ಹಾನಗಲ್ಲ: ಕುಡಿಯುವ ನೀರಿಗೆ ಕೊಳಚೆ ನೀರು ಸೇರ್ಪಡೆ!

| Published : May 25 2024, 12:48 AM IST

ಸಾರಾಂಶ

ಹಾನಗಲ್ಲ ಪಟ್ಟಣದ ೩೦ ಸಾವಿರ ಜನರಿಗೆ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಸೇರ್ಪಡೆ ಆಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪಟ್ಟಣದ ೩೦ ಸಾವಿರ ಜನರಿಗೆ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಸೇರ್ಪಡೆ ಆಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ತಿಂಗಳ ಹಿಂದೆ ಧರ್ಮಾಜಲಾಶಯದಿಂದ ಪಟ್ಟಣದ ಪಕ್ಕದ ಕುಡಿಯುವ ನೀರು ಸಂಗ್ರಹದ ಮೂಲವಾದ ಆನಿಕರೆಗೆ ನೀರು ಹರಿಸಿ ಇನ್ನೂ ಮೂರು ತಿಂಗಳಿಗಾಗುವಷ್ಟು ಕಾದಿರಿಸಿದ್ದಾರೆ. ಈಗ ಮಳೆಯೂ ಬೀಳುತ್ತಿರುವುದರಿಂದ ಪುರಸಭೆ ಕುಡಿಯುವ ನೀರಿನ ವಿಷಯದಲ್ಲಿ ಒಂದಷ್ಟು ನಿರಾಳವಾಗಿದೆ.

ಆದರೆ, ಮಳೆಯಿಂದಾಗಿ ಗಟಾರಗಳು ತುಂಬಿ ಅಲ್ಲಲ್ಲಿ ಕಟ್ಟಿ ರಸ್ತೆಗೆ ನೀರು ನುಗ್ಗುತ್ತಿದೆ. ಅಷ್ಟೇ ಅಲ್ಲದೆ ಪಟ್ಟಣದ ಕುಡಿಯುವ ನೀರಿನ ಪೈಪ್‌ಲೈನಿಗೆ ಅಲ್ಲಲ್ಲಿ ಇರುವ ನೀರು ಬಿಡುವ ವಾಲ್ ಮೂಲಕ ಕೊಳಚೆ ನೀರು ಸೇರುತ್ತಿದೆ. ೮೦ ಕಿಮೀ ಉದ್ದದ ಪೈಪ್‌ಲೈನ್‌ ಇದು. ಅಲ್ಲಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಪೈಪ್‌ಲೈನ್ ಒಡೆದು, ಸರಿಯಾಗಿ ದುರಸ್ತಿಯಾಗದೇ ಇರುವುದರಿಂದ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿ ಪಟ್ಟಣ ವಾಸಿಗಳಿಗೆ ಆಗಾಗ ಆಸ್ಪತ್ರೆ ಬಾಗಿಲು ತಟ್ಟುವಂತೆ ಮಾಡಿದೆ.

ಅನಧಿಕೃತ ನಲ್ಲಿಗಳ ಕಾಟ:

ಪಟ್ಟಣದಲ್ಲಿ ಸಾರ್ವಜನಿಕರ ಮನೆಗಳಿಗೆ ಹಾಕಿಸಿಕೊಂಡ ೪೫೮೦ ನೀರಿನ ನಳಗಳಿವೆ. ೩೦ಕ್ಕೂ ಅಧಿಕ ಸಾರ್ವಜನಿಕರ ನಳಗಳಿವೆ. ೫೦೦ರಷ್ಟು ಅನಧಿಕೃತ ನಳಗಳೂ ಇವೆ ಎನ್ನಲಾಗಿದೆ. ನಿತ್ಯ ನೀರು ಹರಿಸಲು ಪಟ್ಟಣದಲ್ಲಿ ೧೦೦ ವಾಲ್‌ಗಳಿವೆ. ಇಷ್ಟೆಲ್ಲ ನೀರಿಗಾಗಿ ಆನಿಕೆರೆ ಹಾಗೂ ೧೧೨ ಕೊಳವೆ ಬಾವಿಗಳಿವೆ. ಪುರಸಭೆಯ ೫ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಎರಡು ಮಾತ್ರ ಕೆಲಸ ಮಾಡುತ್ತಿವೆ. ಖಾಸಗಿಯ ೧೦ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಸ್ವಚ್ಛತೆಗಾಗಿ ಕಾರ್ಯ ನಿರ್ವಹಿಸಲು ಕಾರ್ಮಿಕರ ಕೊರತೆ ಇದೆ. ಆದರೆ, ಕುಡಿಯುವ ನೀರು ಒದಗಿಸಲು ನೌಕರರ ಕೊರತೆ ಇಲ್ಲ.

