ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಗ್ರಾಹಕರು ದೈನಂದಿನ ವಸ್ತುಗಳನ್ನು ಖರೀದಿ ಮಾಡಿದಾಗ ತಮಗಾಗುವ ಅನ್ಯಾಯದ ಬಗ್ಗೆ ಪ್ರಶ್ನಿಸಲು ಗ್ರಾಹಕರ ಹಕ್ಕುಗಳ ಮಾಹಿತಿ ಹೊಂದಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಮತ ದೇವಿ ಜಿ. ಎಸ್ ಹೇಳಿದರು.
ಅವರು ನಗರದ ಕುಂಜಿಬೆಟ್ಟುವಿನ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮನಷ್ಯನು ಹುಟ್ಟಿದಾಗಿನಿಂದಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಸೇವೆಯನ್ನು ಪಡೆಯುವ ಗ್ರಾಹಕನಾಗಿರುತ್ತಾನೆ. ಗ್ರಾಹಕರು ತಾವು ಖರೀದಿಸುವ ಸರಕು ಹಾಗೂ ಸೇವೆಯಲ್ಲಿ ಲೋಪ ಉಂಟಾದಾಗ ಪರಿಹಾರ ಪಡೆಯಲು ಗ್ರಾಹಕರ ಹಿತರಕ್ಷಣೆಗೆ ಕಾನೂನುಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಗ್ರಾಹಕರಿಗೆ ಸುರಕ್ಷತೆ, ರಕ್ಷಣೆ ಹಾಗೂ ಮಾಹಿತಿಯ ಹಕ್ಕನ್ನು ಆದ್ಯತೆಯ ಮೇರೆಗೆ ನೀಡಲಾಗಿದೆ. ಗ್ರಾಹಕ ಯಾವುದೇ ಸಂದರ್ಭದಲ್ಲೂ ಮೋಸಕ್ಕೆ ಒಳಗಾದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ. ತಿನ್ನುವ ಆಹಾರದಿಂದ ಹಿಡಿದು ನಿತ್ಯದ ಬದುಕಿನಲ್ಲೂ ಕಾನೂನಿನ ಅರಿವು ಅವಶ್ಯಕವಾಗಿದೆ ಎಂದರು.ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಸುನೀಲ ಟಿ. ಮಾಸರೆಡ್ಡಿ ಅವರು ನಿಮ್ಮ ಸಮಸ್ಯೆ, ನಮ್ಮಿಂದ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಮಾಜಿ ಸಂಚಾಲಕ ಎ.ಪಿ. ಕೊಡಂಚ, ಗ್ರಾಹಕರ ಪರಿಹಾರ ವೇದಿಕೆಯ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಆಶಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ. ಎಡ್ಕೆ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ (ಪ್ರಭಾರ) ರವೀಂದ್ರ ಸ್ವಾಗತಿಸಿ, ವಿಶ್ವಸ್ಥ ಎನ್. ರಾಮ ಭಟ್ ವಂದಿಸಿದರು. ಹರಿಕೃಷ್ಣ ಶಿವತ್ತಾಯ ಕಾರ‍್ಯಕ್ರಮ ನಿರೂಪಿಸಿದರು.