ಹನುಮ ಧ್ವಜ ಪ್ರಕರಣ: ನಾಳೆ ಕೆರಗೋಡು, ಮಂಡ್ಯ ಬಂದ್‌ಗೆ ಕರೆ

| Published : Feb 08 2024, 01:32 AM IST

ಸಾರಾಂಶ

ಫೆ.೯ರಂದು ಕೆರಗೋಡು ಬಂದ್‌ಗೆ ಕರೆ ನೀಡಿರುವ ಶ್ರೀರಾಮ ಭಜನಾ ಮಂಡಳಿಯವರು ಅಂದು ಬೆಳಗ್ಗೆ ೯ ಗಂಟೆಗೆ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಸ್ಥಳದಿಂದ ನೂರಾರು ಬೈಕ್‌ಗಳೊಂದಿಗೆ ರ್‍ಯಾಲಿಯಲ್ಲಿ ಮಂಡ್ಯ ನಗರ ರೈಲ್ವೆ ನಿಲ್ದಾಣದ ಬಳಿಯ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ ಆಗಮಿಸಲಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.೯ರಂದು ಕೆರಗೋಡು ಹಾಗೂ ಮಂಡ್ಯ ಬಂದ್‌ಗೆ ಶ್ರೀರಾಮಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಸಂಘಟನೆಗಳು ಕರೆ ನೀಡಿವೆ.

ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಸಲುವಾಗಿ ಬುಧವಾರ (ಫೆ.೭)ದಂದು ಪ್ರಗತಿಪರ ಸಂಘನೆಗಳು ಮಂಡ್ಯ ಬಂದ್ ಕರೆ ನೀಡಿದ್ದವು. ಆ ನಂತರದಲ್ಲಿ ಜಿಲ್ಲಾಡಳಿತ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಮಂಡ್ಯ ಬಂದ್ ಕರೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಫೆ.೯ರಂದು ನೀಡಿರುವ ಬಂದ್‌ನ್ನು ಹಿಂಪಡೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದವು.

ಜಿಲ್ಲಾಡಳಿತ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರೊಂದಿಗೂ ಮಾತುಕತೆ ನಡೆಸಿ ಬಂದ್‌ನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಜನ ಸಾಮಾನ್ಯರು, ವ್ಯಾಪಾರಸ್ಥರಿಗೆ ಉಂಟಾಗುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಡಾ.ಕುಮಾರ ಮನವರಿಕೆ ಮಾಡಿಕೊಟ್ಟಿದ್ದರು. ಸಭೆಯಲ್ಲಿ ಸ್ಪಷ್ಟವಾಗಿ ಏನನ್ನೂ ತಿಳಿಸದೆ ಪರಸ್ಪರರು ಕುಳಿತು ಮಾತುಕತೆ ನಡೆಸಿ ವಿಷಯ ತಿಳಿಸುವುದಾಗಿ ಹೇಳಿಬಂದಿದ್ದರು.

ಆ ನಂತರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಕೆರಗೋಡು ಶ್ರೀರಾಮ ಭಜನಾ ಮಂಡಳಿಯವರು ಫೆ.೯ರಂದು ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದ್ದು, ವರ್ತಕರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸುವಂತೆ ಮನವಿ ಮಾಡಿವೆ.

