ಸಾರಾಂಶ
ಕೃಷ್ಣ ಲಮಾಣಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಭಾರೀ ಪ್ರಮಾಣದಲ್ಲಿ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡದೇ ಪಾರ್ಕಿಂಗ್ ಟೆಂಡರ್ ಕರೆದಿದ್ದು, ಈಗ ಕೆಸರಿನಲ್ಲಿ ವಾಹನಗಳನ್ನು ನಿಲ್ಲಿಸಿದರೂ ಪ್ರವಾಸಿಗರು ಪಾರ್ಕಿಂಗ್ ಶುಲ್ಕ ಭರಿಸುವ ಸ್ಥಿತಿ ನಿರ್ಮಾಣಗೊಂಡಿದೆ.ವಿಜಯ ವಿಠಲ ದೇವಾಲಯಕ್ಕೆ ತೆರಳಲು ಗೆಜ್ಜಲ ಮಂಟಪದ ಬಳಿ ಪಾರ್ಕಿಂಗ್ ಮಾಡಲಾಗಿದೆ. ಬ್ಯಾಟರಿ ಚಾಲಿತ ವಾಹನಗಳನ್ನು ಏರಿ; ಕಲ್ಲಿನತೇರು ಸ್ಮಾರಕ, ಸಪ್ತಸ್ವರ ಮಂಟಪಗಳ ವೀಕ್ಷಣೆ ಮಾಡಬೇಕಿದೆ. ಆದರೆ, ಈ ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ಬಂದರೆ ಸಾಕು; ಮಳೆ ನೀರು ನಿಂತು ಕೆಸರುಮಯವಾಗುತ್ತಿದೆ. ಈ ಕೆಸರುಮಯವಾಗಿರುವ ಸ್ಥಳದಲ್ಲೇ ಅನಿವಾರ್ಯವಾಗಿ ವಾಹನಗಳನ್ನು ನಿಲುಗಡೆ ಮಾಡುವ ಸ್ಥಿತಿ ತಲೆದೋರಿದೆ.
ಇನ್ನು ಉಗ್ರ ನರಸಿಂಹ ಬಳಿಯೂ ಪಾರ್ಕಿಂಗ್ ಇದೆ. ಕಮಲ ಮಹಲ್ ಬಳಿಯೂ ಪುರಾತತ್ವ ಇಲಾಖೆ ಪಾರ್ಕಿಂಗ್‌ಗೆ ಜಾಗ ಗುರುತಿಸಿದೆ. ಈ ಸ್ಥಳವೂ ಕೆಸರುಮಯವಾಗುತ್ತಿದೆ. ಮಳೆ ನೀರಿನಲ್ಲೇ ವಾಹನಗಳನ್ನು ನಿಲುಗಡೆ ಮಾಡುವ ಸ್ಥಿತಿ ಇದೆ. ದೇಶ, ವಿದೇಶಿ ಪ್ರವಾಸಿಗರು ಈ ಪಾರ್ಕಿಂಗ್ ಸ್ಥಿತಿ ಕಂಡು ಮಮ್ಮಲ ಮರಗುವಂತಾಗಿದೆ.ಇನ್ನು ಮಹಾನವಮಿ ದಿಬ್ಬದ ಬಳಿಯೂ ಪಾರ್ಕಿಂಗ್ ವ್ಯವಸ್ಥೆ ಇದೆ. ಈ ನಾಲ್ಕು ಪಾರ್ಕಿಂಗ್‌ಗೆ ಒಂದೇ ಕಡೆ ಶುಲ್ಕ ವಿಧಿಸಬೇಕಿದೆ. ಆದರೆ, ಸರಿಯಾಗಿ ಸೂಚನಾ ಫಲಕಗಳನ್ನು ಅಳವಡಿಸದ್ದರಿಂದ; ಪ್ರವಾಸಿಗರು ನಾಲ್ಕು ಕಡೆಯೂ ಶುಲ್ಕ ಕೊಡುವಂತಾಗಿದೆ.
ಪಾರ್ಕಿಂಗ್ ಶುಲ್ಕ ಎಷ್ಟು?ಭಾರತೀಯ ಪುರಾತತ್ವ ಇಲಾಖೆ ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್‌ನಲ್ಲಿ ಟೆಂಡರ್ ಕರೆದು, ಗುತ್ತಿಗೆದಾರರೋರ್ವರಿಗೆ ಪಾರ್ಕಿಂಗ್ ಟೆಂಡರ್ ನೀಡಿದೆ. ಈ ಟೆಂಡರ್ ₹10 ಲಕ್ಷಕ್ಕೂ ಅಧಿಕವಿದೆ ಎಂದು ಪುರಾತತ್ವ ಇಲಾಖೆ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.
