ಸ್ವಂತ ಖರ್ಚಿನಲ್ಲಿ ಬರಿದಾದ ಕೆರೆ ಹೂಳೆತ್ತುತ್ತಿರುವ ಹಾನಗಲ್ಲ ರೈತರು

| Published : Apr 07 2024, 01:56 AM IST

ಸ್ವಂತ ಖರ್ಚಿನಲ್ಲಿ ಬರಿದಾದ ಕೆರೆ ಹೂಳೆತ್ತುತ್ತಿರುವ ಹಾನಗಲ್ಲ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ತಿಂಗಳಿಂದ ಮಳೆ ಇಲ್ಲದೆ ಬರಿದಾದ ಕೆರೆಯ ಹೂಳನ್ನು ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ತೆರವು ಮಾಡುತ್ತಿದ್ದಾರೆ.

ಮಾರುತಿ ಶಿಡ್ಲಾಪುರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಲವು ತಿಂಗಳಿಂದ ಮಳೆ ಇಲ್ಲದೆ ಬರಿದಾದ ಕೆರೆಯ ಹೂಳನ್ನು ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ತೆರವು ಮಾಡುತ್ತಿದ್ದಾರೆ!

ತಾಲೂಕಿನ ನರೇಗಲ್ಲ ಹಾಗೂ ವರ್ದಿ ಗ್ರಾಮಗಳ ರೈತರು ೩೭೦ ಎಕರೆ ವಿಸ್ತೀರ್ಣ ಹೊಂದಿದ ವರ್ದಿಯ ದೊಡ್ಡ ಕೆರೆಯ ಹೂಳು ತೆಗೆದು ಹೊಲಕ್ಕೆ ಹಾಕಿಕೊಳ್ಳುತ್ತಿದ್ದಾರೆ. ಬರುವ ವರ್ಷದಲ್ಲಾದರೂ ಕೆರೆ ತುಂಬಲಿ ಎಂಬುದು ರೈತರ ಆಶಯ.

ಜನ-ಜಾನುವಾರು ನೀರಿಗಾಗಿ ಪರಿತಪಿಸುವ ಸ್ಥಿತಿ ಹಾನಗಲ್ಲ ತಾಲೂಕಿನಲ್ಲಿದೆ. ಬರಿದಾದ ಕೆರೆ-ಕಟ್ಟೆಗಳು ಮೈದಳೆದು ನಿಂತಿವೆ. ಅದರಲ್ಲೂ ಹಾನಗಲ್ಲ ತಾಲೂಕಿನ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ನರೇಗಲ್ಲ ಕೆರೆ ನೀರನ್ನು ಅವಲಂಬಿಸಿ ನೂರಾರು ಎಕರೆ ಅಡಕೆ ತೆಂಗು ತೋಟ ಮಾಡಿದ್ದಾರೆ. ಈಗ ಕೊಳವೆಬಾವಿ ಅವಲಂಬಿಸಬೇಕಾಗಿದೆ. ಕೊಳವೆಬಾವಿಗಳು ಕೂಡ ನೀರಿಲ್ಲದೆ ಬತ್ತಿ ಹೋಗಿವೆ. ಹತ್ತಾರು ವರ್ಷಗಳಾಚೆ ವರ್ದಿ ಕೆರೆ ಬೇಸಿಗೆಯಲ್ಲಿಯೂ ನೀರುಣಿಸುವ ಶಕ್ತಿ ಹೊಂದಿತ್ತು. ಆದರೆ ನಿರಂತರ ಮಳೆ ಕೊರತೆಯಿಂದ ಈ ಕೆರೆ ನೀರಿಲ್ಲದೆ ಖಾಲಿ ಖಾಲಿ ಆಗುತ್ತಿದೆ. ವರ್ದಿ ಹಾಗೂ ನರೇಗಲ್ಲ ಗ್ರಾಮಗಳ ರೈತರು ಜೆಸಿಬಿಯಿಂದ ಖಾಲಿಯಾದ ಕೆರೆ ಹೂಳೆತ್ತುತ್ತಿದ್ದಾರೆ. ಕೆರೆಯ ಮಣ್ಣನ್ನು ತಮ್ಮ ಹೊಲಗಳಿಗೆ ಒಯ್ಯುತ್ತಿದ್ದಾರೆ. ಈ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಉದ್ಯೋಗ ಖಾತ್ರಿಯಲ್ಲಿ ಈ ಕೆರೆ ಹೂಳೆತ್ತುವ ಕಾರ್ಯ ನಡೆಯುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ. ಹೀಗಾಗಿ ನಾವೇ ಮಾಡುತ್ತಿದ್ದೇವೆ. ಕೆರೆಯಾದರೂ ಆಳವಾದರೆ ಹೆಚ್ಚು ನೀರು ತುಂಬಲು ಸಾಧ್ಯ ಎನ್ನುತ್ತಾರೆ. ಕೆರೆಗಳನ್ನು ಉಳಿಸುವ ಹಾಗೂ ನೀರು ತುಂಬಿಸುವ ಕೆಲಸ ಆಗಬೇಕಾಗಿದೆ ಎನ್ನುತ್ತಾರೆ.

