ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ

| Published : Apr 22 2024, 02:02 AM IST / Updated: Apr 22 2024, 08:27 AM IST

ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಹಿರೇಮಠ ಕೊಲೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಪೊಲೀಸ್‌ ಇಲಾಖೆ ಅಸಮರ್ಥವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎಂದು ಹೇಳಿದರು.

 ಹುಬ್ಬಳ್ಳಿ :  ಇಲ್ಲಿನ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿದರು. ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಅವರು, ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಕುಟುಂಬಸ್ಥರೊಂದಿಗೆ ಚರ್ಚಿಸಿ ಅಂದಿನ ಘಟನೆಯ ಬಗ್ಗೆ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಅಲ್ಲದೇ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯಹಸ್ತ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೇಹಾ ಹಿರೇಮಠ ಕೊಲೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಪೊಲೀಸ್‌ ಇಲಾಖೆ ಅಸಮರ್ಥವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.

ಇದು ಅತ್ಯಂತ ಭೀಕರವಾಗಿರುವ ಘಟನೆಯಾಗಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿ, ಅವರೊಂದಿಗೆ ನಾವಿದ್ದೇವೆ ಎಂದು ಹೇಳಲು ನಾನು ಆಗಮಿಸಿದ್ದೇನೆ. ಘಟನೆಯ ಕುರಿತು ಮೃತಳ ತಾಯಿ ಹೇಳಿರುವುದನ್ನು ಕೇಳಿ ನನಗೆ ತೀವ್ರ ನೋವು ಉಂಟಾಗಿದೆ. ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ನಾವೆಲ್ಲ ಬದ್ಧಗಿದ್ದೇವೆ ಎಂದರು.

ಜನತೆ ಕ್ಷಮಿಸುವುದಿಲ್ಲ:

ಕೊಲೆ ಕುರಿತು ಮುಖ್ಯಮಂತ್ರಿ, ಗೃಹಸಚಿವರು ನೀಡಿರುವ ಕೇಳಿಕೆ ಖಂಡನೀಯ. ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರು ಮಾತನಾಡುವ ಪೂರ್ವದಲ್ಲಿ ಅರಿತು ಮಾತನಾಡಬೇಕು. ಕೇವಲ ತುಷ್ಟೀಕರಣಕ್ಕಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ತನಿಖೆಯ ಸಂಪೂರ್ಣ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಈ ತುಷ್ಟೀಕರಣವನ್ನು ಜನರು ಕ್ಷಮಿಸುವುದಿಲ್ಲ ಎಂದರು.

ಭಾವಚಿತ್ರಕ್ಕೆ ನಮಸ್ಕರಿಸಿದ ನಡ್ಡಾ

ಕುಟುಂಬಸ್ಥರನ್ನು ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಜೆ.ಪಿ. ನಡ್ಡಾ ಅವರು ಮೃತ ನೇಹಾಳ ಭಾವಚಿತ್ರಕ್ಕೆ ಪುಷ್ಪ ಹಾಕಿ ನಮಸ್ಕರಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್‌. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಸೀಮಾ ಮಸೂತಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು

ನಮಗೆ ನೀವೆ ನ್ಯಾಯ ಕೊಡಿಸಿ: ನಿರಂಜನ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೃತ ನೇಹಾಳ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ನೇಹಾಳ ತಂದೆ ನಿರಂಜನ, ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಈಗಾಗಲೇ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಈ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಹೇಗಾದರೂ ಮಾಡಿ ನಮಗೆ ನ್ಯಾಯ ಕೊಡಿಸಿ, ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು ನಡ್ಡಾ ಅವರ ಬಳಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ನಡ್ಡಾ, ನಿಮ್ಮ ನೋವು ನನಗೆ ಅರ್ಥವಾಗಲಿದೆ. ಸರ್ಕಾರ ನೇಹಾಳ ಹೆಸರಿನಲ್ಲಿ ವಿಶೇಷ ಕಾನೂನು ರಚಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರಿಗೆ ಶೂಟೌಟ್‌ ಮಾಡುವ ಕಾನೂನು ಜಾರಿಗೆ ತರಲು ಒತ್ತಾಯಿಸುವುದಾಗಿ ಭರವಸೆ ನೀಡಿದರು. ಆನಂತರ ನೇಹಾಳ ತಾಯಿ ಗೀತಾ ಅವರೊಂದಿಗೆ ಚರ್ಚೆ ನಡೆಸಿ ಪುತ್ರಿಯ ಸಾವಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.