ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿಯೇ ಮುಳುಗಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ ಆರೋಪಿಸಿದರು.
ಕಾರವಾರ: ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರು ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿಯಾಗಿದ್ದು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ಪಾದಯಾತ್ರೆಯ ಅಭೂತಪೂರ್ವ ಯಶಸ್ಸಿಗೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷರಾದ ರೂಪಾಲಿ ಎಸ್. ನಾಯ್ಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿಯೇ ಮುಳುಗಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ. ಯಾವುದೆ ದಾಖಲೆಗಳಿಲ್ಲದೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ ಕಾಂಗ್ರೆಸ್ ಸರ್ಕಾರ ಈಗ ತಾನೇ ತೋಡಿದ ಬಾವಿಯಲ್ಲಿ ಬಿದ್ದು ನರಳುತ್ತಿದೆ. ಸುಳ್ಳು ಮಾತನಾಡಿ ಜನರನ್ನು ತಪ್ಪುದಾರಿಗೆ ಎಳೆಯಬಾರದು. ಇಂತಹ ದುರಾಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ರಾಜೀನಾಮೆಯನ್ನು ನೀಡಬೇಕು ಎಂದು ಆಗ್ರಹಿಸಿದರು.ಹಣಕಾಸು ಖಾತೆ ಮುಖ್ಯಮಂತ್ರಿ ಅವರ ಬಳಿಯೆ ಇದೆ. ಹಣ ವರ್ಗಾವಣೆಯಾದ ಬಗ್ಗೆ ಗೊತ್ತಿಲ್ಲ ಎಂದಾದರೆ ಆ ಸ್ಥಾನದಲ್ಲಿ ಕೂರಲು ಸೂಕ್ತವಲ್ಲ ಎಂದು ಕಿಡಿಕಾರಿದರು.
ಕೊನೆಯ ದಿನದ ಪಾದಯಾತ್ರೆಯು ಮೈಸೂರು ನಗರದ ರಾಘವೇಂದ್ರ ಮಠದಿಂದ ಮಹಾರಾಜ ಕಾಲೇಜು ಮೈದಾನಕ್ಕೆ ತಲುಪಿತು. ಕಾರವಾರ ಅಂಕೋಲಾ ಸೇರಿದಂತೆ ಜಿಲ್ಲೆಯ ಸಹಸ್ರಾರು ಕಾರ್ಯಕರ್ತರು ಸಮಾರೋಪ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆಗೆ ಶಕ್ತಿ ತುಂಬಿದ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.ಧನ್ಯವಾದಈ ಪಾದಯಾತ್ರೆಯ ಆರಂಭದಿಂದ ಕೊನೆಯ ತನಕ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಭಾಗವಹಿಸುವ ಅವಕಾಶ ನನಗೆ ದೊರೆಯಿತು. ಅದರಲ್ಲೂ ಕಾರವಾರ ಅಂಕೋಲಾ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆ ಹಾಗೂ ನಾಡಿನ ಎಲ್ಲೆಡೆಯಿಂದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಪಾದಯಾತ್ರೆ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ. ಅವರೆಲ್ಲರಿಗೆ ಧನ್ಯವಾದಗಳು.
- ರೂಪಾಲಿ ಎಸ್. ನಾಯ್ಕ, ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಮಾಜಿ ಶಾಸಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ.