ಹಿರಿಯೂರು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾಗಿ ಎನ್.ಹನುಮಂತರಾಯಪ್ಪನವರನ್ನು ಆಯ್ಕೆ ಮಾಡಿದ ಆದೇಶ ಪ್ರತಿಯನ್ನು ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅತ್ತ ಜೆಡಿಎಸ್ ಪಕ್ಷದ ಮುಖಂಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆ.ಶಂಕರ್‌ಮೂರ್ತಿಯವರು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ ಎಂದು ಪತ್ರಿಕೆಗಳಿಗೆ ಫೋಟೋ ಸಮೇತ ಸುದ್ದಿ ನೀಡುತ್ತಾರೆ. ಅದಾಗಿ ಮೂರ್ನಾಲ್ಕು ಗಂಟೆಗಳಲ್ಲೇ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ರವರು ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಹಿಂದಿನ ತಾಲೂಕು ಅಧ್ಯಕ್ಷ ಎನ್.ಹನುಮಂತರಾಯಪ್ಪನವರನ್ನೇ 2ನೇ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಆದೇಶ ಪತ್ರ ನೀಡುತ್ತಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪದವಿಗಾಗಿ ನಡೆಯುತ್ತಿದ್ದ ಈ ಕೆರೆ ದಡ ಆಟಕ್ಕೆ ಶುಕ್ರವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತೆರೆ ಎಳೆದಿದ್ದಾರೆ.

ಜೆಡಿಎಸ್ ಪಕ್ಷದ ಹಿರಿಯೂರು ತಾಲೂಕು ಅಧ್ಯಕ್ಷರನ್ನಾಗಿ ಮಸ್ಕಲ್ ಮಟ್ಟಿ ಎನ್.ಹನುಮಂತರಾಯಪ್ಪನವರನ್ನು 2ನೇ ಅವಧಿಗೆ ಮುಂದುವರಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಹೇಳಿದರು.

ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಮಾ.5ರ ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರು ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿಯವರು ಹಿರಿಯೂರು ತಾಲೂಕು ಅಧ್ಯಕ್ಷ ಹನುಮಂತರಾಯಪ್ಪನವರನ್ನು ಮುಂದುವರೆಸಲು ಆದೇಶಿಸಿದ್ದು ಆ ಪ್ರಕಾರವಾಗಿ 2ನೇ ಅವಧಿಗೆ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸುವ ಆದೇಶ ನೀಡಿದ್ದೇವೆ ಎಂದರು.

ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆ. ಹಿರಿಯರ ಸಲಹೆ ಸೂಚನೆ ಜೊತೆಗೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಬರುವ ದಿನಗಳಲ್ಲಿನ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವತ್ತ ಇಂದಿನಿಂದಲೇ ಕಾರ್ಯಪ್ರವೃತ್ತರಾಗುತ್ತೇನೆ ಎಂದರು.

ಈ ವೇಳೆ ಮುಖಂಡರಾದ ಪರಮೇನಹಳ್ಳಿ ಮಹಾಲಿಂಗಪ್ಪ, ಮೇಟಿಕುರ್ಕೆ ಹನುಮಂತಪ್ಪ, ಪೂ.ತಿಮ್ಮಯ್ಯ, ಗಾರೆ ತಿಮ್ಮಯ್ಯ, ನಿಸಾರ್, ಬೋರನಕುಂಟೆ ಕರಿಯಣ್ಣ, ಬಸವರಾಜ್, ಗುಡ್ಡದ ರಂಗಪ್ಪ, ರುದ್ರಣ್ಣ, ಶ್ರೀರಂಗಪ್ಪ, ಲೋಕೇಶ್, ಹುಲುಗಲಕುಂಟೆ ರಾಘು, ಪಿಲಾಜನಹಳ್ಳಿ ರಾಜಣ್ಣ, ಪಾತಲಿಂಗಪ್ಪ, ಅಪ್ಪಾಜಿ, ಶಿವು ಮುಂತಾದವರು ಹಾಜರಿದ್ದರು.