ಸಾರಾಂಶ
ಮೊಬೈಲ್ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಭಜನೆ ಹಾಕಿದ ವಿಚಾರಕ್ಕೆ ಯುವಕರ ಗುಂಪೊಂದು ಅಂಗಡಿ ಮಾಲಿಕನ ಜತೆಗೆ ಕಿರಿಕ್ ತೆಗೆದು ಹಲ್ಲೆ ಮಾಡಿದ್ದ ಘಟನೆ ಖಂಡಿಸಿ ನಡೆಯುತ್ತಿರುವ ಹೋರಾಟವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಭಜನೆ ಹಾಕಿದ ವಿಚಾರಕ್ಕೆ ಯುವಕರ ಗುಂಪೊಂದು ಅಂಗಡಿ ಮಾಲಿಕನ ಜತೆಗೆ ಕಿರಿಕ್ ತೆಗೆದು ಹಲ್ಲೆ ಮಾಡಿದ್ದ ಘಟನೆ ಖಂಡಿಸಿ ನಡೆಯುತ್ತಿರುವ ಹೋರಾಟವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಂಗಳವಾರ ನಗರ್ತಪೇಟೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಿಜೆಪಿ ಕಾರ್ಯಕರ್ತರು, ಹಿಂದು ಕಾರ್ಯಕರ್ತರು, ಹನುಮಭಕ್ತರು, ವರ್ತಕರು, ಸ್ಥಳೀಯ ನಿವಾಸಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಡೀ ನಗರ್ತಪೇಟೆ ಕೇಸರಿ ಮಯವಾಗಿತ್ತು. ಕೇಸರಿ ಶಾಲು, ಭಗವಾಧ್ವಜ ಹಿಡಿದು ಜೈ ಶ್ರೀರಾಮ, ವಂದೇ ಮಾತರಂ, ಜೈ ಹನುಮಾನ್ ಘೋಷಣೆಗಳನ್ನು ಮೊಳಗಿಸಿದರು.ನಗರ್ತಪೇಟೆಯ ಬಹುತೇಕ ವರ್ತಕರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನದ ವರೆಗೆ ಅಂಗಡಿ-ಮುಂಗಟ್ಟುಗಳು ತೆರೆಯದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹೀಗಾಗಿ ಧರ್ಮರಾಯ ದೇವಸ್ಥಾನ ರಸ್ತೆ, ಎಸ್.ಪಿ.ರಸ್ತೆ, ಸಿದ್ದಣ್ಣ ಗಲ್ಲಿ ಸೇರಿದಂತೆ ಇಡೀ ನಗರ್ತಪೇಟೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ನಡೆದ ಕೃಷ್ಣ ಟೆಲಿಕಾಂ ಅಂಗಡಿ ಮತ್ತು ಜುಮ್ಮಾ ಮಸೀದಿ ಸೇರಿದಂತೆ ಇಡೀ ನಗರ್ತಪೇಟೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಹಲ್ಲೆಗೆ ಒಳಗಾದ ಮುಖೇಶ್ ಮೊಬೈಲ್ ಬಿಡಿಭಾಗಗಳ ಅಂಗಡಿಯಿಂದ ಹನುಮಾನ್ ಚಾಲೀಸ ಪಠಿಸಿಕೊಂಡು ನಗರ್ತಪೇಟೆಯಲ್ಲಿ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ಮುಂದಾದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕರಾದ ಸುರೇಶ್ ಕುಮಾರ್, ಸಿ.ಕೆ.ರಾಮಮೂರ್ತಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು, ಹಿಂದು ಮುಖಂಡರು, ಹನುಮನ ಭಕ್ತರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಮೆರವಣಿಗೆಗೆ ಅನುಮತಿ ನಿರಾಕರಣೆ: ಅನುಮತಿ ಇಲ್ಲದೆ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ತಾವು ಇದ್ದ ರಸ್ತೆಯಲ್ಲಿ ಕುಳಿತು ಜೈ ಶ್ರೀರಾಮ್ ಘೋಷಣೆ ಕೂಗಿ, ಭಜನೆ ಮಾಡಲು ಮುಂದಾದರು. ಶಾಂತಿಯುತ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಏಕಾಏಕಿ ಅನುಮತಿ ನೀಡಲು ಸಾಧ್ಯವಿಲ್ಲ. ಪೂರ್ವಾನುಮತಿ ಇಲ್ಲದೆ ಯಾವುದೇ ಮೆರವಣಿಗೆ ನಡೆಸಲು ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದರು.ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ಅನುಮತಿ ನೀಡಲೇಬೇಕು ಎಂದು ಪಟ್ಟು ಹಿಡಿದರು. ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದರು.
