ಸಾರಾಂಶ
ಮಾರುತಿ ಶಿಡ್ಲಾಪೂರ
ಹಾನಗಲ್ಲ: ಶ್ರದ್ಧಾ ಭಕ್ತಿಯ ಹಾನಗಲ್ಲ ಗ್ರಾಮದೇವಿ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಾ. 18ರಂದು ದೇವಿಯ ಭವ್ಯ ಮೆರವಣಿಗೆ ರಾತ್ರಿಯಿಡೀ ನಡೆಯುವುದಲ್ಲದೆ, ದೇಶ- ವಿದೇಶಗಳಿಂದಲೂ ದೇವಿಯ ಭಕ್ತರು ಪಾಲ್ಗೊಳ್ಳುತ್ತಿರುವುದು ಬಹುವಿಶೇಷ. ಮಾ. 18ರಿಂದ 26ರ ವರೆಗೆ ಹಾನಗಲ್ಲಿನಲ್ಲಿ ಹಬ್ಬದ ಸಂಭ್ರಮ ನಡೆಯಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ದೇಶದ ಮೂಲೆ- ಮೂಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಮಾದರಿಯಲ್ಲಿ ಧಾರ್ಮಿಕ ಪದ್ಧತಿಗಳು ನಡೆಯಲಿದೆ. ಈಗಾಗಲೇ ವಿವಿಧ ಆಟಗಳ ಅಮ್ಯೂಸ್‌ಮೆಂಟ್, ಬೃಹತ್ ಸೆಟ್‌ಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ. ಜಾತ್ರೆ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಶ್ರದ್ಧಾ ಭಕ್ತಿಯಿಂದ ಎಲ್ಲ ಧಾರ್ಮಿಕ ಕಾರ್ಯಗಳು ನಡೆದಿವೆ. ಜಾತ್ರೆ ನಡೆಯುವ ಪ್ರದೇಶದಲ್ಲಿ ಎಲ್ಲೆಡೆಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಶಾಂತ, ಸುವ್ಯವಸ್ಥಿತ ಜಾತ್ರೆಗೆ ಸಕಲ ಸಿದ್ಧಗೊಂಡಿದೆ. ಮೂಲತಃ ಹಳೆಕೋಟೆ ಎಂಬ ನಾಮದಿಂದ ಕಂಡುಬರುವ ಈ ಊರು ಈಗ ಹಾನಗಲ್ಲ ಎಂದಾಗಿದೆ. ಹಲವು ದಶಕಗಳ ಹಿಂದೆ ಹಳೆಕೋಟಿ ಎಂಬ ಹೆಸರು ಪಡೆದಿತ್ತು. ಇಂದಿಗೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಹಳೇಕೋಟೆ ಎಂದೇ ಮುಂದುವರಿದಿದೆ. ಒಂದೊಮ್ಮೆ ಮಾರಕ ರೋಗವೊಂದು ಹಳೆಕೋಟೆ ಗ್ರಾಮವನ್ನು ಕಾಡಿದಾಗ ಅಲ್ಲಿಂದ ಜನರು ಪಕ್ಕದ ಈ ಹಾನಗಲ್ಲ ಪ್ರದೇಶಕ್ಕೆ ವಲಸೆ ಬಂದು ವಾಸಿಸಲಾರಂಭಿಸಿದರು. ಹಳೇಕೋಟಿಯಲ್ಲಿದ್ದ ದ್ಯಾಮವ್ವ ದೇವಿಯನ್ನೂ ತಮ್ಮೊಂದಿಗೆ ಕರೆತಂದು ಇಲ್ಲಿಯೇ ಪ್ರತಿಷ್ಠಾಪಿಸಿದರು. ಆಗ ಜಾತ್ರೆಯನ್ನೂ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಜಾತ್ರೆ ನಿಂತು ಹೋಗಿತ್ತು. ಅದನ್ನು 1980ರಲ್ಲಿ ಮತ್ತೆ ಸಿ.ಎಂ. ಉದಾಸಿ ಅವರ ನೇತೃತ್ವದಲ್ಲಿ ಪುನರಾರಂಭಗೊಂಡಿತು. 