ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗುವ ಬೂತ್‌ಗಳಿಗೆ ಹೆಚ್ಚಿನ ಒತ್ತು ನೀಡಿ ಮತದಾನ ಹೆಚ್ಚಿಸಲು ಸ್ವೀಪ್ ಕಮಿಟಿ ಸಿದ್ಧತೆ ನಡೆಸಿದೆ. ಈ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾದರೆ ನಗರ ಪ್ರದೇಶದ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗುತ್ತಿದೆ ಎಂಬುದು ಅಚ್ಚರಿ.ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರು ಕ್ಷೇತ್ರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಈ ಲೋಕಸಭಾ ಕ್ಷೇತ್ರ ಹೊಂದಿದೆ. ಬರೋಬ್ಬರಿ 17,91,386 ಮತದಾರರಿದ್ದಾರೆ. 1893 ಮತಗಟ್ಟೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. 2014ರ ಲೋಕಸಭೆಯಲ್ಲಿ ಶೇ. 65ರಷ್ಟು, 2019ರಲ್ಲಿ ಶೇ. 70.29ರಷ್ಟು ಮತದಾನವಾಗಿತ್ತು. ಈ 1893ರ ಮತಗಟ್ಟೆಗಳ ಪೈಕಿ ಪ್ರತಿ ಸಲವೂ ಕಡಿಮೆ ಮತದಾನವಾಗುವ 9 ಮತಗಟ್ಟೆ ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಹೆಚ್ಚಿನ ಒತ್ತು ನೀಡಿ ಮತದಾನ ಮಾಡಿಸುವ ಗುರಿಯನ್ನು "ಸ್ವೀಪ್ " (| Systematic Voters'''''''' Education & Electoral participation) ಹೊಂದಿದೆ.ಯಾವ ಮತಗಟ್ಟೆಗಳಿವು?ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 154 (ಸೆಂಟ್ ಮೇರಿ ಸ್ಕೂಲ್- ಕೇಶ್ವಾಪುರ), ಕಿಮ್ಸ್‌ನಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 107, ಧಾರವಾಡ ಗ್ರಾಮೀಣ ಕ್ಷೇತ್ರದ ಕನ್ನಡ ಪ್ರಾಥಮಿಕ ಶಾಲೆ ಗುಲಗಂಜಿಕೊಪ್ಪದಲ್ಲಿ ಮತಗಟ್ಟೆ ಸಂಖ್ಯೆ- 162, 163, ಮಾಳಾಪುರದ ಉರ್ದು ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ- 146, ಕೃಷಿ ವಿಶ್ವವಿದ್ಯಾಲಯ- 184, ಕಲಘಟಗಿ ಕ್ಷೇತ್ರದ ಅಳ್ವಾವರದ ವಿದ್ಯಾನಗರದಲ್ಲಿನ ಅಂಗನವಾಡಿ ಕೇಂದ್ರ- 48, ಕಲಘಟಗಿಯ ಅರೇಬೆಸನಕೊಪ್ಪದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ-106 ಹಾಗೂ ಶಿಗ್ಗಾಂವಿ- ಸವಣೂರು ಕ್ಷೇತ್ರದ ಗಂಜಿಬಾವಿಯ 109 ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗುತ್ತದೆ. ಈ 9 ಮತಗಟ್ಟೆಗಳು ನಗರ ಅಥವಾ ಪಟ್ಟಣ ಪ್ರದೇಶದಲ್ಲೇ ಇವೆ. ಆದರೂ ಉಳಿದ ಮತಗಟ್ಟೆಗಳಿಗಿಂತ ಶೇ. 20ರಷ್ಟು ಮತದಾನ ಕಡಿಮೆಯಾಗುತ್ತದೆ ಎಂದು ಸ್ವೀಪ್ ಕಮಿಟಿ ತಿಳಿಸುತ್ತದೆ.ಇಲ್ಲಿ ಇರುವವರೆಲ್ಲರೂ ಸುಶಿಕ್ಷಿತರೇ. ಚುನಾವಣೆ, ಮತದಾನದ ಬಗ್ಗೆ ಅರಿವಿಲ್ಲದವರೇನೋ ಅಲ್ಲ. ಆದರೂ ಮತದಾನದಿಂದ ಮಾತ್ರ ದೂರ ಇರುತ್ತಾರೆ. ಚುನಾವಣೆ ದಿನ ಎಂದರೆ ರಜೆಯ ಮತ್ತೊಂದು ದಿನ ಎಂದೇ ಭಾವಿಸುವವರೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ 9 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಒತ್ತು ನೀಡಿ ಮತದಾನದಿಂದ ದೂರ ಇರಬೇಡಿ ಎಂದು ಜಾಗೃತಿ ಮೂಡಿಸುವ ಕೆಲಸವನ್ನು ಸ್ವೀಪ್ ಕಮಿಟಿ ಈಗಿನಿಂದಲೇ ಶುರು ಹಚ್ಚಿಕೊಂಡಿದೆ.
ಪಾರ್ಕ್, ಮಾರುಕಟ್ಟೆ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಜಿಂಗಲ್, ಬೀದಿ ನಾಟಕ, ಕರಪತ್ರ ಹಂಚುವಿಕೆ, ಗೋಡೆ ಬರಹ, ವೈಸ್ ಮೇಸೆಜ್ ರವಾನೆ, ಎಸ್‌ಎಂಎಸ್ ಹೀಗೆ ಇಲ್ಲಿನ ಮತದಾರ ಮನವೋಲಿಕೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸವನ್ನು ಶುರು ಹಚ್ಚಿಕೊಂಡಿದೆ.ಮನವಿ:ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದರೆ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು. ಚುನಾವಣೆಯ ದಿನ ರಜೆ ಸಿಕ್ಕಿತು ಎಂದುಕೊಂಡು ದೂರ ಉಳಿಯದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಸೆಂಟ್ರಲ್ ಕ್ಷೇತ್ರದಂತಹ ಸುಶಿಕ್ಷಿತರೇ ಹೆಚ್ಚಿರುವ ಕ್ಷೇತ್ರದಲ್ಲೂ ಮತದಾನದಲ್ಲಿ ಹಿಂದುಳಿಕೆಯೆಂದರೆ ಖೇದಕರ. ಇನ್ನಾದರೂ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕೆಂಬ ಅಭಿಪ್ರಾಯ ಪ್ರಜ್ಞಾವಂತಹರದ್ದು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1893 ಮತಗಟ್ಟೆಗಳಿದ್ದು ಇದರಲ್ಲಿ ಕಡಿಮೆ ಮತದಾನವಾಗುವ 9 ಮತಗಟ್ಟೆ ಕೇಂದ್ರ ಗುರುತಿಸಲಾಗಿದೆ. ಸೆಂಟ್ರಲ್- 2, ಧಾರವಾಡ ಗ್ರಾಮೀಣ -4, ಕಲಘಟಗಿ - 2, ಶಿಗ್ಗಾಂವಿ ಸವಣೂರ- 1 ಮತಗಟ್ಟೆಗಳಿವೆ. ಇಲ್ಲಿ ಹೆಚ್ಚಿನ ಒತ್ತು ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಪಂ ಸಿಇಒ ಟಿ.ಕೆ. ಸ್ವರೂಪಾ ಹೇಳಿದ್ದಾರೆ.