ಈ ವೇಳೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತ ಪೊಲೀಸರು, ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಮೆರವಣಿಗೆ ನಡೆಸದಂತೆ ತಡೆದರು.ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ ನೂಕಾಟ-ತಳ್ಳಾಟ ನಡೆಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಸಂತ್ರಸ್ತ ಪೊಲೀಸ್ ವಶಕ್ಕೆ: ಹನುಮಾನ್ ಚಾಲೀಸ ಪಠಿಸಿಕೊಂಡು ಮೆರವಣಿಗೆ ಮಾಡಲು ಸಿದ್ಧರಾಗಿದ್ದ ಪ್ರತಿಭಟನಾಕಾರರ ಜತೆಗೆ ಸಂತ್ರಸ್ತ ಮುಖೇಶ್ ಸಹ ಭಾಗವಹಿಸಿದ್ದ.
ಈತ ಸ್ಥಳದಲ್ಲೇ ಇದ್ದರೆ ಪರಿಸ್ಥಿತಿ ಕೈ ಮೀರುತ್ತದೆ ಎಂದು ಪೊಲೀಸರು, ಮುಂಜಾಗೃತಾ ಕ್ರಮವಾಗಿ ಆತನನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ಮುಗಿಲು ಮುಟ್ಟಿತು. ಪೊಲೀಸರ ವಿರುದ್ಧವೇ ಘೋಷಣೆ ಕೂಗಿ ಕೆಂಡಕಾರಿದರು.
ಪೊಲೀಸರ ಜೀಪಿಗೆ ಅಡ್ಡ ನಿಂತ ಸುರೇಶ್: ಸಂತ್ರಸ್ತ ಮುಖೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಜೀಪಿಗೆ ಹತ್ತಿಸಿಕೊಂಡು ಕರೆದೊಯ್ಯಲು ಮುಂದಾದಾಗ, ಶಾಸಕ ಸುರೇಶ್ ಕುಮಾರ್ ಅವರು ಪೊಲೀಸ್ ಜೀಪಿಗೆ ಅಡ್ಡ ನಿಂತು ಪ್ರತಿಭಟಿಸಿದರು.
ಈ ವೇಳೆ ಪೊಲೀಸರು ಸುರೇಶ್ ಕುಮಾರ್ ಅವರ ಕೈಗಳನ್ನು ಹಿಡಿದು ಕೆಲ ಕಾಲ ಎಳೆದಾಡಿದ ಪ್ರಸಂಗವೂ ನಡೆಯಿತು. ಇದರಿಂದ ಪ್ರತಿಭಟನಾಕಾರರು ಮತ್ತಷ್ಟು ವ್ಯಾಘ್ರಗೊಂಡು ಪೊಲೀಸರ ಜತೆಗೆ ವಾಗ್ವಾದಕ್ಕೆ ಮುಂದಾದರು. ಆದರೂ ಪೊಲೀಸರು, ಸುರೇಶ್ ಕುಮಾರ್ ಅವರನ್ನು ಜೀಪಿನ ಎದುರಿನಿಂದ ಪಕ್ಕಕ್ಕೆ ಎಳೆದು ಮುಖೇಶ್‌ನನ್ನು ಕರೆದೊಯ್ದರು.
ನಡು ರಸ್ತೆಯಲ್ಲಿ ಧರಣಿ ಕುಳಿತ ಕರಂದ್ಲಾಜೆ: ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದ ಶೋಭಾ ಕರಂದ್ಲಾಜೆ ಅವರು ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತು ರಸ್ತೆಯಲ್ಲೇ ಧರಣಿ ನಡೆಸಲು ಮುಂದಾದರು.
ಇದಕ್ಕೆ ಪ್ರತಿಭಟನಾಕಾರರು ಸಾಥ್ ನೀಡಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ಉದ್ವಿಗ್ನತೆಗೆ ತಿರುಗುತ್ತಿರುವುದನ್ನು ಅರಿತು ಶೋಭಾ ಕರಂದ್ಲಾಜೆ ಅವರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕೊರೆದೊಯ್ದು ಸಂಜೆ ವೇಳೆ ಬಿಟ್ಟು ಕಳುಹಿಸಿದರು.
ಠಾಣೆ ಎದುರು ಪ್ರತಿಭಟನೆ: ಮತ್ತೊಂದೆಡೆ ವರ್ತಕ ಮುಖೇಶ್ ಮೇಲಿನ ಹಲ್ಲೆ ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಿದ್ದಣ್ಣಗಲ್ಲಿನ ವರ್ತಕರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಲ ಪ್ರತಿಭಟನಾಕಾರರು ಹುನುಮಾನ್ ಚಾಲೀಸ ಪಠಿಸಿದರು. ಪೊಲೀಸರು ಹೆಚ್ಚಿನ ಸಮಯ ಪ್ರತಿಭಟನೆ ನಡೆಸಲು ಬಿಡದೆ ಗುಂಪನ್ನು ಚದುರಿಸಿದರು.
