ಸಾರಾಂಶ
ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿ ತಲುಪಿಲ್ಲ.ಧ್ವಜಸ್ತಂಭದ ಬಳಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಬುಧವಾರವೂ ಮುಂದುವರೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿ ತಲುಪಿಲ್ಲ.
ಎಲ್ಲೆಲ್ಲೂ ಭಯದ ವಾತಾವರಣ ನೆಲೆಸಿದ್ದು, ಧ್ವಜಸ್ತಂಭದ ಬಳಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಬುಧವಾರವೂ ಮುಂದುವರೆದಿದೆ.
ಗಲಾಟೆ, ಘರ್ಷಣೆಗೆ ಕಾರಣರಾದವರಿಗಾಗಿ ಪೊಲೀಸರು ಹುಡುಕಾಟ ನಡೆಸುವ ಕಾರ್ಯ ಮುಂದುವರೆದಿದೆ. ಗ್ರಾಮದ ಬಾಲಕನೊಬ್ಬನನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿರುವುದು ಗ್ರಾಮಸ್ಥರನ್ನು ಕೆರಳಿಸುವಂತೆ ಮಾಡಿದೆ.
ಇದರ ನಡುವೆ ಬಿಜೆಪಿ ನಿಯೋಗ ಭಾನುವಾರ ಕೆರಗೋಡಿನಲ್ಲಿ ಮತ್ತು ಸೋಮವಾರ ಮಂಡ್ಯದಲ್ಲಿ ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದ ಗಾಯಗೊಂಡವರನ್ನು ಬಿಜೆಪಿ ನಿಯೋಗ ಬುಧವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಅವರಿಗೆ ಹಣ್ಣು-ಹಂಪಲುಗಳನ್ನು ನೀಡಿದರು.
ಕೆರಗೋಡು ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರ ಜೊತೆ ಬಿಜೆಪಿ ನಾಯಕರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದರು.
ಗುರುವಾರದಿಂದ ಹೋರಾಟವನ್ನು ಬೇರೆ ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ಮಾತುಕತೆ ಮೂಲಕ ತೀರ್ಮಾನಿಸಲು ಮುಂದಾಗಿದ್ದರು.
ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಅಶೋಕ್ ಜಯರಾಂ, ನಗರ ಘಟಕ ಅಧ್ಯಕ್ಷ ವಿವೇಕ್, ಮಹೇಶ್, ಅಶೋಕ್, ಸಿ.ಟಿ.ಮಂಜುನಾಥ್, ಸೋಮಶೇಖರ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದರು.
ಬಾಲಕನ ಕರೆದೊಯ್ದು ವಿಚಾರಣೆ: ಪಾದಯಾತ್ರೆ ವೇಳೆ ಕಾಂಗ್ರೆಸ್ ಶಾಸಕನ ಫ್ಲೆಕ್ಸ್ ಹರಿದಿದ್ದ ಆರೋಪದ ಮೇರೆಗೆ ಕೆರಗೋಡು ಗ್ರಾಮದ ಬಾಲಕನನ್ನು ಕರೆದೊಯ್ದು ಪೊಲೀಸರ ವಿಚಾರಣೆ ನಡೆಸಿದರು.
ಬಾಲಕನ ಜೊತೆ ತಂದೆ ಪಾಪಣ್ಣನನ್ನು ಬೆಳ್ಳಂಬೆಳಿಗ್ಗೆ ಪೊಲೀಸರು ವಿಚಾರಣೆಗೆ ಕರೆದೊಯ್ದು ವಾಪಸ್ ಕಳುಹಿಸಿದ್ದರು.
ವಿಚಾರ ತಿಳಿದು ಬಾಲಕನ ಮನೆಗೆ ಆಗಮಿಸಿದ ಬಿಜೆಪಿ ನಿಯೋಗವನ್ನು ತಂದೆ ಬಾಗಿಲ ಬಳಿಯೇ ತಡೆದು ನಿಲ್ಲಿಸಿದರು. ನಂತರ ಬಾಗಿಲು ಹಾಕಿಕೊಂಡು ನೀವು ನಮ್ಮ ಮನೆಗೆ ಬರೋದು ಬೇಡ. ನಮಗೆ ರಾಜಕೀಯ ಬೇಡವೇ ಬೇಡ. ಯಾವ ಧ್ವಜವಾದರೂ ಹಾರಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಮನೆಯ ಬಾಗಿಲನ್ನು ತೆರೆಸಿ ಸಮಾಧಾನಪಡಿಸಿ ಧೈರ್ಯ ಹೇಳಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ನಾವೇನು ರೇಪು, ದರೋಡೆ ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಡಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.
ಪೊಲೀಸರು 9ನೇ ತರಗತಿ ಹುಡುಗನನ್ನ ಠಾಣೆಗೆ ಕರೆದೊಯ್ದಿದ್ದಾರೆ. ಹನುಮಧ್ವಜ ಹೋರಾಟದಲ್ಲಿ ಭಾಗಿಯಾದವರನ್ನ ಹೆದರಿಸಿ ಬೆದರಿಸಲಾಗುತ್ತಿದೆ. ಬಾಲಕನ ತಂದೆ-ತಾಯಿ ತುಂಬಾ ಹೆದರಿಕೊಂಡಿದ್ದಾರೆ.
ಈ ರೀತಿ ಭಯದ ವಾತಾವರಣದಲ್ಲಿ ಜನರನ್ನು ಇಟ್ಟಿರುವುದು ಖಂಡನೀಯ ಎಂದು ಸುದ್ದಿಗಾರರಿಗೆ ಡಾ.ಇಂದ್ರೇಶ್ ತಿಳಿಸಿದರು.