ತೇಗೂರಿನ ಪುನಃಶ್ಚೇತನ ಕೆರೆ ಹಸ್ತಾಂತರ

| Published : Mar 19 2024, 12:55 AM IST

ಸಾರಾಂಶ

ಜೀವ ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಂದು ಹನಿಯೂ ಅಮೃತಕ್ಕೆ ಸಮಾನ. ಇದರ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಪ್ರತಿಯೊಬ್ಬರಿಗೂ ತಿಳಿಯುತ್ತಿದೆ.

ಧಾರವಾಡ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಿದ ತಾಲೂಕಿನ ತೇಗೂರ ಗ್ರಾಮದ ಜೋಗಿ ಕೆರೆಯ ನಾಮಫಲಕ ಅನಾವರಣ ಮತ್ತು ಹಸ್ತಾಂತರ ಕಾರ್ಯಕ್ರಮ ಜರುಗಿತು.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ವರೆಗೆ 700 ಕೆರೆಗಳ ಪುನಶ್ಚೇತನಗೊಳಿಸಲಾಗಿದೆ. ರಾಜ್ಯಾದ್ಯಂತ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಗಳನ್ನು ನೀಡಲಾಗುತ್ತಿದೆ. ಜೀವ ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಂದು ಹನಿಯೂ ಅಮೃತಕ್ಕೆ ಸಮಾನ. ಇದರ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಪ್ರತಿಯೊಬ್ಬರಿಗೂ ತಿಳಿಯುತ್ತಿದೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬರಡು ಭೂಮಿಗಳಂತಾದರೆ ಮುಂದೊಂದು ದಿನ ಸಕಲ ಜೀವಕ್ಕೂ ಕೂಡ ಇದು ಮಾರಕವಾಗುತ್ತದೆ. ಬಿದ್ದ ಮಳೆ ನೀರನ್ನು ನಾವು ಎಷ್ಟರ ಮಟ್ಟಿಗೆ ಸಂಗ್ರಹಿಸುತ್ತೇವೆ ಎಂಬುದು ಕೂಡ ಪ್ರಾಮುಖ್ಯತೆ ವಹಿಸುತ್ತದೆ ಎಂದರು.ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿಗೆ ಕೆರೆ ಹಸ್ತಾಂತರ ಪತ್ರ ನೀಡಿದ ಜಿಲ್ಲಾ ಜನಜಾಗೃತಿ ವೇದಿಕೆ ಪುಂಡಲೀಕ ಹಡಪದ, ಕೆರೆಗಳನ್ನು ಹೂಳೆತ್ತು ಮುಖಾಂತರ ಮರು ಜೀವ ತುಂಬಿದಂತಾಗಿದೆ. ಫಲವತ್ತಾದ ಮಣ್ಣು ರೈತರ ಜಮೀನುಗಳಿಗೆ, ಕೆರೆಯ ನೀರು ಪ್ರಾಣಿ ಪಕ್ಷಿಗಳ ದಾಹ ತೀರಿಸಲಿದೆ. ಇದರ ಜತೆಗೆ ಕೆರೆಯ ಸುತ್ತಲಿನ ಭಾಗದಲ್ಲಿ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಲಿದೆ ಎಂದ ಅವರು, ಕ್ಷೇತ್ರದ ವತಿಯಿಂದ ಸ್ಮಶಾನ ರುದ್ರ ಭೂಮಿಗಳಿಗೆ ಸಿಲಿಕಾನ್ ಚೇಂಬರ್ ನೀಡುವುದು ಸ್ವಾಗತಾರ್ಹ ಕಾರ್ಯ ಎಂದರು.ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಕಮತರ ಹಾಗೂ ಗ್ರಾಪಂ ಸದಸ್ಯ ಈರಯ್ಯ ಹಿರೇಮಠ, ಮಾರುತಿ ಬಂಡಿವಡ್ಡರ, ಮಂಜುಳಾ ಜೋಗಿ, ಸಿದ್ದಲಿಂಗವ್ವ ಗುಡದರಿ ಅವರು ಕ್ಷೇತ್ರದ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಕ್ಷೇತ್ರ ಯೋಜನಾಧಿಕಾರಿ ಮಯೂರ ತೋರಸ್ಕರ್, ಅಭಿಯಂತರ ನಿಂಗರಾಜ್ ಮಾಳವಾಡ ಇದ್ದರು. ರವಿ ಹೊಟ್ಟಿನ ನಿರೂಪಿಸಿದರು. ಶಿಲ್ಪ ನಾಯ್ಕ ವಂದಿಸಿದರು.