ಫೆ.೯ರಂದು ಕೆರಗೋಡು ಬಂದ್‌ಗೆ ಕರೆ ನೀಡಿರುವ ಶ್ರೀರಾಮ ಭಜನಾ ಮಂಡಳಿಯವರು ಅಂದು ಬೆಳಗ್ಗೆ ೯ ಗಂಟೆಗೆ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಸ್ಥಳದಿಂದ ನೂರಾರು ಬೈಕ್‌ಗಳೊಂದಿಗೆ ರ್ಯಾಲಿಯಲ್ಲಿ ಮಂಡ್ಯ ನಗರ ರೈಲ್ವೆ ನಿಲ್ದಾಣದ ಬಳಿಯ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ ಆಗಮಿಸಲಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕೆರಗೋಡು ಬಂದ್‌ಗೆ ಸ್ಥಳೀಯ ವರ್ತಕರು, ಬಜರಂಗಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಹೋಟೆಲ್ ಮಾಲೀಕರು, ಕಾರು, ಲಾರಿ ಮಾಲೀಕರ ಸಂಘ, ಚಿತ್ರಮಂದಿರ ಸೇರಿದಂತೆ ಎಲ್ಲರೂ ಬೆಂಬಲ ಘೋಷಿಸಿರುವುದಾಗಿ ವೀಡಿಯೋ ಸಂದೇಶವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಕೆರಗೋಡು ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜ, ನಾಡಹಬ್ಬದ ದಿನ ಕನ್ನಡ ಧ್ವಜವನ್ನು ಹಾರಾಟ ನಡೆಸಲಾಗುತ್ತಿತ್ತು. ಉಳಿದದಿನಗಳಲ್ಲಿ ಹನುಮ ಧ್ವಜವನ್ನು ಹಾರಿಸಲಾಗುತ್ತಿತ್ತು. ಧ್ವಜದ ಕಂಬ ಶಿಥಿಲಗೊಂಡಿದ್ದರಿಂದ ಕೆರಗೋಡು ಮತ್ತು ಸುತ್ತಮುತ್ತಲಿನ ೧೨ ದೊಡ್ಡಿಗಳ ಹನುಮ ಭಕ್ತ ಗ್ರಾಮಸ್ಥರು ನಾಡದೇವತೆ ಶ್ರೀಚಾಮುಂಡೇಶ್ವರಿಯನ್ನು ಹೊತ್ತೊಯ್ಯುತ್ತಿದ್ದ ಅರ್ಜುನ ಆನೆಯ ನೆನಪಿಗಾಗಿ ೧೦೮ ಅಡಿಯ ಭವ್ಯವಾದ ಅರ್ಜುನ ಧ್ವಜಸ್ತಂಭವನ್ನು ನಿರ್ಮಿಸಲು ೪ ರಿಂದ ೫ ಲಕ್ಷ ರು. ದೇಣಿಗೆ ಸಂಗ್ರಹಿಸಿ ಧ್ವಜಸ್ತಂಭ ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಹಬ್ಬಗಳು ಮತ್ತು ನಾಡಹಬ್ಬದ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಹನುಮ ಧ್ವಜ ಹಾರಿಸಲು ಅನುಮತಿ ಕೋರಿ ಕೆರಗೋಡು ಗ್ರಾಪಂಗೆ ಅರ್ಜಿ ಸಲ್ಲಿಸಲಾಗಿದೆ. ೨೯ ನವೆಂಬರ್ ೨೦೨೩ ಹಾಗೂ ೨೯ ಡಿಸೆಂಬರ್ ೨೦೨೩ರಂದು ಕೆರಗೋಡು ಗ್ರಾಪಂ ಸಾಮಾನ್ಯಸಭೆಯಲ್ಲಿ ಚರ್ಚೆಗೆ ಇಟ್ಟು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಸಭೆಯಲ್ಲಿ ಪಂಚಾಯ್ತಿಯ ೨೨ ಸದಸ್ಯರಲ್ಲಿ ೧೮ ಸದಸ್ಯರು ಹನುಮಧ್ವಜ ಹಾರಾಟಕ್ಕೆ ಒಮ್ಮತದ ಅಂಗೀಕಾರ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುಟಿಲ ನೀತಿಯಿಂದಾಗಿ ಅರ್ಜುನ ಧ್ವಜಸ್ತಂಭದಲ್ಲಿದ್ದ ಶ್ರೀ ಹನುಮಧ್ವಜವನ್ನು ಇಳಿಸಿ ಹಿಂದೂ ಧರ್ಮಕ್ಕೆ, ಹಿಂದೂ ಧರ್ಮದವರ ಭಾವನೆಗಳಿಗೆ ಅವಮಾನ ಮಾಡಿದ್ದಾರೆ. ಮತ್ತೆ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿ ಬಂದ್ ಆಚರಿಸಲಾಗುತ್ತಿದ್ದು, ಇದಕ್ಕೆ ಎಲ್ಲರೂ ಬೆಂಬಲ ಸೂಚಿಸುವಂತೆ ವಿಶ್ವ ಹಿಂದೂ ಪರಿಷತ್ ಕಾರ್ಯದಶರ್ಶಿ ಬಸವರಾಜು ಮನವಿ ಮಾಡಿದ್ದಾರೆ.