9 ಜಾತ್ರೆಗಳು ಅವರ ಅಧ್ಯಕ್ಷತೆಯಲ್ಲಿಯೇ ನಡೆದಿವೆ. ಈಗ ಹತ್ತನೆ ಜಾತ್ರೆ ಸಂಭ್ರಮಗೊಳ್ಳುತ್ತಿದೆ. ಜಾತ್ರಾ ಸಮಿತಿ ಕಳೆದ 3 ತಿಂಗಳಿಂದ ಹಬ್ಬದ ಸಿದ್ಧತೆ ಕೈಗೊಂಡು ಸುವ್ಯವಸ್ಥಿತ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿದೆ. ಹಾನಗಲ್ಲ ಗ್ರಾಮದೇವಿಯನ್ನು ಶಿರಸಿ ಮಾರಿಕಾಂಬೆಯ ಸಹೋದರಿ ಎಂಬ ಪ್ರತೀತಿ ಹೊಂದಿರುವ ಹಾನಗಲ್ಲ ದ್ಯಾಮವ್ವಳನ್ನು ಕಳ್ಳರು ಕದ್ದೊಯ್ದು ಆಭರಣಗಳನ್ನು ತೆಗೆದುಕೊಂಡು ಶಿರಸಿಯ ಕೆರೆಯೊಂದರಲ್ಲಿ ಬಿಸಾಡಿದ್ದರು ಎನ್ನಲಾಗಿದೆ. ಆಭರಣಗಳನ್ನು ಕದ್ದ ಕಳ್ಳರು ಹಲವು ರೀತಿಯ ತೊಂದರೆ ಅನುಭವಿಸಿ ದೇವಿಯ ಆಭರಣಗಳನ್ನು ಮರಳಿ ನೀಡಿದರು ಎನ್ನಲಾಗುತ್ತಿದೆ. ನಂತರ ಹಾನಗಲ್ಲ ಭಕ್ತರು ಮಾರಿಕಾಂಬೆಯಲ್ಲಿಗೆ ತೆರಳಿ ಪ್ರಾರ್ಥಿಸಿ ಮತ್ತೊಂದು ವಿಗ್ರಹ ತಯಾರಿಸಿ ದ್ಯಾಮವ್ವನನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ದೇವಿಯ ಉತ್ಸವ ದಿನದಿಂದ- ದಿನಕ್ಕೆ ಇಮ್ಮಡಿಸಿತು. ತಾಲೂಕಿನ ಹಸನಾಬಾದಿ ಗ್ರಾಮ ದ್ಯಾಮವ್ವನ ತವರೂರೆಂಬ ಪ್ರತೀತಿಯಿದೆ. ಮಾ. 18ರಂದು ರಾತ್ರಿಯಿಡೀ ದೇವಿಯ ರಥೋತ್ಸವ ಜರುಗಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ 19ರಂದು ಬೆಳಗ್ಗೆ ದೇವಿಯು ಪಾದಗಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಳ್ಳಲಿವೆ. ರಥೋತ್ಸವದ ತೇರನ್ನು ಬಣ್ಣ- ಬಣ್ಣದ ಧ್ವಜಗಳಿಂದ ಶೃಂಗರಿಸಲಾಗಿದೆ. ದೇವಿಯ ಮಂಟಪವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು, ಭಕ್ತರ ಮನಸೂರೆಗೊಳ್ಳುತ್ತಿದೆ. ಈ ಜಾತ್ರೆಗಾಗಿ ಎಲ್ಲರ ಮನೆಗಳಿಗೂ ದೂರದೂರುಗಳಿಂದ ಬಂಧುಗಳು ಆಗಮಿಸುತ್ತಿದ್ದು, ಇಡೀ ಊರಿಗೆ ಊರೆ ಹಬ್ಬದ ವಾತಾವರಣದಿಂದ ಕೂಡಿದೆ. ಶೃಂಗಾರ: ಇಡೀ ಊರು ವಿದ್ಯುದ್ದೀಪಗಳು, ಬಾವುಟಗಳಿಂದ ಸಿಂಗಾರಗೊಂಡಿದೆ. ಬಹುತೇಕ ಮನೆಗಳ ಬಾಗಿಲಗಳಲ್ಲಿ ಕೂಡ ದೀಪ ಬಣ್ಣಗಳಿಂದ ಸಿಂಗಾರಗೊಳಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ದೀಪ ಕಂಬಗಳು ಕೇಸರಿಮಯವಾಗಿ ಸಿಂಗಾರಗೊಂಡಿವೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ನಮ್ಮೂರ ಹಬ್ಬ ಗ್ರಾಮದೇವಿ ಜಾತ್ರೆಗೆ ಸಂಭ್ರಮ ಮಡುಗಟ್ಟಿದೆ. ಹಬ್ಬದ ವಿಶೇಷತೆಗೆ ಭವ್ಯ ಅಮ್ಯೂಸ್‌ಮೆಂಟ್ ಸಿದ್ಧಗೊಂಡಿದೆ. ವ್ಯಾಪಾರಕ್ಕಾಗಿ ಹಲವು ಬಗೆಯ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿದೆ. ವಿಶೇಷವಾಗಿ ಪುರಸಭೆ, ಹೆಸ್ಕಾಂ, ಪೊಲೀಸ್ ಇಲಾಖೆಗಳು ಹೆಚ್ಚು ಕಾಳಜಿಯಿಂದ ಎಲ್ಲ ಸುವ್ಯವಸ್ಥೆಗಾಗಿ ಕೆಲಸ ಮಾಡಿವೆ. ನೂತನ ಮಂದಿರ: ಗ್ರಾಮದೇವಿ ನೂತನ ಕಲ್ಲಿನ ಮಂಟಪ ಭವ್ಯ ಮಂದಿರವಾಗಿ ರೂಪುಗೊಳ್ಳುತ್ತಿದೆ. ಇದು ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ಬೇಕಾಗಿದೆ. ಈ ಜಾತ್ರೆಯ ನಂತರ ಮತ್ತೆ ಮಂದಿರ ಪೂರ್ಣಗೊಳಿಸುವ ಕಾರ್ಯಕ್ಕೆ ಸಮಿತಿ ಸಿದ್ಧತೆ ನಡೆಸುತ್ತಿದೆ.ನಮ್ಮೂರ ಹಬ್ಬ: ಐತಿಹಾಸಿಕ ಶ್ರೇಷ್ಠತೆ, ಸಾಂಸ್ಕೃತಿಕ ಹಿರಿಮೆಯ ಹಾನಗಲ್ಲಿನಲ್ಲಿ ಈ ನಾಡಿನ ಶ್ರದ್ಧೆಯ ಗ್ರಾಮದೇವಿ ಜಾತ್ರೆ ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಇದಕ್ಕಾಗಿ ಜಾತ್ರಾ ಸಮಿತಿ, ತಾಲೂಕು ಆಡಳಿತ, ಪುರಸಭೆ ಆಡಳಿತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಅತ್ಯಂತ ಭಕ್ತಿ ಭಾವದೊಂದಿಗೆ ವಿಜೃಂಭಣೆಯ ಅರ್ಥಪೂರ್ಣ ನಮ್ಮೂರ ಹಬ್ಬ ಸಂಭ್ರಮಗೊಳ್ಳಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಸಹಕಾರ ಮುಖ್ಯ: ನಮ್ಮೂರ ಗ್ರಾಮದೇವಿ ಜಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ನಡೆದರೂ ನಿನ್ನೆ ಮೊನ್ನೆಯೇ ಸಂಭ್ರಮದ ಹಬ್ಬ ನಡೆದಂತಿರುತ್ತದೆ. ಅಷ್ಟರ ಮಟ್ಟಿಗೆ ಹಬ್ಬದ ವೈಭವ ಭಕ್ತರ ಮನದಲ್ಲಿ ನೆಲೆಯೂರಿರುತ್ತದೆ. ಹಬ್ಬಕ್ಕಾಗಿ ಎಲ್ಲರ ಸಹಕಾರ ಇಲ್ಲಿ ಅತ್ಯಂತ ಮುಖ್ಯ ಎಂದು ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನರ ತಿಳಿಸಿದರು.ದೇವಿಯ ಕೃಪೆಗೆ ಪಾತ್ರರಾಗೋಣ: ನಮ್ಮೂರ ಹಬ್ಬ ಭಕ್ತಿ ಸಂಭ್ರಮದಿಂದ ನಡೆಯಬೇಕೆಂಬುದೇ ಎಲ್ಲರ ಮಹದಾಸೆ. ಹಿರಿ ಕಿರಿಯರೆಲ್ಲರ ಪರಿಶ್ರಮ. ಒಂದಾಗಿ ಸೇವೆ ಸಲ್ಲಿಸುತ್ತಿರುವುದರ ಫಲವೇ ಈ ಹಬ್ಬದ ಯಶಸ್ಸು. ಗ್ರಾಮದೇವಿ ಜಾತ್ರೆ ಹಬ್ಬ ಪ್ರತಿ ಮನೆ ಮನೆಯ ಹಬ್ಬವಾಗಿದೆ. ಎಲ್ಲ ಮನೆಗಳಲ್ಲಿ ಸಂಭ್ರಮ ಮಡುಗಟ್ಟಿದೆ. ಭಕ್ತಿ ಉತ್ಸಾಹದಿಂದ ನಡೆಯುತ್ತಿರುವ ಹಬ್ಬಕ್ಕೆ ಎಲ್ಲರೂ ಬನ್ನಿ. ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ತಿಳಿಸಿದರು.