ಕೇವಲ ತಮಗಾಗಿ ಜೀವಿಸುವುದು ಸ್ವಾರ್ಥ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೈಗಳೇ ಪೂಜನೀಯ ಎಂದು ಬೆಳ್ಳಾವಿ ಶ್ರೀ ಕಾರದೇಶ್ವರಮಠದ ಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಕೇವಲ ತಮಗಾಗಿ ಜೀವಿಸುವುದು ಸ್ವಾರ್ಥ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೈಗಳೇ ಪೂಜನೀಯ ಎಂದು ಬೆಳ್ಳಾವಿ ಶ್ರೀ ಕಾರದೇಶ್ವರಮಠದ ಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಗುಹೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರೋಟರಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನೂತನ ಸದಸ್ಯರುಗಳ ಸೇವಾ ಪ್ರಮಾಣ ವಚನ ಸಮಾರಂಭದಲ್ಲಿ ಮಾತನಾಡಿದರು. ಯಾವ ಕೈಗಳು ಸಮಾಜಕ್ಕೆ ಕೊಡುವುದನ್ನು ಕಲಿಯುತ್ತವೆಯೋ, ಆ ಕೈಗಳನ್ನು ಭಗವಂತ ಎಂದಿಗೂ ಬರಿದಾಗಿಡುವುದಿಲ್ಲ. ರೋಟರಿ ಸಂಸ್ಥೆಯು ಶೈಕ್ಷಣಿಕ ನೆರವು, ಆರೋಗ್ಯ ಶಿಬಿರ, ರಕ್ತದಾನ ಹಾಗೂ ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಹೊಸ ಬೆಳಕನ್ನು ಚೆಲ್ಲುತ್ತಿದೆ ಇಂತಹ ಸೇವಾ ಮನೋಭಾವ ಇರುವಂತಹ ಪ್ರತಿಯೊಬ್ಬರೂ ಈ ಸಂಸ್ಥೆಯಲ್ಲಿ ಸೇರಿಕೊಳ್ಳಬಹುದು ನಿಟ್ಟೂರು ರೋಟರಿ ಕ್ಲಬ್ ಅನ್ನದಾಸೋಹ, ಶಿಕ್ಷಣ ಪರಿಸರ, ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಹೇಳಿದರು.ರೋಟರಿ ನೂತನ ಅಧ್ಯಕ್ಷ ಎಂ.ಜೆ.ಬಸವರಾಜು ಮಾತನಾಡಿ, ವಿನಾಯಕ ಪಿಯುಸಿ ಕಾಲೇಜಿಗೆ ಉಚಿತವಾಗಿ ಮಧ್ಯಾನ್ಹದ ದಾಸೋಹ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಒಂದು ವರ್ಷದಲ್ಲಿ 5000 ತೆಂಗಿನ ಸಸಿ ನೆಡುವುದು, ಅವಶ್ಯಕತೆ ಇರುವವರಿಗೆ 10 ಹಸುಗಳನ್ನು ನೀಡುವುದು, ಜೀವನೋತ್ಥಾನ ಎಂಬ ಯೋಜನೆಯಲ್ಲಿ 30 ಸಾವಿರ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಈ ರೀತಿಯಲ್ಲಿ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ರೋಟರಿ ಸೇವೆ ಮಾಡುವ ಮುಂದಿನ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು. ಎಸ್.ಆರ್. ರೇಣುಕೇಶ್ವರಸ್ವಾಮಿ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವದಿಂದ ಕೆಲಸ ಮಾಡುವುದೇ ರೋಟರಿಯ ಉದ್ದೇಶ. ಯಾರಿಗೆ ಸೌಲಭ್ಯಗಳ ಅವಶ್ಯಕತೆ ಇದೆಯೋ ಅಂತವರನ್ನು ಬೆನ್ನತ್ತಿ ಸೌಲಭ್ಯ ನೀಡಬೇಕು. ತಂದೆ ತಾಯಿಗಳು ತಾವು ಮಾಡುವ ಕೆಲಸ ಕಾರ್ಯಗಳು ಮಕ್ಕಳಿಗೆ ಗೊತ್ತಾಗುವಂತೆ ಮಾಡಿದಾಗ ಮಾತ್ರ ಅವರು ಮುಂದೆ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳ ಸಾಧ್ಯವಾಗುತ್ತದೆ. 100 ಜನ ಚುಚ್ಚಿ ಮಾತನಾಡುವರ ಮಧ್ಯೆ 3 ಜನ ಮೆಚ್ಚಿ ಮಾತನಾಡಿದರೆ ಅದಕ್ಕೆ ತೃಪ್ತಿ ಪಡಬೇಕು ಎಂದರು.ಈ ಸಂದರ್ಭದಲ್ಲಿ ಚಾಲುಕ್ಯ ಆಸ್ಪತ್ರೆ ಸಿಇಒ ಡಾ.ನಾಗಭೂಷಣ್ ಇವರನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ಸಹಾಯಕ ಜಿಲ್ಲಾಪಾಲಕ ಮಹಲಿಂಗಯ್ಯ, ವಲಯ ಪಾಲಕಿ ಪ್ರಮೀಳಾ ಶಿವಕುಮಾರ್, ಕಾರ್ಯದರ್ಶಿ ಬಿ.ಎಸ್.ದೇವರಾಜು, ನಿಕಟ ಪೂರ್ವ ಅಧ್ಯಕ್ಷ ಗುರುಮೂರ್ತಿ, ಸಚ್ಚಿನ್, ರಾಕೇಶ್, ಕೃಷ್ಣಕುಮಾರ್, ಪ್ರಸನ್ನ ಕುಮಾರ್,ಮಮತಾ, ಎಚ್.ಎಸ್.ರಮ್ಯ, ರೋಟರಿ ಜಿಲ್ಲಾ ಪದಾಧಿಕಾರಿಗಳು, ರೋಟರಿ ನಿಟ್ಟೂರು ಎಲ್ಲಾ ನಿರ್ದೇಶಕರು, ಸದಸ್ಯರು, ಮತ್ತಿತರರು ಇದ್ದರು.