ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಾಸಕ ಎಂ. ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಉಪಸ್ಥಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.ಬೂದುಬಾಳು ಶ್ರೀನಿವಾಸ್ ದೂರು:
ಹನೂರು ತಾಲೂಕಿನ ವಿವಿಧ ಗ್ರಾಮಗಳ ಜನಸಾಮಾನ್ಯರ ಸಮಸ್ಯೆಗಳ. ಜನತಾ ದರ್ಶನದಲ್ಲಿ ಮೊದಲಿಗೆ ಬೂದುಬಾಳು ಶ್ರೀನಿವಾಸ್ ಎಂಬ ಅರ್ಜಿದಾರ ಮಾತನಾಡಿ, 10 ವರ್ಷದಿಂದ ಖಾತೆ ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಾರೆ ಆಗಾಗಿ ಖಾತೆ ಮಾಡಿಸಿಕೊಡಬೇಕೆಂದರು. ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮೇಲ್ನೋಟಕ್ಕೆ ಖಾತೆ ಮಾಡಲು ಅರ್ಹತೆ ಇದ್ದು ಇನ್ನೂ 15 ದಿನದೊಳಗೆ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮವಹಿಸಬೇಕೆಂದು ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಸೂಚನೆ ನೀಡಿದರು.ಅರ್ಜಿದಾರ ಚಂಗಡಿ ಕರಿಯಪ್ಪ ದೂರು: ಅರ್ಜಿದಾರ ಚಂಗಡಿ ಕರಿಯಪ್ಪ ಮಾತನಾಡಿ, ಚಂಗಡಿ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು, ವಿದ್ಯುತ್ ಸೌಕರ್ಯ, ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಇನ್ನಿತರೆ ವಿಷಯಗಳ ಬಗ್ಗೆ ಮನವಿ ಮಾಡಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಚಂಗಡಿ ಪುನರ್‌ವಸತಿ ಸರ್ಕಾರದ ಹಂತದಲ್ಲಿ ಇದೆ ಎಂದು ಮಾಹಿತಿ ನೀಡಿದರು. ಜನವನ ಸಾರಿಗೆ ವ್ಯವಸ್ಥೆ ಮತ್ತೆ ಪ್ರಾರಂಭಿಸಲಾಗಿದೆ ಎಂದರು. ಇದೇ ವಿಚಾರವಾಗಿ ಶಾಸಕ ಮಂಜುನಾಥ್ ಮಾತನಾಡಿ, ಚಂಗಡಿ ಪುನರ್ವಸತಿ ವಿಚಾರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಮತ್ತು ರಸ್ತೆ ಅನುಕೂಲಕ್ಕೆ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ತಮಿಳುನಾಡಿನ ಜಾನುವಾರುಗಳಿಗೆ ಇಲ್ಲಿ ಅವಕಾಶ ನೀಡದಿರಲು ಪಶು ಇಲಾಖೆ ಗುರುತು ಪತ್ತೆ ಹಚ್ಚುವ ಮುದ್ರೆಗಳನ್ನು ಜಾನುವಾರುಗಳಿಗೆ ಅಳವಡಿಸಬೇಕು. ಬಹಳ ವರ್ಷಗಳ ಬಳಿಕ ಕಾಡಂಚಿನ ಗ್ರಾಮಗಳ ರಸ್ತೆ ಮತ್ತು ವಿದ್ಯುತ್ ಸೌಕರ್ಯ ಶಾಶ್ವತವಾಗಿ ದೊರಕುತ್ತಿದೆ.
ಈ ಕಾರ್ಯಗಳು ನಡೆಯಲು ಕಾಲಾವಕಾಶ ಬೇಕಾಗಿದೆ ಎಂದರು. ಶಾಸಕ ಎಂ.ಆರ್.ಮಂಜುನಾಥ್ ರೈತ ಮುಖಂಡ ಚಂಗಡಿ ಕರಿಯಪ್ಪ ಅವರನ್ನು ಉದ್ದೇಶಿಸಿ ರೈತರು ವಿನಾ ಕಾರಣ ಪ್ರತಿಭಟನೆ ನಡೆಸಿ ಆರೋಪ ಮಾಡುವುದಕ್ಕೂ ಮುನ್ನ ರೈತ ಸಂಘಟನೆಯ ಒಬ್ಬರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಡನೆ ಇದ್ದು ಕಾರ್ಯವೈಖರಿ ಅರಿತು ನಂತರ ನಿಮ್ಮ ಹೋರಾಟ ಮುಂದುವರೆಸಿ ಎಂದು ಚಾಟಿ ಬೀಸಿದ ಪ್ರಸಂಗ ಜರುಗಿತು.ರೈತ ಮುಖಂಡ ಶಾಂತಕುಮಾರ್ ಮಾತನಾಡಿ 2019-20 ನೇ ಸಾಲಿನ ಬೋರ್ ವೆಲ್ ಸೌಕರ್ಯ ದೊರಕದೇ ಇರುವುದರ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿ ರಾಜ್ಯ ಮಟ್ಟದಲ್ಲಿ ಸಮಸ್ಯೆ ಇದ್ದು ಬಗೆಹರಿಯುವ ಹಂತದಲ್ಲಿದೆ ಎಂದರು.ರೈತ ಮುಖಂಡ ಪ್ರಸಾದ್ ಮಣಿಗಾರ್ ಶಾಲಾ ಅವಧಿಗೆ ಬಸ್ ಸೌಕರ್ಯ ಇಲ್ಲದೇ ಇರುವ ಕಾರಣ ಶಿಕ್ಷಕರು ತಡವಾಗಿ ಬರುವುದು, ಬೇಗಾ ಹೊರಡುವುದು ಮಾಡುತ್ತಿದ್ದಾರೆ ಎಂದು ಆಪಾದಿಸಿದರು, ಇದಕ್ಕೆ ಶಾಸಕ ಮಂಜುನಾಥ್ ಮಾತನಾಡಿ, ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರಿಗೆ ಅಗತ್ಯ ಕ್ರಮವಹಿಸಲು ಸೂಚಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಡಿಸಿ:ಜನತಾ ದರ್ಶನದಲ್ಲಿ ಮಹಿಳೆಯೋರ್ವರು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಂತೆ ಸಿಡಿಪಿಒ ಅಧಿಕಾರಿಯನ್ನು ಕರೆಯಿಸಿಕೊಂಡ ಜಿಲ್ಲಾಧಿಕಾರಿಗಳು ಇವರಿಗೆ ಇಲ್ಲಿಯೇ ಅನುಕೂಲ ದೊರೆಯಲು ಕ್ರಮವಹಿಸಿ ಎಂದರು. ಮತ್ತೊರ್ವ ಮಹಿಳೆ ತ್ರಿಚಕ್ರ ವಾಹನ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಯವರನ್ನು ಕರೆಯಿಸಿ ಆದ್ಯತೆ ಮೇರೆಗೆ ಸೌಕರ್ಯವನ್ನು ಒದಗಿಸಿ ಎಂದು ಒತ್ತಾಯಿಸಿದರು.
ಆರ್‌ಟಿಐ ಕಾರ್ಯಕರ್ತ ದಶರಥ್ ದೊಡ್ಡಾಣೆಗೆ ರಸ್ತೆ ಸೌಕರ್ಯ ಕಲ್ಪಿಸಿ ಹಾಗೂ ಇನ್ನಿತರೆ ಕಂದಾಯ ಅರಣ್ಯ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಮಾತನಾಡಿ, ರಸ್ತೆ ವಿದ್ಯುತ್ ಅಭಿವೃದ್ಧಿಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಕಾಲವಕಾಶ ಬೇಕು ಎಂದರು. ಮಂಗಲ ಗ್ರಾಮದ ವಸಂತ ಗ್ರಾಮದಲ್ಲಿ ಮಹಿಳಾ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡಬೇಕು, ಮಂಗಲ ಗ್ರಾಮದ ಮೂಲಕ ಹಾದು ಹೋಗುವ ಬೆಂಗಳೂರು ಮೈಸೂರು ಇನ್ನಿತರೆ ನಗರ ಪ್ರದೇಶಗಳಿಗೆ ತೆರಳುವ ಸರ್ಕಾರಿ ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲ್ಲದೆ ಹೋಗುತ್ತಿದ್ದು ವಿದ್ಯಾರ್ಥಿಗಳು, ರೇಷ್ಮೆ ಮಾರಾಟಗಾರರು ಇನ್ನಿತರರ ಅನುಕೂಲಕ್ಕೆ ಸ್ಟಾಪ್ ನೀಡಬೇಕು. ಎಟಿಎಂ ಕೇಂದ್ರ ತೆರೆಯಬೇಕೆಂದು ಮನವಿ ಮಾಡಿದರು. 