ಸರಕಾರ ನಿತ್ಯವೂ ಕುಡಿಯಲು ಹರಿಸುವ ನೀರನ್ನು ಪರೀಕ್ಷಿಸಿ ಶುದ್ಧ ಎಂದು ಖಾತ್ರಿ ಮಾಡಿಕೊಂಡು ಹರಿಸಲು ಕಟ್ಟಪ್ಪಣೆ ಮಾಡಿದೆ. ಆದರೂ ಹಾನಗಲ್ಲ ಪಟ್ಟಣದಲ್ಲಿ ಕುಡಿಯುವ ನೀರು ಹರಿಸುವ ಪೈಪ್‌ಲೈನ್ ಹಾಗೂ ವಾಲ್‌ಗಳಿಂದ ನೀರು ಹರಿಸುವ ಸ್ಥಳಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕಾಮಗಾರಿಗೆ ಒಳಪಡಿಸುವ ಅಗತ್ಯವೂ ಇದೆ.

ಸಾರ್ವಜನಿಕರು ಕೂಡ ಎಲ್ಲೆಲ್ಲಿ ಗಟಾರ ಸೇರಿದಂತೆ ವಿವಿಧ ಕೊಳಚೆ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರುವುದು ಕಂಡು ಬಂದರೆ ಕೂಡಲೇ ಪುರಸಭೆಗೆ ತಿಳಿಸಿದಲ್ಲಿ ಅಂತಹದ್ದನ್ನು ಕೂಡಲೇ ದುರಸ್ತಿಗೊಳಿಸಲು ಸಾಧ್ಯವಾಗುತ್ತದೆ. ಈಗ ಕಾಲರಾದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವುದರಿಂದ ಈಗಲೇ ಶುದ್ಧ ಕುಡಿಯುವ ನೀರಿಗಾಗಿ ಪುರಸಭೆ ಹಾಗೂ ಸಾರ್ವಜನಿಕರೂ ಎಚ್ಚೆತ್ತುಕೊಳ್ಳವ ಅಗತ್ಯವಿದೆ. ರೋಗ ಉಲ್ಬಣಗೊಂಡು ಪರಿತಪಿಸುವುದಕ್ಕಿಂತ ಮುಂಜಾಗ್ರತೆಗೆ ಪುರಸಭೆ ಹಾಗೂ ಸಾರ್ವಜನಿಕರು ಜಾಗೃತವಾಗಬೇಕಾಗಿದೆ.

ಕುಡಿಯುವ ನೀರು ಒದಗಿಸುವಲ್ಲಿ ವ್ಯತ್ಯಯವಾಗದಂತೆ ನಮ್ಮ ಸಿಬ್ಬಂದಿ ಕಾಳಜಿ ವಹಿಸುತ್ತಿದ್ದಾರೆ. ಶುದ್ಧ ನೀರು ಒದಗಿಸುವಲ್ಲಿಯೂ ನಮಗೆ ಕಾಳಜಿ ಇದೆ. ಎಲ್ಲಿಯಾದರೂ ಕೊಳಚೆ ನೀರು ಪೈಪ್‌ಲೈನ್‌ಗೆ ಸೇರುತ್ತಿದೆ ಎಂದು ಕಂಡುಬಂದಲ್ಲಿ ಕೂಡಲೇ ಪುರಸಭೆಯ ಗಮನಕ್ಕೆ ತರಲು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ತಕ್ಷಣ ದುರಸ್ತಿ ಮಾಡಲಾಗುತ್ತದೆ ಹಾನಗಲ್ಲ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳುತ್ತಾರೆ.

ಪ್ರತಿದಿನ ಎಲ್ಲ ಕಡೆಗೆ ಹೋಗಿ ಪೈಪ್ ಲೈನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಸ್ವಚ್ಛತೆ ಸಿಬ್ಬಂದಿಯೂ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಕಡೆ ನಿತ್ಯ ಕೆಲಸದಲ್ಲಿ ಗಮನ ಇಡುತ್ತಾರೆ. ಎಲ್ಲಿಯಾದರೂ ಪೈಪ್‌ಲೈನ್‌ ಲೀಕೇಜ್‌ ಇದ್ದರೆ ಸಾರ್ವಜನಿಕರು ತಿಳಿಸುತ್ತಾರೆ. ನಾವು ತಕ್ಷಣ ಸರಿಪಡಿಸುತ್ತೇವೆ. ಪ್ರತಿನಿತ್ಯ ಶುದ್ಧವಾಗಿರುವುದನ್ನು ಪರೀಕ್ಷಿಸಿಯೇ ನೀರುಹರಿಸಲಾಗುತ್ತಿದೆ ಪುರಸಭೆ ಕಾಮಗಾರಿ ನಿರೀಕ್ಷಕ ಎಸ್‌.ಎಸ್‌. ಹಳೇಕೋಟಿ ಹೇಳುತ್ತಾರೆ.