ತಮಿಳುನಾಡಿಂದ ಬಂದು ಇಲ್ಲಿ ಬಾಂಬ್ ಹಾಕ್ತಾರೆ: ಕರಂದ್ಲಾಜೆ
ನಮ್ಮ ಮನೆಯಲ್ಲಿ, ನಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸ ಹಾಕಿದರೆ ತಪ್ಪೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜ್ಞೆ ಪ್ರಶ್ನಿಸಿದ್ದಾರೆ.
ವರ್ತಕ ಮುಖೇಶ್ ಮೇಲಿನ ಹಲ್ಲೆ ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ತಮಿಳುನಾಡಿನಿಂದ ಬಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿ ಹೋಗುತ್ತಾನೆ.
ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾನೆ. ಇನ್ನೊಬ್ಬ ನಮ್ಮ ಕಾಲೇಜಿಗೆ ಬಂದು ಆ್ಯಸಿಡ್ ಹಾಕುತ್ತಾನೆ. ಇಲ್ಲಿ ಮುಖೇಶ್ ಏನು ತಪ್ಪು ಮಾಡಿದ್ದ? ಇದು ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಜಗಳದಲ್ಲಿ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರಿಗೆ ಎಷ್ಟು ಸ್ವಾತಂತ್ರ್ಯ ಇದೆಯೋ ಗೊತ್ತಿಲ್ಲ. ಒಂದು ಕೋಮಿನವರು ತಪ್ಪು ಮಾಡಿ ಸರ್ಕಾರ ನಮ್ಮ ರಕ್ಷಣೆಗೆ ಇದೆ ಎಂದುಕೊಳ್ಳುತ್ತಾರೆ.
ಮಂತ್ರಿಗಳು ನಮ್ಮ ಹಿಂದೆ ಇದ್ದಾರೆ ಎಂಬ ಧೈರ್ಯ ಅವರಿಗಿದೆ. ಇವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಪೊಲೀಸರು ಬಂಧಿಸಿರುವ ಆರೋಪಿಗಳೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಪ್ರಮುಖ ಆರೋಪಿಗಳನ್ನು ಬಿಟ್ಟು, ಬೇರೆಯವರನ್ನು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವಂತೆ ಕಂಡು ಬಂದಿದೆ.
ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಸರಿಯಾದ ತನಿಖೆ ನಡೆಯುವುದು ಅನುಮಾನ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಸದ ತೇಜಸ್ವಿ ಮಾತಿಗೂ ಬಗ್ಗದ ಪ್ರತಿಭಟನಾಕಾರರು: ಪ್ರತಿಭಟನೆಯ ಒಂದು ಹಂತದಲ್ಲಿ ಸಂಸದ ತೇಜಸ್ವಿ ಸೂರ್ಯ ಪೊಲೀಸರ ಕ್ರಮದಿಂದ ನಮಗೆ ವಿಶ್ವಾಸ ಬಂದಿದೆ. ಹೀಗಾಗಿ ಹೋರಾಟಕ್ಕೆ ವಿರಾಮ ನೀಡುತ್ತೇವೆ ಎಂದು ಘೋಷಿಸಿದರು.
ಈ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದರು. ತೇಜಸ್ವಿಗೆ ಬೇರೆ ದಾರಿ ಇಲ್ಲದೆ ಪ್ರತಿಭಟನೆ ಮುಂದುವರೆಸಿದರು.
ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸರು, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕ ರಾಮಮೂರ್ತಿ, ಯುವ ಮುಖಂಡ ಸಪ್ತಗಿರಿಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಪೊಲೀಸ್ ಸರ್ಪಗಾವಲು: ರಸ್ತೆಗಳಲ್ಲಿ ಪಥಸಂಚಲನ
ಮುಖೇಶ್ ಮೇಲಿನ ಹಲ್ಲೆ ಘಟನೆಯಿಂದ ಇಡೀ ನಗರ್ತಪೇಟೆ ಪ್ರಕ್ಷುಬದ್ಧ ವಾತಾವರಣ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಸೋಮವಾರದಿಂದಲೂ ನಗರ್ತಪೇಟೆಯಲ್ಲಿ ನಾಲ್ಕು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪೊಲೀಸರು ಬೃಹತ್ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರಿಸ್ಥಿತಿ ನಿಭಾಯಿಸಿದರು. ಒಂದು ಹಂತದಲ್ಲಿ ಹಲಸೂರು ಗೇಟ್ ಎಸಿಪಿ ನೇತೃತ್ವದಲ್ಲಿ ಪೊಲೀಸರು ನಗರ್ತಪೇಟೆಯ ಬೀದಿ ಬೀದಿಗಳಲ್ಲಿ ಪಥಸಂಚಲನ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.
ಭಕ್ತಿಗೀತೆ ಹಾಕಿದ ಕಾರಣಕ್ಕೆ ಮುಖೇಶ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ. -ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ.