ಕನ್ನಡಪ್ರಭ ವಾರ್ತೆ ಹನೂರು

ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾಲ್ಗುಣಿ ಅಮಾವಾಸ್ಯೆಯ ವಿಶೇಷ ಪೂಜಾ ಸೇವೆ ಮತ್ತು ಉತ್ಸವಗಳು ಸಾಲೂರು ಬೃಹನ್ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕವಾಗಿ ವಿಧಾನಗಳೊಂದಿಗೆ ಸಂಭ್ರಮ-ಸಡಗರದೊಂದಿಗೆ ಸರದಿ ಬೇಡಗಂಪಣ ಆರ್ಚಕರಿಂದ ನಡೆಸಲಾಯಿತು.

ಹನೂರು ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಹಾಶಿವರಾತ್ರಿ ಹಬ್ಬದ ಐದು ದಿನಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಮಹಾಶಿವರಾತ್ರಿ ಅಮಾವಾಸ್ಯೆ ವಿಶೇಷ ಪೂಜೆ ಬೆಳಗಿನ ಜಾವ 4ರಿಂದ ಬುಡಕಟ್ಟು ಸಮುದಾಯದ ಸಾಂಪ್ರದಾಯ ಪದ್ಧತಿಯಂತೆ ಅರಣ್ಯದಲ್ಲಿ ಸಿಗುವ ಹೂಗಳನ್ನು ಶೇಖರಣೆ ಮಾಡಿ ಮಾದೇಶ್ವರನಿಗೆ ಅಲಂಕಾರ ಗೊಳಿಸಿ ಧೂಪ ಅಭಿಷೇಕ ಭಸ್ಮಭಿಷೇಕ ಮತ್ತು ತುಂಬೆ ಹೂವಿನ ಅರ್ಚನೆ ಉತ್ಸವ ಮತ್ತು ಮಾದೇಶ್ವರನಿಗೆ ಪ್ರಿಯವಾದ ಪೊಂಗಲ್ ಮೆಣಸಿನ ಸಾಂಬಾರು ಬೆಲ್ಲದ ಅನ್ನ, ಎಳ್ಳು ಹುಂಡೆ, ಪಂಚಾಮೃತ ಅಭಿಷೇಕ, ಎಳ್ಳಿನಲ್ಲಿ ತೆಗೆದ ಎಣ್ಣೆಯಿಂದ ಮಾಡಿದ ಒಬ್ಬಟ್ಟು ಮಾದಪ್ಪನಿಗೆ ಅರ್ಪಿಸಿ ಬೆಳಗಿನ ಜಾವದವರೆಗೆ ನಡೆದ ಪೂಜೆಯ ನಂತರ ಮಹಾ ಮಂಗಳಾರತಿ ಪೂಜೆ ನಡೆಯಿತು.

ಆಲಂಬಾಡಿ ಬಸವನಿಗೆ ಹರಕೆ ಹೊತ್ತ ಭಕ್ತರಿಂದ ಪೂಜೆ:

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆಯುವ ಮುನ್ನ ದೇವಾಲಯದ ಮೇಲಂತಸ್ತಿನಲ್ಲಿ ಇರುವ ಆಲಂಬಡಿ ಬಸವನಿಗೆ ತಾವು ತಂದಿರುವ ದವಸ ಧಾನ್ಯಗಳನ್ನು ಹಾಗೂ ಎಣ್ಣೆ ಮತ್ತು ಅಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಿ ಬಸವನಿಗೆ ಹರಕೆ ತೀರಿಸಿ ಮಾದಪ್ಪನ ಭಕ್ತರು ಭಕ್ತಿಯ ಪರಕಾಷ್ಟೇ ಮೆರೆದರು.


ಮುಗಿಲು ಮುಟ್ಟಿದ ಸಂಭ್ರಮ:

ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮಾದಪ್ಪನ ಭಕ್ತಾದಿಗಳು ಹರಕೆ ಹೊತ್ತ ಭಕ್ತರಿಂದ ಬೆಳಗ್ಗೆಯಿಂದಲೇ ಬೆಳ್ಳಿ ತೇರಿನ ಉತ್ಸವ, ಹುಲಿವಾಹನ ಉತ್ಸವ, ಮಾದೇಶ್ವರ ಉತ್ಸವ ಹಾಗೂ ಧೂಪದ ಸೇವೆ ಮತ್ತು ಪಂಜಿನ ಸೇವೆ ವಿಶೇಷವಾಗಿ ಹರಕೆ ಹೊತ್ತ ಮಾದಪ್ಪನ ಭಕ್ತ ಯುವಕರಿಂದ ಉರುಳು ಸೇವೆ ಮಾಡುವ ಮೂಲಕ ಮದುವೆಗೆ ಹೆಣ್ಣು ಸಿಗಲಿ ಎಂದು ಹರಸಿ ಮಾದಪ್ಪನಿಗೆ ನಿವೇದನೆ ಮಾಡಿಕೊಂಡ ಯುವಕರು ಉರುಳುಸೇವೆ ಮಾಡುವ ಮೂಲಕ ಗಮನ ಸೆಳೆದರು.

ಭಕ್ತರ ದಂಡು:

ಮಹಾಶಿವರಾತ್ರಿ ಹಬ್ಬದ ನಾಲ್ಕನೇ ದಿನ ಅಮಾವಾಸ್ಯೆ ಪೂಜೆಗೆ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಚಾಮರಾಜನಗರ ಹಾಗೂ ಕೊಳ್ಳೇಗಾಲ, ಹನೂರು ತಾಲೂಕಿನ ವಿವಿಧ ಗ್ರಾಮಗಳಿಂದ ಮತ್ತು ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತಾದಿಗಳು ಮಾದಪ್ಪನ ಸನ್ನಿಧಿಯಲ್ಲಿ ಜಮಾವಣೆಗೊಂಡು ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು.

ನಾಲ್ಕನೇ ದಿನ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಪ್ರಯುಕ್ತ ಪೊಲೀಸ್ ಇಲಾಖೆ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಬಂದೋಬಸ್ತ್ ಕಲ್ಪಿಸಿದ್ದರು.ಮಾದಪ್ಪನ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಸಕಲ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಿದೆ. ಭಕ್ತಾದಿಗಳೂ ಸಹ ಶ್ರೀಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವನ್ನಾಗಿ ಮಾಡಲು ಸಹಕಾರ ನೀಡಬೇಕು.

- ಎ.ಇ. ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಾದೇಶ್ವರ ಬೆಟ್ಟ ಇಂದು ಮಹಾರಥೋತ್ಸವ

ಮಹಾಶಿವರಾತ್ರಿ ಹಬ್ಬದ ಐದು ದಿನಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜೆಗಳು ಸಾಂಪ್ರದಾಯವಾಗಿ ನಡೆದಿದೆ. ಬುಧವಾರ ಮಹಾ ಶಿವರಾತ್ರಿ ಹಬ್ಬದ ಮಹಾರಥೋತ್ಸವ ಬೆಳಗ್ಗೆ 10:5 ರಿಂದ 11 ಗಂಟೆಯವರೆಗೆ ನಡೆಯಲಿದೆ. ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನಪ್ರಮೋತ್ಸವ ಹಾಗೂ ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಸಾಂಪ್ರದಾಯದಂತೆ ದೊಡ್ಡ ಕೊಳದಲ್ಲಿ ಕೊಂಡೋತ್ಸವ ಧಾರ್ಮಿಕವಾಗಿ ನಡೆಯಲಿದೆ.