ಪಕ್ಷಿಧಾಮ:

ಈ ಕೆರೆ ಪಕ್ಷಿಧಾಮವೂ ಹೌದು. ವಿದೇಶಗಳಿಂದ ಪಕ್ಷಿಗಳು ಬಂದು ಹಲವು ತಿಂಗಳು ಇಲ್ಲಿಯೇ ವಾಸ್ತವ್ಯ ಹೂಡಿ ಹೋಗುತ್ತಿದ್ದವು. ಈಗ ನೀರಿಲ್ಲದ ಕಾರಣ ಪಕ್ಷಿಗಳ ಆಗಮನ ಇಲ್ಲದಂತಾಗಿದೆ.

ಮುಳ್ಳು ಗಿಡ-ಗಂಟಿ: ಕೆರೆಯ ಹೂಳೆತ್ತದ ಕಾರಣ ಕೆರೆಯ ತುಂಬ ಮುಳ್ಳಿನ ಗಿಡಗಳು, ಕಂಟಿ ಜಾಲಿ ತುಂಬಿಕೊಂಡಿವೆ. ರೈತರು ಈ ಎಲ್ಲ ಗಿಡ-ಗಂಟಿಗಳನ್ನು ತೆಗೆಯುತ್ತಿದ್ದಾರೆ. ಮಳೆ ಬರುವ ಮೊದಲು ಸಾಧ್ಯವಾದಷ್ಟು ಮಣ್ಣನ್ನು ತೆಗೆದು ಕೆರೆ ತಗ್ಗುಗೊಳಿಸುವ ಕಾರ್ಯದಲ್ಲಿ ಮುಂದಾಗಿದ್ದಾರೆ.ಕೆರೆಯಲ್ಲಿ ನೀರಿದ್ದರೆ ಕೆರೆ ಇದ್ದು ಉಪಯೋಗ. ಅಂತರ್ಜಲವು ಹೆಚ್ಚುತ್ತದೆ. ಮಳೆ ನೀರು ಈ ಕೆರೆಯ ಮೂಲಕ ಸಂಗ್ರಹಿಸಲು ಸರ್ಕಾರಕ್ಕೆ ಮಾಡಿದ ಬೇಡಿಕೆ ಈಡೇರಿಲ್ಲ. ಅನಿವಾರ್ಯವಾಗಿ ನಾವೇ ಹೂಳೆತ್ತುತ್ತಿದ್ದೇವೆ ಎಂದು ರೈತ ನಾಗಪ್ಪ ಬಾರ್ಕಿ ಹೇಳಿದ್ದಾರೆ.

ರೈತರ ಜೀವನದಿಯಾದ ವರ್ದಿ ದೊಡ್ಡ ಕೆರೆ ಹೂಳೆತ್ತಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರೂ ಏನೂ ಪ್ರಯೋಜನ ಆಗಿಲ್ಲ. ಕಾಮಗಾರಿ ಮಾಡುವ ಒಂದೂ ವಿಶ್ವಾಸದ ಮಾತು ಆಡಲಿಲ್ಲ. ನಾವೇ ಸ್ವಂತ ಖರ್ಚಿನಲ್ಲಿ ಕೈಲಾದಷ್ಟು ಹೂಳೆತ್ತುತ್ತಿದ್ದೇವೆ ಎಂದು ರೈತ ಶೇಖಣ್ಣ ಕ್ಯಾತಪ್ಪನವರ ಹೇಳಿದ್ದಾರೆ.

ಈ ಕೆರೆ ಉದ್ಯೋಗ ಖಾತ್ರಿ ಅಡಿ ಹೂಳೆತ್ತಲು ಇಲಾಖೆ ಒಪ್ಪಿಗೆ ಬೇಕಾಗುತ್ತದೆ. ದೊಡ್ಡ ಕೆರೆಯಾಗಿದ್ದರಿಂದ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಬೇಕು. ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಬೇಕಾಗಿದ್ದರೂ ಕೇವಲ ೨೦ ಕಾರ್ಮಿಕರು ನರೆಗಾ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಾರ್ಮಿಕರು ಲಭ್ಯವಾದರೆ ಇಲಾಖೆ ಪರವಾನಗಿ ಪಡೆದು ಈ ಕೆರೆಯನ್ನು ಹೂಳೆತ್ತಲಾಗುವುದು ಎಂದು ನರೇಗಾ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಹೇಳಿದ್ದಾರೆ.