ಮೆರವಣಿಗೆಯ ಉದ್ದಕ್ಕೂ ಹಿಂದೂ ಹಾಗೂ ಹನುಮಾ ಮಾಲಾಧಾರಿಗಳು ಜೈ ಶ್ರೀರಾಂ, ಭಜರಂಗಿ ಭಜರಂಗಿ ಘೋಷಣೆಗಳು ಮೊಳಗಿದವು. ಮಾಲಾಧಾರಿಗಳು ಭಗವಾಧ್ವಜಗಳನ್ನು ಬೀಸಿದರು. ದಾರಿಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಮಾಡಿದರು. ಪುಟ್ಟಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮಂತ ವೇಷ ತೊಟ್ಟು ಗಮನ ಸೆಳೆದರು.

ಶ್ರೀರಂಗಪಟ್ಟಣ : ಪಟ್ಟಣದ ಜಾಮೀಯ ಮಸೀದಿ ಬಳಿ ಪೊಲೀಸರೊಂದಿಗೆ ಹನುಮ ಮಾಲಾಧಾರಿಗಳ ಮಾತಿನ ಚಕಮಕಿ ಹೊರತು ಪಡಿಸಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನ ಯಾತ್ರೆ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು.

ಪಟ್ಟಣದ ಹೊರವಲಯದ ಗಂಜಾಂನ ನಿಮಿಷಾಂಬ ದೇಗುಲದ ಕಾವೇರಿ ನದಿ ದಂಡೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಹಿಂದೂ ಮುಖಂಡ ಲೋಹಿತ್ ರಾಜ್ ಅರಸ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಆಂಜನೇಯಮೂರ್ತಿ ಜೊತೆಗೆ ವಿವಿಧ ಸ್ತಬ್ಧ ಚಿತ್ರಗಳು ಹಾಗೂ ಹನುಮ ಮಾಲಾಧಾರಿಗಳ ಮೆರವಣಿಗೆ ಗಂಜಾಂನ ಬೇಸಿಗೆ ಅರಮನೆ, ಆಸ್ಪತ್ರೆ, ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪುರಾತನ ಕೋಟೆ ದ್ವಾರದಲ್ಲಿ ಯಾತ್ರೆ ಸಂಚರಿಸಿ ಮಧ್ಯಾಹನ ವೇಳೆಗೆ ಐತಿಹಾಸಿಕ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ತಲುಪಿತು.

ಮೆರವಣಿಗೆಯ ಉದ್ದಕ್ಕೂ ಹಿಂದೂ ಹಾಗೂ ಮನುಮಾ ಮಾಲಾಧಾರಿಗಳು ಜೈ ಶ್ರೀರಾಂ, ಭಜರಂಗಿ ಭಜರಂಗಿ ಘೋಷಣೆಗಳು ಮೊಳಗಿದವು. ಮಾಲಾಧಾರಿಗಳು ಭಗವಾಧ್ವಜಗಳನ್ನು ಬೀಸಿದರು. ದಾರಿಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಮಾಡಿದರು. ಪುಟ್ಟಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮಂತ ವೇಷ ತೊಟ್ಟು ಗಮನ ಸೆಳೆದರು.

ಮಂಡ್ಯ ಮಾತ್ರವಲ್ಲದೆ ರಾಮನಗರ, ಮೈಸೂರು, ಮದ್ದೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಹನುಮ ಭಕ್ತರು ಈ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ:

ಇದಕ್ಕೂ ಮುನ್ನ ಪಟ್ಟಣದ ಜಾಮೀಯ ಮಸೀದಿ ಪಕ್ಕದ ಪುರಸಭೆ ವೃತ್ತದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಕರ್ಪೂರ ಹಚ್ಚಿ ಕೆಲ ಕಾಲ ರಸ್ತೆಯಲ್ಲೇ ಕುಳಿತು ರಾಮ ಹಾಗೂ ಆಂಜನೇಯಸ್ವಾಮಿ ಭಜನೆ ನಡೆಸಿದರು. ನಂತರ ರಕ್ತದ ಕಣ ಕಣ ಕುದಿಯುತ್ತಿದೆ ಹಿಂದೂ, ಹಿಂದೂ ಎನ್ನುತ್ತಿದೆ. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೆ ಕಟ್ಟುವೆವು, ಕಟ್ಟುವೆವು ಮಂದಿರವಿಲ್ಲೆ ಕಟ್ಟುವೆವು ಎಂದು ಘೋಷಣೆ ಕೂಗಿದರು.