ತಲಾ ಒಂದು ಬಸ್ ₹60, ಮಿನಿ ಬಸ್‌ಗೆ ₹40, ಕಾರಿಗೆ ₹30, ಟಿಟಿ ವಾಹನಕ್ಕೆ ₹40 ಮತ್ತು ಬೈಕ್‌ಗೆ ₹10 ಶುಲ್ಕ ಪಡೆಯಲಾಗುತ್ತಿದೆ. ಶುಲ್ಕ ಭರಿಸಲು ನಾವು ಸಿದ್ಧ, ಕನಿಷ್ಠ ಸೌಲಭ್ಯ ಒದಗಿಸಬೇಕಲ್ವಾ? ಎಂಬುದು ಪ್ರವಾಸಿಗರ ಆಂಬೋಣವಾಗಿದೆ.ಸೈಕಲ್‌ಗೆ ₹5 ಶುಲ್ಕ?
ಇನ್ನು ಹಂಪಿಯಲ್ಲಿ ಮಾಲಿನ್ಯ ರಹಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದು ಹಂಪಿ ಪ್ರಾಧಿಕಾರ ಬ್ಯಾಟರಿ ಚಾಲಿತ ವಾಹನಗಳನ್ನು ಪರಿಚಯಿಸಿದೆ. ಇನ್ನು ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀತಿ ಕೂಡ ರೂಪಿಸಿವೆ. ಈ ಮಧ್ಯೆ ಪುರಾತತ್ವ ಇಲಾಖೆ ಮಾತ್ರ ದೇಶ, ವಿದೇಶಿ ಪ್ರವಾಸಿಗರು ಬಳಸುವ ಸೈಕಲ್‌ಗೂ ₹5 ಶುಲ್ಕ ಪಡೆಯಲು ಟೆಂಡರ್‌ನಲ್ಲಿ ತೋರಿಸಿದೆ.ಇನ್ನು ವಿರೂಪಾಕ್ಷೇಶ್ವರ ದೇವಾಲಯದ ಪಾರ್ಕಿಂಗ್ ಸ್ಥಳದ ಟೆಂಡರ್‌ನ್ನು ಧಾರ್ಮಿಕ ದತ್ತಿ ಇಲಾಖೆ ಕರೆದಿದೆ. ಇಲ್ಲೂ ಭಾರೀ ಪ್ರಮಾಣದಲ್ಲಿ ವಾಹನಗಳು ಬರುತ್ತಿರುವುದರಿಂದ ವ್ಯವಸ್ಥಿತವಾಗಿ ಪಾರ್ಕ್ ಮಾಡಲಾಗುತ್ತಿಲ್ಲ. ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಟ್ರಾಫಿಕ್ ಜಾಮ್ ತಪ್ಪಿಸಲು ಹರಸಾಹಸ ಪಡುವಂತಾಗಿದೆ.
ಹಂಪಿ ರಸ್ತೆಗಳಲ್ಲಿ ಗಿಡ-ಗಂಟೆ ಬೆಳೆದಿವೆ. ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಜಾಣ ಮೌನ ವಹಿಸುತ್ತಿರುವುದರಿಂದ; ದೇಶ, ವಿದೇಶಿ ಪ್ರವಾಸಿಗರ ಸುಗಮ ಓಡಾಟಕ್ಕೂ ತೊಂದರೆ ಆಗಿದೆ. ಹಂಪಿಯಲ್ಲಿ ಸೌಕರ್ಯ ಕಲ್ಪಿಸಬೇಕಾದ ಇಲಾಖೆಗಳೇ ವಿಮುಖವಾಗುತ್ತಿರುವುದರಿಂದ; ಪ್ರವಾಸಿಗರು ಪರದಾಡುವಂತಾಗಿದೆ.ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರಿಗೆ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಶುಲ್ಕ ಪಡೆಯಲಾಗುತ್ತಿದೆ. ಪಾರ್ಕಿಂಗ್ ಸ್ಥಳಗಳು ಕೆಸರುಮಯವಾಗಿದ್ದರೂ ಶುಲ್ಕ ಪಡೆಯುವುದನ್ನು ಮಾತ್ರ ನಿಲ್ಲಿಸಲಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎನ್ನುತ್ತಾರೆ ಪ್ರವಾಸಿಗ ರಾಮ್.
ಹಂಪಿ ಪಾರ್ಕಿಂಗ್ ಸಮಸ್ಯೆ ಕುರಿತು ಈಗಾಗಲೇ ಗಮನಕ್ಕೆ ಬಂದಿದೆ. ಈ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.;Resize=(128,128))
;Resize=(128,128))
;Resize=(128,128))