ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ ರಾಜ್ಯದ ಪಾಲಿಗೆ ಜೀವನಾಡಿಯಾಗಿರಬಹುದು. ಆದರೆ ಈ ಯೋಜನೆಗಾಗಿ ತಮ್ಮ ಫಲವತ್ತಾದ ಜಮೀನು, ವಾಸವಿದ್ದ ಮನೆ ಹಾಗೂ ಬದುಕಿನ ಆಧಾರವನ್ನೇ ತ್ಯಾಗ ಮಾಡಿದ ಸಾವಿರಾರು ಕುಟುಂಬಗಳ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಅಣೆಕಟ್ಟಿನ ಹಿನ್ನೀರಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ಸಂತ್ರಸ್ತರು ಹಲವು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.ವಿಧಾನ ಪರಿಷತ್ ಕಲಾಪದಲ್ಲಿ ಗುರುವಾರ ಮಾತನಾಡಿದ ಅವರು, ಅಂದು ಸರ್ಕಾರವೇ ನಿಗದಿಪಡಿಸಿದ ಪರಿಹಾರ ಧನ ನೀಡದೇ ಇರುವುದರಿಂದ ಸಂತ್ರಸ್ತರು ಬೇರೆಡೆ ಜಮೀನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿರ್ಮಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ವಿದ್ಯುತ್ ನಂತಹ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ಜನ ಪರದಾಡುತ್ತಿದ್ದಾರೆ. ಕೃಷಿಯನ್ನೇ ನಂಬಿದ್ದ ಕುಟುಂಬಗಳಿಗೆ ಜಮೀನು ಹೋದ ಮೇಲೆ ಯಾವುದೇ ಪರ್ಯಾಯ ಆದಾಯದ ಮೂಲವಿಲ್ಲದೆ ಬೀದಿಪಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಾದರೂ ಅನೇಕರಿಗೆ ಬರಬೇಕಾದ ಕಾನೂನುಬದ್ಧ ಪರಿಹಾರ ಧನ ಇನ್ನೂ ತಲುಪಿಲ್ಲ. ನ್ಯಾಯಾಲಯದ ಮೊರೆ ಹೋದರೂ ವಿಳಂಬ ನೀತಿ ಮುಂದುವರಿಯುತ್ತಿದೆ. ದೇಶದ ಹಿತಕ್ಕಾಗಿ ತ್ಯಾಗ ಮಾಡಿದ ಈ ರೈತರ ಮತ್ತು ಸಾಮಾನ್ಯ ಜನರ ಕಣ್ಣೀರು ಸರ್ಕಾರದ ಗಮನಕ್ಕೆ ಬರಬೇಕಿದೆ. ದಯವಿಟ್ಟು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಬಾಕಿ ಇರುವ ಪರಿಹಾರವನ್ನು ಕೂಡಲೇ ವಿತರಿಸಲು ಹಾಗೂ ಪುನರ್ವಸತಿ ಕೇಂದ್ರಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಸರ್ಕಾರವನ್ನು ತೀಕ್ಷ್ಣವಾಗಿ ಒತ್ತಾಯಿಸಿದರು.