1976 -77 ರಲ್ಲಿ ಸರ್ಕಾರ ಉಳುಮೆ ಮಾಡಲು ಭೂಮಿ ನೀಡಿರುವ ರೈತರಿಗೆ ಆರ್.ಟಿ. ಸಿ ನೀಡಬೇಕು. 2000 ಈಚೆಗೆ ಆರ್.ಟಿ. ಸಿ ಬೇರೆಯವರ ಹೆಸರಿಗೆ ಅಕ್ರಮವಾಗಿ ಮಾಡಿಕೊಟ್ಟಿರುವದನ್ನು ರದ್ದು ಪಡಿಸಿ ವ್ಯವಸಾಯ ಹಾಗೂ ಅನುಭವ ಸ್ವಾಧಿನದಲ್ಲಿ ಇರುವವರಿಗೆ ಭೂಮಿ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿದರು.ಅಧಿಕಾರಿಗಳ ಪ್ರಶ್ನೆಗೆ ಮಂಜುನಾಥ್ ಸಾಂತ್ವಾನ:ರೈತ ಮುಖಂಡರುಗಳು, ಆರ್. ಟಿ. ಐ. ಕಾರ್ಯಕರ್ತರು, ಜನಪ್ರತಿನಿಧಿಗಳು ಮುಖಂಡರುಗಳು ಅಧಿಕಾರಿಗಳನ್ನು ತರಾಟೆ ಹಾಗೂ ಪ್ರಶ್ನಿಸಿದ ವೇಳೆ ಶಾಸಕ ಮಂಜುನಾಥ್ ಮಧ್ಯೆ ಪ್ರವೇಶಿಸಿ ಕೆಲವರಿಗೆ ಕೆಲವು ಸಂದರ್ಭದಲ್ಲಿ ಗರಂ ಆಗಿ, ಕೆಲವರಿಗೆ ಆಯ್ತು ಅಣ್ಣ, ಆಯ್ತು ಯಜಮಾನರೆ ಎಂದು ತಮ್ಮ ಚಾಣಕ್ಯತನದಿಂದ ಸಮಾಧಾನ ಮಾಡಿದ ಘಟನೆ ಕಂಡು ಬಂದಿತು.
ತಹಸೀಲ್ದಾರ್ ಕಚೇರಿ ಮಾರಾಟ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ: ಅಪ್ಪಾಜಿಆರ್.ಟಿ.ಐ.ಕಾರ್ಯಕರ್ತ ಅಪ್ಪಾಜಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಅವರ ಹಿಂದೆ ಹೋದರೆ ಕೆಲಸವಾಗುತ್ತದೆ. ಅಲ್ಲದೇ ಆರ್‌ಐ, ವಿಎಗಳು ಖಾತೆ, ವಿವಿಧ ಪಿಂಚಣಿ ಅನುಕೂಲ ಪಡೆಯಲು ಲಂಚ ಪಡೆಯುತ್ತಾರೆ. ತಾಲೂಕಿನ ವಿವಿಧಡೆ ಜಮೀನುಗಳ ಅಕ್ರಮ ವಹಿವಾಟು ಅತಿ ಹೆಚ್ಚಾಗಿ ನಡೆಯುತ್ತಿದೆ. ಆಗಾಗಿ ತನಿಖೆಗೆ ಒಳಪಡಿಸಬೇಕು. ಚಾಮುಂಡೇಶ್ವರಿ ನ್ಯಾಯಬೆಲೆ ಅಂಗಡಿ ವಿರುದ್ಧ ಆಹಾರ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ಪಟ್ಟಣದ ಪ್ರಕಾಶ್ ಮಾತನಾಡಿ, ಹನೂರು ಪಟ್ಟಣ ಪಂಚಾಯಿತಿಯಲ್ಲಿ ಕೆಲವು ಅನಧಿಕೃತ ನೌಕರರು ಪೌರಕಾರ್ಮಿಕರ ಹೆಸರಲ್ಲಿ 3 ವರ್ಷಗಳಿಂದ ಸುಮಾರು 74 ಲಕ್ಷ ರು. ಗಳ ವೇತನ ಪಡೆದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಇದೇ ರೀತಿ ಪಶು ಇಲಾಖೆ, ವಿದ್ಯುತ್ ಇಲಾಖೆ, ಕೃಷಿ ಇಲಾಖೆ, ತಾ.ಪಂ. ಅರಣ್ಯ ಇನ್ನಿತರೆ ಇಲಾಖೆಗಳಲ್ಲಿನ ಸಮಸ್ಯೆ ಹಾಗೂ ಪರಿಹಾರಕ್ಕೆ ಮನವಿ ಸಲ್ಲಿಸಿದರು.ಕನ್ನಡಿಗರ ವಿಜಯ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಗ್ಯ ವಿನೋದ್ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಿ, ಬಂಡಳ್ಳಿ ರಸ್ತೆ ಹಾಗೂ ರಾಮಾಪರ ರಸ್ತೆ ತೀರ ಹದಗೆಟ್ಟಿದೆ ಜೊತೆಗೆ ಕ್ಷೇತ್ರದಲ್ಲಿ ಜಲತ್ವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಮಲೆ ಮಹದೇಶ್ವರ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷಕುಮಾರ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.