ಹಾನಗಲ್ಲ: ಖಾಸಗಿ ಕಟ್ಟಡಗಳಲ್ಲಿ 66 ಅಂಗನವಾಡಿಗಳು!

| Published : Jul 17 2024, 12:56 AM IST

ಸಾರಾಂಶ

ರಾಜ್ಯದ ಅಂಗನವಾಡಿಗಳಲ್ಲಿ ಇದೇ ವರ್ಷದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲು ದಿನಗಣನೆ ಆರಂಭವಾಗಿದೆ. ಆದರೆ ತಾಲೂಕಿನ ೩೩೫ ಅಂಗನವಾಡಿಗಳ ಪೈಕಿ ೬೬ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ರಾಜ್ಯದ ಅಂಗನವಾಡಿಗಳಲ್ಲಿ ಇದೇ ವರ್ಷದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲು ದಿನಗಣನೆ ಆರಂಭವಾಗಿದೆ. ಆದರೆ ತಾಲೂಕಿನ ೩೩೫ ಅಂಗನವಾಡಿಗಳ ಪೈಕಿ ೬೬ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

೩೩೫ ಅಂಗನವಾಡಿ ಕೇಂದ್ರಗಳಲ್ಲಿ ೨೬೯ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ವಿವಿಧ ಗ್ರಾಮಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ೩೯ ಅಂಗನವಾಡಿಗಳು ನಡೆಯುತ್ತವೆ. ಸರಕಾರಿ ಶಾಲಾ ಕಟ್ಟಡಗಳಲ್ಲಿ ೧೦ ಅಂಗನವಾಡಿಗಳು, ಇತರೆ ಸರಕಾರಿ ಕಟ್ಟಡಗಳಲ್ಲಿ ೧೭ ಅಂಗನವಾಡಿಗಳು ನಡೆಯುತ್ತಿವೆ.

21 ಹುದ್ದೆ ಖಾಲಿ: ಹುದ್ದೆ ಖಾಲಿ ಇರುವ ತಾಲೂಕಿನ ೨೧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ನೇಮಕ ಆಗಿಲ್ಲ. ಈ ಅಂಗನವಾಡಿಗಳಿಗೆ ನೆರೆಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರನ್ನೇ ದಿನ ಬಿಟ್ಟು ದಿನಕ್ಕೆ ನೇಮಿಸಲಾಗಿದೆ. ಒಬ್ಬೊಬ್ಬ ಕಾರ್ಯಕರ್ತೆಯರು ಎರಡು ಅಂಗನವಾಡಿ ನೋಡಿಕೊಳ್ಳುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಅಂಗನವಾಡಿ ಸಹಾಯಕರೆ ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ. ಈಗ ೯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎನ್ನಲಾಗುತ್ತಿದ್ದರೂ ಕೂಡ, ಉಳಿದ ೧೩ ಅಂಗನವಾಡಿಗಳಿಗೆ ಕಾರ್ಯಕರ್ತರ ಆಯ್ಕೆಗೆ ವಿಳಂಬವೇಕೆ ಎಂಬ ಸಂಗತಿ ಚರ್ಚೆಯಲ್ಲಿದೆ. ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳೂ ಸಹ ಖಾಲಿ ಇವೆ. ಇರುವ ಸಿಬ್ಬಂದಿಯೇ ಈ ಕಾರ್ಯವನ್ನೂ ನಿರ್ವಹಿಸಬೇಕಾಗಿದೆ.ಮೊಬೈಲ್ ಪೂರೈಕೆ: ಪೋಷಣ್ ಯೋಜನೆ ಅಭಿಯಾನದಡಿಯಲ್ಲಿ ಈಗ ಮತ್ತೆ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್ ನೀಡುವ ಕಾರ್ಯಕ್ಕೆ ಇಲಾಖೆ ಸಜ್ಜಾಗುತ್ತಿದೆ. ಆಗಲೇ ಇಲಾಖೆಯಿಂದ ತಾಲೂಕಿಗೆ ೩೩೫ ಮೊಬೈಲ್‌ಗಳ ಪೂರೈಕೆ ಆಗಿದೆ. ಕಾರ್ಯಕರ್ತೆಯರಿಗೆ ಹಂಚುವುದೊಂದೇ ಈಗ ಬಾಕಿ ಇದೆ. ಮೊಬೈಲ್‌ನಲ್ಲಿಯೇ ಮಕ್ಕಳ ಹಾಜರಾತಿ, ಮಕ್ಕಳ ತೂಕ ಸೇರಿದಂತೆ ವಿವಿಧ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಆಯಾ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿಯರು ಹಾಗೂ ಬಾಣಂತಿಯರ ಮಾಹಿತಿಯೂ ಕೂಡ ಮೊಬೈಲ್‌ನಲ್ಲಿ ಅಳವಡಿಸುವ ಕಾರ್ಯ ಇಲ್ಲಿಂದಲೇ ಆಗುತ್ತದೆ.

ಪೌಷ್ಟಿಕ ಆಹಾರ ಬಿತರಣೆ: ೬ ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಗೆ ಸಹಕಾರಿಯಾಗುವಂತೆ, ಮಗುವಿನ ದೈಹಿಕ ಮಾನಸಿಕ ಸಾಮಾಜಿಕ ಬೆಳವಣಿಗೆಗೆ ಸರಿಯಾದ ಅಡಿಪಾಯ ಹಾಕಬೇಕಾದ ಶಿಶು ಆಭಿವೃದ್ಧಿ ಇಲಾಖೆಗೆ ಒಂದು ಪರಿಣಾಮಕಾರಿಯಾದ ಜವಾಬ್ದಾರಿ ಇದೆ. ಈ ಮಕ್ಕಳ ಮನೆಗೆ ಪೌಷ್ಟಿಕ ಆಹಾರ, ಬೆಲ್ಲ, ಹಾಲಿನ ಪುಡಿ, ಸಕ್ಕರೆಯನ್ನು ತಲುಪಿಸಲಾಗುತ್ತಿದೆ. ಈ ಕಾರ್ಯ ನಿರ್ವಹಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಎಲ್ಲ ಅಂಗನವಾಡಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಇಲಾಖೆಯ ಅಭಿಪ್ರಾಯವಾಗಿದೆ.ಆಗಸ್ಟ್‌ ತಿಂಗಳೊಳಗೆ ಖಾಲಿ ಇರುವ ಎಲ್ಲ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಗತ್ಯವಿರುವ ಅಂಗನವಾಡಿ ಕಟ್ಟಡಗಳಿಗಾಗಿಯೂ ಬೇಡಿಕೆ ಸಲ್ಲಿಸಲಾಗಿದ್ದು, ಶೀಘ್ರ ಎಲ್ಲ ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆ ಹಾನಗಲ್ಲ ಶಿಶು ಅಭಿವೃದ್ಧಿ ಅಧಿಕಾರಿ ಗಣೇಶ ಲಿಂಗನಗೌಡ್ರ ಹೇಳಿದರು.