ಸಾರಾಂಶ
ಶೃಂಗೇರಿ: ಇಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ವಿಜಯನಗರ ಕಾಲದ ಗತವೈಭವ ನೆನಪಿಸುವಂತೆ ಪ್ರತಿ ವರ್ಷ ಸಂಪ್ರದಾಯದಂತೆ ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿ ದರ್ಬಾರ್ ದಸರೆಗೆ ವಿಶೇಷ ಮೆರಗು ನೀಡುತ್ತಿದೆ.
ಭಾನುವಾರ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ಶರನ್ನವರಾತ್ರಿ ಆರಂಭಗೊಂಡಿದ್ದು, ಸೋಮವಾರ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಶ್ರೀ ವಿಧುಶೇಖರ ಭಾರತೀ ತೀರ್ಥರು ಶಾರದಾಂಬೆಗೆ ನವರಾತ್ರಿಯ ವಿಶೇಷ ಮಹಾಪೂಜೆ ನೆರವೇರಿಸಿದರು. ಸುವರ್ಣಪುಷ್ಪ ಸಹಿತ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಾಮಂಗಳಾರತಿ ನೆರವೇರಿತು. ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು.ನವರಾತ್ರಿಯ ಮೊದಲ ದಿನವಾದ ಸೋಮವಾರ ಶ್ರೀ ಶಾರದಾಂಬೆಗೆ ಹಂಸವಾಹಿನಿಯಲಂಕಾರ ಮಾಡಲಾಗಿತ್ತು. ಸೃಷ್ಟಿಕರ್ತ ಬ್ರಹ್ಮನ ಶಕ್ತಿ ಪಡೆದು ಬ್ರಾಹ್ಮಿಯಾಗಿ ಬ್ರಹ್ಮನ ವಾಹನ ಹಂಸವನ್ನೇರಿ ವಿಜೃಂಬಿಸಿದ ಶಾರದೆಯ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು.
ಹಂಸ ಶೃಂಗೇರಿ ಮಠದ ಅಧಿಕೃತ ಮುದ್ರೆ. ಹಿಂದೆ ಶೃಂಗೇರಿ ಧರ್ಮ ಸಂಸ್ಥಾನವಾಗಿದ್ದಾಗ ಹಂಸಧ್ವಜ ಹೊಂದಿತ್ತು. ಹಸಿರು ವರ್ಣದ ಧ್ವಜದಲ್ಲಿ ಹಂಸಚಿನ್ಹೆ ಇರುವ ಧ್ವಜವನ್ನು ನವರಾತ್ರಿಯ ಮೊದಲ ದಿನ ಆರೋಹಣ ಮಾಡಲಾಗುತ್ತಿತ್ತು. ಹಂಸವಾಹಿನಿಯಾಗಿ ಶಾರದೆ ಕರದಲ್ಲಿ ಕಮಂಡಲ, ಅಕ್ಷರ ಮಾಲೆ, ಪುಸ್ತಕ ಪಾಶ ಮತ್ತು ಚಿನ್ಮುದ್ರೆ ಧರಿಸಿ ಭಕ್ತರನ್ನು ಅನುಗ್ರಹಿಸಿದಳು.ನವರಾತ್ರಿಯ ಅಂಗವಾಗಿ ವೈವಿಧ್ಯಮಯ ಬಣ್ಣದ ಹೂವುಗಳಿಂದ ಸಾಲಂಕೃತಗೊಂಡ ಶಾರದೆಯ ಸನ್ನಿಧಿಯಲ್ಲಿ ವೇದಗಳ ಪಾರಾಯಣ, ಪ್ರಸ್ಥಾನತ್ರಯ ಭಾಷ್ಯ, ದುರ್ಗಾ ಸಪ್ತಶತಿ ಪಾರಾಯಣ, ಲಲಿತೋಪಾಖ್ಯಾನ, ನವಾಹರಣ ಪೂಜೆ, ಸುವಾಸಿನಿ ಪೂಜೆ ಸಹಿತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು.
ರಾಜಬೀದಿ ಉತ್ಸವ ಪ್ರಾರಂಭ:ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯಲಿರುವ ರಾಜಬೀದಿ ಉತ್ಸವ ಸೋಮವಾರದಿಂದ ಆರಂಭಗೊಂಡಿತು. ಶ್ರೀ ಶಾರದೆಯ ಉತ್ಸವ ಮೂರ್ತಿಯನ್ನು ಸಾಲಂಕೃತವಾದ ರಥದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಉತ್ಸವ ಸಾಗಿತು.
ಶ್ರೀಮಠದ ಆನೆಗಳು, ಅಶ್ವಗಳು, ವೇದ, ವಾದ್ಯಗೋಷ್ಠಿಗಳು, ಸ್ತಬ್ಧಚಿತ್ರಗಳು, ಭಜನಾ ತಂಡಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿತು. ತಾಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ದಿನಕ್ಕೊಂದರಂತೆ ಪಾಲ್ಗೊಳ್ಳುತ್ತಿದ್ದು, ಮೊದಲ ದಿನದ ರಾಜಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಂಡಿದ್ದರು.ಶ್ರೀಮಠದ ಆವರಣದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನವರಾತ್ರಿಯ 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಮಹೋತ್ಸವದಲ್ಲಿ ಸೋಮವಾರದ ಮೊದಲ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಧುಷಿ ಶ್ರೀಮತಿ ಶಿವಪ್ರಿಯ ರಾಮಸ್ವಾಮಿ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು.
ಮಂಗಳವಾರ ಶಾರದಾಂಬೆಗೆ ಬ್ರಾಹ್ಮಿ ಅಲಂಕಾರ ನಡೆಯಲಿದೆ. ಸಂಜೆಯ ರಾಜಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನೈನ ವಿಧುಷಿ ಶ್ರೀಮತಿ ಸವಿತಾ ಶ್ರೀರಾಮ್ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.