ಸಾರಾಂಶ
ದಾವಣಗೆರೆ : ತಂತ್ರಜ್ಞಾನ ದುರುಪಯೋಗ, ಅಧಿಕಾರ ಆಸೆಗಾಗಿ ಮಹಿಳೆಯರಿಗೆ ಅಗೌರವ ತರುವ ರಾಜಕೀಯ ವ್ಯವಸ್ಥೆ, ಹನಿಟ್ರ್ಯಾಪ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಅಹಿಂದ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ, ನಿವೃತ್ತ ಎಸ್‌ಪಿ ಎನ್.ರುದ್ರಮುನಿ ಅವರು, ರಾಜಕೀಯ ದುರುದ್ದೇಶ, ಅಧಿಕಾರದ ದುರಾಸೆಯಿಂದ ಸಚಿವರು, ಶಾಸಕರನ್ನು ಗುರಿಯಾಗಿಸಿಕೊಂಡ ಹನಿಟ್ರ್ಯಾಪ್ ಮಾಡಿಸುವವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸಿಬಿಐ ತನಿಖೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಹನಿಟ್ರ್ಯಾಪ್ ಪ್ರಕರಣದಲ್ಲಿ ಹೆಸರು ಕೇಳಿ ಬರುತ್ತಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ನಮ್ಮ ಒಕ್ಕೂಟ ನೈತಿಕ ಬೆಂಬಲ ನೀಡುತ್ತದೆ. ಅಹಿಂದ ಸಚಿವರನ್ನೇ ಗುರಿಯಾಗಿಸಿಕೊಂಡು, ಹನಿಟ್ರ್ಯಾಪ್ ಮೂಲಕ ಅಹಿಂದ ವರ್ಗಗಳ ಸಚಿವರನ್ನು ಮುಜುಗರಕ್ಕೀಡು ಮಾಡಿ, ಅಂತಹವರ ವಿರುದ್ಧ ಇಲ್ಲಸಲ್ಲದ ಆರೋಪ, ಅಪಪ್ರಚಾರ ಖಂಡನೀಯ ಎಂದು ಹೇಳಿದರು.
ಮುಖಂಡ ಹಾಗೂ ನಿವೃತ್ತ ಎಸ್‌ಪಿ ರವಿನಾರಾಯಣ ಮಾತನಾಡಿ, ಹೀನಕೃತ್ಯವನ್ನು ಯಾರೇ ಮಾಡಿದ್ದರೂ, ಮಾಡಿಸಿದ್ದರೂ, ಅಂತಹವರು ಎಷ್ಟೇ ಪ್ರಭಾವಿಯಾಗಿರಲಿ, ದೊಡ್ಡ ವ್ಯಕ್ತಿಯೇ ಆಗಿರಲಿ, ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ರಾಜ್ಯವ್ಯಾಪಿ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಅಹಿಂದ ವರ್ಗವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುತ್ತಾರೆಂಬ ಭಾವನೆಯಿಂದ ಹೀಗೆ ಹನಿಟ್ರ್ಯಾಪ್ ಸಂಚು ಸರಿಯಲ್ಲ. ಯಾವುದೇ ಸಮುದಾಯದವರ ವಿರುದ್ಧ ಹೀಗೆ ಹನಿಟ್ರ್ಯಾಪ್ ನಡೆದಿದ್ದರೆ ಅದು ಅಕ್ಷಮ್ಯ. ಇಂತಹ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಒಂದುವೇಳೆ ಸಚಿವರು, ಶಾಸಕರದ್ದೇ ತಪ್ಪಿದ್ದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಿ. ಈಗೇನು ಹನಿಟ್ರ್ಯಾಪ್ ಪ್ರಕರಣದಲ್ಲಿ 48 ಸಚಿವರು, ಶಾಸಕರು ಅಂತಾ ಮಾತು ಕೇಳಿಬಂದಿದೆಯೋ ಆ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ತಾಯಂದಿರು, ಹೆಣ್ಣುಮಕ್ಕಳಿಗೆ ಅಗೌರವ ತರುವ ಕೆಲಸ ಯಾರೇ ಮಾಡಿದ್ದರೂ ಕಠಿಣ ಕಾನೂನು ಕ್ರಮ ಆಗಬೇಕು ಎಂದರು.
ಒಕ್ಕೂಟದ ಮುಖಂಡರಾದ ಹಿರಿಯರಾದ ಎನ್.ಎಂ. ಆಂಜನೇಯ ಗುರೂಜಿ, ನಿವೃತ್ತ ಅಧಿಕಾರಿ ಎಸ್.ಶೇಖರಪ್ಪ, ರಾಜು ಬೆಳ್ಳೂಡಿ, ಶ್ಯಾಗಲೆ ಕೆ.ಆರ್.ಮಂಜುನಾಥ, ಇಟ್ಟಿಗುಡಿ ಮಂಜುನಾಥ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))