ಗಂಜಾಂ ನ ಬ್ಯುಸಿಗೌಡ ವೃತ್ತ, ಪೇಟೆ ಬೀದಿ ನಂತರ ಗೋರಿ ಸರ್ಕಲ್ ಮೂಲಕ ಹೆಜ್ಜೆ ಹಾಕಿದ ಪೊಲೀಸರು ಮೈಸೂರು - ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಹಾದು ಪಟ್ಟಣದ ಬಸ್ ನಿಲ್ದಾಣದ ಮೂಲಕ ಕೋಟೆದ್ವಾರ ಪ್ರವೇಶಿಸಿ ಪುರಸಭೆ ವೃತ್ತದ ಬಳಿಯ ಜಾಮೀಯಾ ಮಸೀದಿ ಪಕ್ಕದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿ ಶ್ರೀರಂಗನಾಥ ದೇವಾಲಯದ ಬಳಿ ಅಂತ್ಯಗೊಳಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹನುಮ ಜಯಂತಿ ಅಂಗವಾಗಿ ಡಿ.3ರಂದು ನಡೆಯುವ ಹನುಮ ಮಾಲಾ ಸಂಕೀರ್ತನ ಯಾತ್ರೆ ಅಂಗವಾಗಿ ಪೊಲೀಸರು ಪಟ್ಟಣ ಹಾಗೂ ಗಂಜಾಂನಲ್ಲಿ ಪಥ ಸಂಚಲನ ನಡೆಸಿದರು.ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ ತೆರಳಲಿರುವ ಮಾರ್ಗದ ಗಂಜಾಂನ ಶ್ರೀನಿಮಿಷಾಂಬ ದೇವಾಲಯ ಬಳಿ ಇರುವ ಆಂಜನೇಯ ಬಳಿ ಹಿರಿಯ ಪೊಲೀಸ್ ಅಧಿಕಾರಿಗಳು, ಡಿಎಆರ್, ಕೆಎಸ್‍ಆರ್ ಪಿ ತುಕಡಿಗಳು, ಪೊಲೀಸರು ಹಾಗೂ ಗೃಹರಕ್ಷಕದಳ ಸಿಬ್ಬಂದಿ ಪಥ ಸಂಚಲನ ನಡೆಸಿದರು.
ಗಂಜಾಂ ನ ಬ್ಯುಸಿಗೌಡ ವೃತ್ತ, ಪೇಟೆ ಬೀದಿ ನಂತರ ಗೋರಿ ಸರ್ಕಲ್ ಮೂಲಕ ಹೆಜ್ಜೆ ಹಾಕಿದ ಪೊಲೀಸರು ಮೈಸೂರು - ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಹಾದು ಪಟ್ಟಣದ ಬಸ್ ನಿಲ್ದಾಣದ ಮೂಲಕ ಕೋಟೆದ್ವಾರ ಪ್ರವೇಶಿಸಿ ಪುರಸಭೆ ವೃತ್ತದ ಬಳಿಯ ಜಾಮೀಯಾ ಮಸೀದಿ ಪಕ್ಕದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿ ಶ್ರೀರಂಗನಾಥ ದೇವಾಲಯದ ಬಳಿ ಅಂತ್ಯಗೊಳಿಸಿದರು.ರಸ್ತೆ ಮಾರ್ದ ದುದ್ದಕ್ಕೂ ಬ್ಯಾರಿಕೇಡ್, ಸಿಸಿ ಕ್ಯಾಮೆರಾ ಅಳವಡಿಸಿ, ಪುರಸಭೆ ವೃತ್ತದ ಬಳಿಯ ಜಾಮೀಯಾ ಮಸೀದಿ ಸುತ್ತಲೂ 12 ಅಡಿ ಎತ್ತರಲ್ಲಿ ತಂತಿ ಬೇಲಿಯಂತೆ ಕಬ್ಬಿಣದ ಸರಳು ಗೋಡೆಗಳನ್ನು ನಿರ್ಮಿಸಿ ಬಾರಿ ಬಂದೂಬಸ್ತ್ ಮಾಡಲಾಗಿದೆ.
ಸಾವಿರಾರು ಪೊಲೀಸರ ನಿಯೋಜನೆ:ಹನುಮ ಮಾಲಾಧಾರಿಗಳ ಯಾತ್ರೆ ಮಾರ್ಗ ಸೇರಿದಂತೆ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶವಾದ ಕಾರಣ 1 ಐಜಿ, 2 ಎಸ್ಪಿ, 6 ಎಎಸ್‌ಪಿ, 10 ಡಿವೈಎಸ್ಪಿ 40 ಇನ್ಸ್ ಪೆಕ್ಟರ್ , 100 ಪಿಎಸ್ ಐ ಸೇರಿದಂತೆ ಸುಮಾರು 1800 ಮಂದಿ ಪೊಲೀಸ್ ಸಿಬ್ಬಂದಿ ಜೊತೆಗೆ 4 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿ ಮತ್ತು 300 ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾ, ವಜ್ರ ಪೊಲೀಸರು, ಜೊತೆಗೆ ಟಿಪ್ಪು ಮಸೀದಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಡ್ರೋನ್ ಕ್ಯಾಮೆರಾ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಸಾರ್ವಜನಿಕ ಸಭೆ:ಅಂದು ಬೆಳಗ್ಗೆ 10 ಗಂಟೆ ಸಮಯಕ್ಕೆ ಪಟ್ಟಣದ ನಿಮಿಷಾಂಬ ದೇವಾಲಯದ ಆವರಣದಲ್ಲಿ ಮಾಲಾಧಾರಿಗಳ ಸಾರ್ವಜನಿಕ ಸಭೆ ನಡೆಯಲಿದೆ. ನಂತರ ಮೆರವಣಿಗೆ ಪ್ರಾರಂಭಗೊಂಡು ಪಟ್ಟಣದ ಕೋಟೆ ದ್ವಾರದ ಮೂಲಕ ಮೂಡಲ ಬಾಗಿಲು ಆಂಜನೇಯಸ್ವಾಮಿ ದರ್ಶನ ಪಡೆದು ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ಅದೇ ಮೈದಾನದಲ್ಲಿ ಮಾಲಾ ವಿಸರ್ಜನೆ ಹಾಗೂ ಪ್ರಸಾದ ವಿತರಣೆ ಜರುಗಲಿದೆ.
ಮಂಡ್ಯ, ವಿವಿಧ ತಾಲೂಕುಗಳು ಸೇರಿದಂತೆ ಮೈಸೂರು, ಹಾಸನ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಯಿಂದ ಮಾಲಾಧಾರಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.