುವವರೆಗೂ ವಿಶ್ರಾಂತಿ ಪಡೆಯಬಹುದು.

ಹಂಪಿ ಉತ್ಸವದ ಬಳಿಕ ಹಂಪಿಗೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ. ಬಿಸಿಲನ್ನು ಲೆಕ್ಕಿಸದೇ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರು ಟಿಕೆಟ್ ಪಡೆದರೂ ಬ್ಯಾಟರಿ ಚಾಲಿತ ವಾಹನಗಳಿಗೆ ಬಿಸಿಲಿನಲ್ಲೇ ಕಾಯುವ ಸ್ಥಿತಿ ಇತ್ತು. ಈ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಕನ್ನಡಪ್ರಭ ವರದಿಯ ಬಗ್ಗೆಯೂ ಪ್ರವಾಸಿಗರು ಹಾಗೂ ಸ್ಥಳೀಯರಿಂದಲೂ ಉತ್ತಮ ಮೆಚ್ಚುಗೆ ಬಂದಿದೆ.