ಕನ್ನಡಪ್ರಭ ವಾರ್ತೆ ಬೆಳಗಾವಿ ಮನರೇಗಾ ತಿದ್ದುಪಡಿ ಮಸೂದೆ ಹಾಗೂ ಈ ಹಿಂದಿನ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಸಲಾಗಿದ್ದ ಹೋರಾಟದ ಮಾದರಿಯಲ್ಲೇ ಈ ತಿಂಗಳ ಪೂರ್ತಿ ವಿವಿಧ ಹಂತಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮನರೇಗಾ ತಿದ್ದುಪಡಿ ಮಸೂದೆ ಹಾಗೂ ಈ ಹಿಂದಿನ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಸಲಾಗಿದ್ದ ಹೋರಾಟದ ಮಾದರಿಯಲ್ಲೇ ಈ ತಿಂಗಳ ಪೂರ್ತಿ ವಿವಿಧ ಹಂತಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ತಿಳಿಸಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.11ರಂದು ಎಲ್ಲ ಜಿಲ್ಲಾ ಕೇಂದ್ರದ ಪ್ರಮುಖ ಸ್ಥಳಗಳು, ಅಂಬೇಡ್ಕರ್ ಇಲ್ಲವೇ ಗಾಂಧೀಜಿ ಪ್ರತಿಮೆಗಳ ಎದುರು ಒಂದು ದಿನ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಜ.12ರಿಂದ 29ರವರೆಗೆ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಪ್ರತಿಭಟನಾ ಸಮಾವೇಶಗಳು, ಜ.30ರಂದು ಆಯಾ ಪಂಚಾಯತಿಗಳ ವಾರ್ಡ್ ಮತ್ತು ಪಕ್ಷದ ಬ್ಲಾಕ್ ಮಟ್ಟದಲ್ಲಿ ಶಾಂತಿಯುತ ಧರಣಿ, ಜ.31ರಿಂದ ಫೆ.6ರವರೆಗೆ ಜಿಲ್ಲಾಮಟ್ಟದಲ್ಲಿ ಮನರೇಗಾ ಬಚಾವ ಧರಣಿ, ಫೆ.7ರಿಂದ 15ರವರೆಗೆ ರಾಜ್ಯಮಟ್ಟದಲ್ಲಿ ಬಿಜೆಪಿ ಸರ್ಕಾರ ಇರುವಲ್ಲಿ ವಿಧಾನಸೌಧಗಳಿಗೆ ಮುತ್ತಿಗೆ ಹಾಗೂ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಸರ್ಕಾರವಿರುವ ರಾಜ್ಯದಲ್ಲಿ ಬಿಜೆಪಿ ರಾಜ್ಯ ಕಚೇರಿ ಇಲ್ಲವೇ ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದರು. ಫೆ.16ರಿಂದ 25ರವರೆಗೆ ಆಯಾ ರಾಜ್ಯದಲ್ಲಿ ವಿಭಾಗವಾರು ಪ್ರತಿಭಟನಾ ರ್‍ಯಾಲಿ ನಡೆಸುತ್ತಿದ್ದು, ಫೆ.25ರವರೆಗೆ ನಿರಂತರವಾಗಿ ನಮ್ಮ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಮಧ್ಯೆ ಬಿಜೆಪಿ ಸರ್ಕಾರ ತಿದ್ದುಪಡಿ ವಾಪಸ್ ಪಡೆದು ಹಳೇ ಹೆಸರನ್ನೇ ಮುಂದುವರಿಸುತ್ತಾ ಕಾದು ನೋಡುತ್ತೇವೆ. ಇಲ್ಲದಿದ್ದರೆ ಫೆ.25ರ ಬಳಿಕ ದೆಹಲಿಯಲ್ಲಿ ದೊಡ್ಡಮಟ್ಟದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳುತ್ತೇವೆ. ಈ ಹಿಂದೆ ಮೂರು ಕೃಷಿ ಕಾಯಿದೆಗಳ ವಿರುದ್ಧ ಮಾಡಿದ್ದ ಹೋರಾಟದ ಮಾದರಿಯಲ್ಲೇ ಈಗಲೂ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮೃಣಾಲ್ ಹೆಬ್ಬಾಳ್ಕರ್, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಯುವರಾಜ ಕದಂ ಇತರರು ಉಪಸ್ಥಿತರಿದ್ದರು.