ಬಲವಂತದ ಬಂದ್ ಮಾಡಿದರೆ ಕ್ರಮ: ಡಾ.ಕುಮಾರ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಬಂದ್ ಕರೆ ನೀಡಿದ್ದರ ಸಂಬಂಧ ಪ್ರಗತಿಪರ ಸಂಘಟನೆಯವರು ಮತ್ತು ವಿಶ್ವ ಹಿಂದೂಪರಿಷತ್, ಬಜರಂಗದಳ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿ ಪ್ರಗತಿಪರ ಸಂಘಟನೆಯವರು ಬಂದ್ ಕೈಬಿಟ್ಟಿದ್ದರು. ಆದರೆ, ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಆ ನಂತರ ತಿಳಿಸುವುದಾಗಿ ಹೇಳಿ ಮಂಡ್ಯ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಶಾಂತಿಯುತವಾಗಿ ಬಂದ್ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಒಮ್ಮೆ ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಶಾಂತಿ ಕದಡುವಂತೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದು, ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವುದಕ್ಕೆ ಮುಂದಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿರುವ ಧ್ವಜಕಂಬದಲ್ಲಿ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜ ಮತ್ತು ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸುವುದಕ್ಕಷ್ಟೇ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರನ್ನು ತಪ್ಪುದಾರಿಗೆ ಎಳೆಯುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಮ್ಮದು ಯಾವಾಗಲೂ ತಟಸ್ಥ ನೀತಿ: ಕೆ.ಪ್ರಭಾಕರ್

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಹನುಮಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಫೆ.೯ರಂದು ಕರೆ ನೀಡಿರುವ ಮಂಡ್ಯ ಬಂದ್‌ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಬೆಂಬಲವಿಲ್ಲ ಎಂದು ಅಧ್ಯಕ್ಷ ಕೆ.ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ.

ಬಂದ್‌ನಿಂದ ವ್ಯಾಪಾರ- ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡರೆ ವರ್ತಕರು ಮತ್ತು ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗುವರು. ಹಾಗಾಗಿ ನಾವು ಬಂದ್‌ನ್ನು ಬೆಂಬಲಿಸುವುದಿಲ್ಲ. ನಮ್ಮ ವಾಣಿಜ್ಯ ಮಂಡಳಿ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ನಮಗೆ ಎಲ್ಲ ಪಕ್ಷಗಳ ಅಗತ್ಯವಿದೆ. ಈ ರೀತಿಯ ರಾಜಕೀಯ ಬಂದ್‌ನ್ನು ನಾವು ಹಿಂದೆಯೂ ಬೆಂಬಲಿಸಿಲ್ಲ, ಮುಂದೆಯೂ ಬೆಂಬಲಿಸುವುದಿಲ್ಲ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಮ್ಮದು ಯಾವಾಗಲೂ ತಟಸ್ಥ ನೀತಿ. ನಾವು ಯಾವುದೇ ಬಂದ್‌ನ್ನು ಬೆಂಬಲಿಸುವುದಿಲ್ಲ. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಂಡರೆ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ ಎಂದು ಅವರು ಹೇಳಿದ್ದಾರೆ.