ರೋಗಿಗಳಿಂದ ಗಿಜಿಗುಡುತ್ತಿರುವ ಹಾನಗಲ್ಲ ಸರ್ಕಾರಿ ಆಸ್ಪತ್ರೆ

| Published : Jul 15 2024, 01:50 AM IST

ರೋಗಿಗಳಿಂದ ಗಿಜಿಗುಡುತ್ತಿರುವ ಹಾನಗಲ್ಲ ಸರ್ಕಾರಿ ಆಸ್ಪತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹೊರ, ಒಳ ರೋಗಿಗಳಿಂದ ಗಿಜಿಗುಡುತ್ತಿದೆ. ಸಿಬ್ಬಂದಿಯ ಕೊರತೆ ಕಾಡುತ್ತಿದೆ, ಇನ್ನೂ ನೂರು ಬೆಡ್ ಆಸ್ಪತ್ರೆ ಬೇಕಾಗಿದೆ. ಹೊಸ ಆಂಬ್ಯುಲೆನ್ಸ್‌ಗಳ ಅವಶ್ಯಕತೆ ಇದೆ. ಈ ಡೆಂಘೀ ಹಾವಳಿ ಸಂದರ್ಭದಲ್ಲಿ ವೈದ್ಯರು ತೀರಾ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ, ಹಾನಗಲ್ಲ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹೊರ, ಒಳ ರೋಗಿಗಳಿಂದ ಗಿಜಿಗುಡುತ್ತಿದೆ. ಸಿಬ್ಬಂದಿಯ ಕೊರತೆ ಕಾಡುತ್ತಿದೆ, ಇನ್ನೂ ನೂರು ಬೆಡ್ ಆಸ್ಪತ್ರೆ ಬೇಕಾಗಿದೆ. ಹೊಸ ಆಂಬ್ಯುಲೆನ್ಸ್‌ಗಳ ಅವಶ್ಯಕತೆ ಇದೆ. ಈ ಡೆಂಘೀ ಹಾವಳಿ ಸಂದರ್ಭದಲ್ಲಿ ವೈದ್ಯರು ತೀರಾ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ.ಹಾನಗಲ್ಲ ಆಸ್ಪತ್ರೆಗೆ ದಿನಕ್ಕೆ ೭ ನೂರರಷ್ಟು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಡೆಂಘೀ ಕಾರಣದಿಂದಾಗಿ ಈಗಂತೂ ಆಸ್ಪತ್ರೆಗೆ ತಿಂಗಳಿಗೆ ೨೭ ಸಾವಿರ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿ ಚಿಕಿತ್ಸೆಗಾಗಿ ಬೇಕಾಗುವ ಬಹುತೇಕ ಎಲ್ಲವೂ ಇದೆ. ಸುಸಜ್ಜಿತ ಶಸ್ತ್ರ ಚಿಕಿತ್ಸೆ ವಿಭಾಗ, ಅರವಳಿಕೆ ವ್ಯವಸ್ಥೆ, ರಕ್ತ ಪರೀಕ್ಷಾ ಘಟಕ, ಎಕ್ಸರೇ ಘಟಕ, ಡಯಾಲಿಸಿಸ್ ಘಟಕ, ತುರ್ತು ಚಿಕಿತ್ಸಾ ಘಟಕ ಎಲ್ಲವೂ ಸುಸಜ್ಜಿತ ಹಾಗೂ ಸುವ್ಯವಸ್ಥಿತ. ಆದರೆ ವೈದ್ಯರೂ ಸೇರಿದಂತೆ ಸಿಬ್ಬಂದಿಯ ಕೊರತೆ ಮಾತ್ರ ಕಾಡುತ್ತಿದೆ. ಉಚಿತ ಔಷಧಿ ಘಟಕದಲ್ಲಿ ಐವರು ಸಿಬ್ಬಂದಿ ಬದಲು ಕೇವಲ ಇಬ್ಬರು ಇದ್ದು, ಅದರಲ್ಲಿ ಒಬ್ಬರು ಇದೇ ಆಗಸ್ಟ ತಿಂಗಳಿಗೆ ನಿವೃತ್ತರಾಗಲಿದ್ದಾರೆ. ತಿಂಗಳಿಗೆ ಅಂದಾಜು ೧೫ ಲಕ್ಷ ರು. ಮೌಲ್ಯದ ಔಷಧಿಯ ಉಚಿತ ವಿತರಣೆ ನಡೆಯುತ್ತದೆ. ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆ ೪ ಇದ್ದರೂ ಇರುವವರು ಒಬ್ಬರೆ. ವೈದ್ಯರ ೧೪ ಮಂಜೂರಿ ಹುದ್ದೆಗಳಲ್ಲಿ ಕೇವಲ ೯ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಚೇರಿ ಅಧೀಕ್ಷಕರಿಲ್ಲ. ಪ್ರಥಮ ದರ್ಜೆ ದ್ವಿತೀಯ ದರ್ಜೆ ಸಹಾಯಕರ ಕೊರತೆ ಇದೆ. ಕ್ಲರ್ಕ ಕಂ ಟೈಪಿಸ್ಟ ಕೂಡ ಇಲ್ಲ. ಇರುವ ಸಿಬ್ಬಂದಿಯೇ ನಿಭಾಯಿಸಬೇಕಿದೆ. ಶುಶ್ರೂಷಕ ಅಧೀಕ್ಷಕರಿಲ್ಲ, ಆದರೆ ಶುಶ್ರೂಷಕ ಸಿಬ್ಬಂದಿ ಇದ್ದಾರೆ. ಪ್ರಯೋಗಾಲಯ ಟೆಕ್ನಾಲಜಿಸ್ಟ ಒಂದು ಹುದ್ದೆ ಖಾಲಿ ಇದೆ. ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೧ ಹಾಗೂ ಗ್ರೇಡ್-೨ ನೌಕರರು ಮಂಜೂರಿ ೩೩ ಹುದ್ದೆಗಳಲ್ಲಿ ೩೧ ಹುದ್ದೆ ಖಾಲಿ ಇವೆ. ಒಟ್ಟಾರೆ ಮಂಜೂರಾದ ೮೫ ಹುದ್ದೆಗಳಲ್ಲಿ ೩೩ ಹುದ್ದೆಗಳಲ್ಲಿ ಮಾತ್ರ ಕಾಯಂ ನೌಕರರಿದ್ದು, ೫೨ ಖಾಲಿ ಹುದ್ದೆಗಳಿವೆ. ಆದರೆ ೪೧ ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.ಬೆಳ್ಳಂಬೆಳಿಗ್ಗೆಯೇ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವಲ್ಲಿ ಇರುವ ವೈದ್ಯರು ಹರಸಾಹಸವನ್ನೇ ಮಾಡಿ ಹೈರಾಣಾಗುತ್ತಾರೆ. ಈ ಆಸ್ಪತ್ರೆಯನ್ನು ೨೫೦ ಬೆಡ್‌ಗಳಿಗೆ ಮೇಲ್ದರ್ಜೆಗೇರಿಸಬೇಕು. ಹೊಸ ಎರಡು ಮೂರು ಆಂಬ್ಯುಲೆನ್ಸಗಳು ಬೇಕು. ತಜ್ಞ ವೈದ್ಯರ ಹುದ್ದೆ ತುಂಬುವುದರ ಜೊತೆಗೆ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಆಸ್ಪತ್ರೆಗಾಗಿ ಇನ್ನೊಂದು ಕೊಳವೆ ಬಾವಿ ಕೊರೆಸಬೇಕು. ಕಟ್ಟಡವೂ ವಿಸ್ತಾರವಾಗಬೇಕು ಎನ್ನುವ ನಾಗರಿಕರ ಬೇಡಿಕೆಗೆ ಯಾರೂ ಕಿವಿಗೊಡುತ್ತಿಲ್ಲ. ಡೆಂಘೀ ಕಾರಣದಿಂದ ಅಸ್ಪತ್ರೆಗೆ ರೋಗಿಗಳ ಸಂಖ್ಯೆಯ ಹೆಚ್ಚು ಒತ್ತಡವಿದೆ. ಇರುವ ವೈದ್ಯರೆಲ್ಲರೂ ಹೆಚ್ಚು ಕಾಲ ಕೆಲಸ ಮಾಡುತ್ತಿರುವುದರಿಂದ ರೋಗಿಗಳ ನಿರ್ವಹಣೆ ಸಾಧ್ಯವಾಗಿದೆ. ಸರಕಾರ ಹೆಚ್ಚು ಸಿಬ್ಬಂದಿ ಸೇರಿದಂತೆ ವ್ಯವಸ್ಥೆಗಳನ್ನು ಒದಗಿಸಿದರೆ ಇನ್ನೂ ಅತ್ಯುತ್ತಮ ಸೇವೆ ನೀಡಲು ಸಾಧ್ಯ ಹಾನಗಲ್ಲ ಆಡಳಿತ ವೈದ್ಯಾಧಿಕಾರಿ ಡಾ. ಎಚ್‌.ಆರ್‌. ಬಸವರಾಜ ಹೇಳಿದರು.

ನಿತ್ಯ ಆರೇಳುನೂರು ರೋಗಿಗಳಿಗೆ ಔಷಧಿ ವಿತರಿಸಲಾಗುತ್ತಿದೆ. ಈ ವಿಭಾಗಕ್ಕೆ ನಾಲ್ಕೈದು ಸಿಬ್ಬಂದಿ ಬೇಕು ಎಂಬ ಬೇಡಿಕೆ ಇದೆ ಹಾನಗಲ್ಲ ಸರ್ಕಾರಿ ಆಸ್ಪತ್ರೆ ಸೀನಿಯರ್‌ ಫಾರ್ಮಸಿಸ್ಟ ಎಂ. ವಿರೂಪಣ್ಣನವರ ಹೇಳಿದರು.