ಇದೇ ವೇಳೆ ಜಾಮಿಯಾ ಮಸೀದಿ ಬಳಿ ವೃತ್ತದಲ್ಲಿ 4 ನಿಂಬೆಹಣ್ಣು ಇಟ್ಟು, ಬೂದುಕುಂಬಳ ಕಾಯಿ ಮೇಲೆ ಕರ್ಪೂರ ಹಚ್ಚಿದ ಮಾಲಾಧಾರಿಗಳು ಇಳಿ ತೆಗೆದು ಕುಂಬಳಕಾಯಿ ಹೊಡೆದು ಮಸೀದಿ ಕಡೆ ಕೈ ಮಾಡಿ ಆ ಜಾಗ ನಮ್ಮದು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಈ ವೇಳೆ ಪೊಲೀಸರು ಅವರನ್ನು ತಡೆದು ಮುಖ್ಯ ರಸ್ತೆಯಲ್ಲಿ ತೆರಳಲು ಸೂಚಿಸುತ್ತಿದ್ದ ವೇಳೆ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಹೊತ್ತು ನೂಕುನುಗ್ಗಲು, ತಳ್ಳಾಟ, ನೂಕಾಟ ಉಂಟಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿವಾದಿತ ಸ್ಥಳವಾದ ಜಾಮಿಯಾ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಿದ್ದರೂ ಹನುಮ ಭಕ್ತರು ಮಸೀದಿ ಬಳಿ ನುಗ್ಗಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದರು.

ಹೊರ ಜಿಲ್ಲೆ ಸೇರಿದಂತೆ ಜಿಲ್ಲಾದ್ಯಂತ ಆಗಮಿಸಿದ ಭಕ್ತಾದಿಗಳು, ಹನುಮಮಾಲಾ ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಇದ್ದರು. ಬಳಿಕ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಹನುಮಮಾಲಾಧಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಯುದ್ದಕ್ಕೂ ಭಕ್ತರು ಹಾಗೂ ದಾನಿಗಳು ಬಾದಾಮಿ ಹಾಲು, ಮಜ್ಜಿಗೆ, ಪಾನಕ, ಮೋಸುಂಬಿ, ಕತ್ತಳೆ, ಸಪೋಟ, ಬಾಳೆ ಹಣ್ಣು ಸೇರಿದಂತೆ ಇತರೆ ತಿನುಸುಗಳನ್ನು ನೀಡಿ, ಮೆರವಣಿಗೆಗೆ ಶುಭ ಕೋರಿದರು.

ಎಲ್ಲೆಡೆ ಪೊಲೀಸರ ಸರ್ಪಗಾವಲು:

ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಗಂಜಾಂನಿಂದ ಪಟ್ಟಣದ ಸುಮಾರು 4 ಕಿ.ಮೀ ವರೆಗೆ ಪೊಲೀಸರು ಭದ್ರತೆ ಕೈಗೊಂಡಿದ್ದರು. ಮೆರವಣಿಗೆ ಮಾರ್ಗ ಸೇರಿ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 1 ಐಜಿ, 2 ಎಸ್ಪಿ, 6 ಎಎಸ್‌ಪಿ, 10 ಡಿವೈಎಸ್ಪಿ ಸೇರಿದಂತೆ 1800 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜೊತೆಗೆ 4 ಡಿಎಆರ್, 2 ಕ್ಯೂಆರ್‌ಟಿ, 8 ಕೆಎಸ್‌ಆರ್‌ಪಿ ತುಕಡಿ ಮತ್ತು 300 ಗೃಹ ರಕ್ಷಕ ದಳ ಸಿಬ್ಬಂದಿ ಭದ್ರತೆಗಾಗಿ ಎಲ್ಲೆಡೆ ಸರ್ಪಗಾವಲು ಹಾಕಲಾಗಿತ್ತು. ಮಸೀದಿ ಬಳಿ ಹೆಚ್ಚಿನ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಡ್ರೋನ್ ಕ್ಯಾಮೆರಾ ಸೇರಿದಂತೆ ಹತ್ತಾರು ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.