ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

| Published : May 18 2024, 12:37 AM IST

ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಅಮಾಯಕ ಯುವತಿಯನ್ನು ಕೊಲೆ ಮಾಡಿರುವ ಹಂತಕನನ್ನು ಗಲ್ಲುಶಿಕ್ಷೆಗೆ ಒಳಪಡಿಸುವಂತೆ ಕೊಪ್ಪಳ ಜಿಲ್ಲಾ ಗಂಗಾಮತಸ್ಥರ ಸಂಘ ಆಗ್ರಹಿಸಿದೆ. ಮೇ 18ರಂದು ಹುಬ್ಬಳ್ಳಿಯಲ್ಲಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೊಪ್ಪಳ: ಹುಬ್ಬಳ್ಳಿಯಲ್ಲಿ ಅಮಾಯಕ ಯುವತಿಯನ್ನು ಕೊಲೆ ಮಾಡಿರುವ ಹಂತಕನನ್ನು ಗಲ್ಲುಶಿಕ್ಷೆಗೆ ಒಳಪಡಿಸುವಂತೆ ಕೊಪ್ಪಳ ಜಿಲ್ಲಾ ಗಂಗಾಮತಸ್ಥರ ಸಂಘ ಆಗ್ರಹಿಸಿದೆ.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸೋಮಪ್ಪ ಬಾರಕೇರ ಅವರು ಮಾತನಾಡಿ, ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದರೆ ಮಾತ್ರ ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದರು.

ಅಂಜಲಿ ಕುಟುಂಬ ಅತ್ಯಂತ ಕಡುಬಡತನದಲ್ಲಿ ಇದೆ. ಆಸರೆಯಾಗಿದ್ದ ಅಂಜಲಿಯೇ ಈಗ ಕೊಲೆಯಾಗಿರುವುದರಿಂದ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈಗ ಬಾಡಿಗೆ ಮನೆಯಲ್ಲಿ ಇದ್ದ ಅವರನ್ನು ಅಲ್ಲಿಂದಲೂ ತೆರವು ಮಾಡಿಸಲಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಅವರ ನೆರವಿಗೆ ಬರುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರ ಅಂಜಲಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಮತ್ತು ಅವರ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಸರ್ಕಾರಿ ನೌಕರಿಯನ್ನಾದರೂ ನೀಡಿ, ಉಪಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ನೇಹಾ ಕೊಲೆ ನಡೆದಾಗ ಸಿಕ್ಕ ಬೆಂಬಲ ಈಗ ಸಿಗುತ್ತಿಲ್ಲ. ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ಅವರ ಮನೆಗೆ ಹೋಗುತ್ತಿಲ್ಲ. ಇದು ಸರಿಯಲ್ಲ. ರಾಜಕೀಯ ನಾಯಕರು ಸೇರಿದಂತೆ ಯಾರೂ ಅಷ್ಟಾಗಿ ಬೆಂಬಲ ನೀಡದಿರುವುದು ಖಂಡನೀಯ ಎಂದರು.

ಅಂಜಲಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಾಗೂ ಹಂತಕನಿಗೆ ಗಲ್ಲುಶಿಕ್ಷೆ ನೀಡುವಂತೆ ಆಗ್ರಹಿಸಿ ಮೇ 18ರಂದು ಹುಬ್ಬಳ್ಳಿಯಲ್ಲಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾದಾದ್ಯಂತ ಎಲ್ಲ ಜಿಲ್ಲೆಯಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದಲೂ 400-500 ಜನರು ತೆರಳಲಿದ್ದಾರೆ ಎಂದರು.

ಯಮನಪ್ಪ ಕಬ್ಬೇರ, ವೆಂಕಪ್ಪ ಬಾರಕೇರ, ಎನ್. ಯಂಕಪ್ಪ, ಉದಯ ಕಟ್ಟರ, ರಾಜು ಕಲೆಗಾರ ಇದ್ದರು.