ಸಾರಾಂಶ
ಹೂವಿನಹಡಗಲಿ: ಹರ ಹರ ಮಹಾದೇವ ಎಂಬ ನಾಮಸ್ಮರಣೆಯೊಂದಿಗೆ ನಾಡಿನ ಐತಿಹಾಸಿಕ ಸುಪ್ರಸಿದ್ಧ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವವು ಲಕ್ಷಾಂತರ ಭಕ್ತಗಣದ ಮಧ್ಯೆ ಭಾನುವಾರ ಸಂಜೆ ಸಂಭ್ರಮ, ಸಡಗರದಿಂದ ಜರುಗಿತು.
ಸಂಜೆ 4.30ಕ್ಕೆ ಬಸವೇಶ್ವರ ದೇವಸ್ಥಾನದಿಂದ ಬೆಳ್ಳಿ ಬಸವೇಶ್ವರ ಉತ್ಸವ ಮೂರ್ತಿಯನ್ನು ಸಕಲ ಮಂಗಲ ವಾದ್ಯಗಳೊಂದಿಗೆ ರಥ ಬೀದಿಯ ಮುಖಾಂತರ ಮೆರವಣಿಗೆ ನಡೆಸಿ, ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಾಘ ನಕ್ಷತ್ರ ಘಳಿಗೆ ಕಾಲ ಕೂಡಿದಾಗ ರಥೋತ್ಸವವು ಸಂಪ್ರದಾಯದ ಪೂಜೆ ಸಲ್ಲಿಸಿ ತೇರು ಎಳೆಯಲು ಚಾಲನೆ ನೀಡಲಾಯಿತು.ರಥೋತ್ಸವವು ತೇರು ಬೀದಿಯಿಂದ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಆರಂಭವಾಗಿ ಬನ್ನಿಮರದಡಿ ಇರುವ ಪಾದಗಟ್ಟೆಯವರೆಗೂ ಎಳೆಯಲಾಯಿತು. ಬಳಿಕ ಸ್ವಸ್ಥಾನಕ್ಕೆ ಬಂದುನಿಂತಿತು.
ಭಾರಿ ಗಾತ್ರದ ನಾನಾ ಬಗೆಯ ಹೂಮಾಲೆಗಳ ಹಾಗೂ ತಳಿರು ತೋರಣಗಳಿಂದ ತೇರನ್ನು ಅಲಂಕಾರಗೊಳಿಸಲಾಗಿತ್ತು. ಸಮಾಳ, ನಂದಿಕೋಲು, ಹಲಗೆ, ಡೊಳ್ಳು ಸೇರಿದಂತೆ ವಿವಿಧ ಮಂಗಳ ವಾದ್ಯಗಳ ನಿನಾದ ರಥೋತ್ಸವ ಸಂಭ್ರಮಕ್ಕೆ ಮೆರುಗು ನೀಡಿದವು.ಸುಗ್ಗಿಯ ಕಾಲ ಮುಗಿದ ಬಳಿಕ ರೈತರು ಬದುಕಿನಲ್ಲಿ ಬಿಡುವು ಮಾಡಿಕೊಂಡ ಸಮಯದಲ್ಲಿ ಆರಂಭವಾಗುವ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು, ಎಂಟು ಎತ್ತಿನ ಹಳಿ ಬಂಡಿ, ಸವಾರಿ ಕೋಲಿನ ಬ೦ಡಿ ಎತ್ತುಗಳಿಗೆ ನಾನಾ ಬಣ್ಣದ ಜೂಲಾ, ಗೆಜ್ಜೆ ಸರಗಳಿಂದ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ಕೃಪೆಗೆ ಪಾತ್ರರಾಗಲು ಜಾತ್ರೆಗೆ ಭಕ್ತರು ವಿವಿಧ ಬಗೆಯ ಹರಕೆಗಳಾದ ಎತ್ತಿನ ಮೆರವಣಿಗೆ, ದೀಡ್ ನಮಸ್ಕಾರ ಹಾಕಿದರು. ರಾಣಿಬೆನ್ನೂರು, ದಾವಣಗೆರೆ ಸೇರಿದಂತೆ ವಿವಿಧ ಕಡೆಯ ಭಕ್ತರು ಜಾತ್ರೆಯ ಪರಿಷೆಯ ಭಕ್ತರಿಗೆ ಅನ್ನದಾಸೋಹ ಆಯೋಜಿಸಿದ್ದರು.
ಶನಿವಾರ ರಾತ್ರಿಯಿಂದಲೇ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಕುರುವತ್ತಿಗೆ ಆಗಮಿಸಿದ್ದಾರೆ. ಹೂವಿನಹಡಗಲಿ, ಹಾವೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಶಿರಹಟ್ಟಿ, ಲಕ್ಷ್ಮೇಶ್ವರ, ಬ್ಯಾಡಗಿ, ಹಾನಗಲ್ಲ, ಗದಗ, ದಾವಣಗೆರೆ, ಹರಿಹರ, ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲ ಮೂಲೆಗಳಿಂದ ಸುಮಾರು 6-7 ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು.ಜಾತ್ರೆಯಲ್ಲಿ ನಡೆಯುತ್ತಿದ್ದ ಜೂಜಾಟ, ಪಿಕ್ ಪಾಕೆಟ್ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ತಡೆಗೆ ಪೊಲೀಸ್ ಇಲಾಖೆ ಕಣ್ಣಾವಲು ಇಟ್ಟಿತ್ತು. ಜತೆಗೆ ತೇರು ಎಳೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ರಥೋತ್ಸವದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾಧರ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿ ನಾಯ್ಕ, ಪಿಡಿಒ ಗುತ್ತೆಪ್ಪ ತಳವಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ದೀಪಾಲಂಕಾರ: ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಮೂರ್ತಿಗೆ ಬೆಳ್ಳಿ ಆಭರಣಗಳನ್ನು ತೊಡಿಸಲಾಗಿತ್ತು. ಜತೆಗೆ ಹತ್ತಾರು ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮುಂದಿರುವ ಸಿಂಹಾಸನ ಕಟ್ಟೆ ಹಾಗೂ ಮುಖ್ಯ ದ್ವಾರಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ವಿಶೇಷ ಬಸ್ ಸೌಲಭ್ಯ: ಕುರುವತ್ತಿ ಜಾತ್ರೆಗೆ ಭಕ್ತರು ತೆರಳಲು ಹೂವಿನಹಡಗಲಿ, ಹರಪನಹಳ್ಳಿ, ಹೊಸಪೇಟೆ, ಮುಂಡರಗಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಹರಿಹರ ಸೇರಿದಂತೆ ಉಳಿದ ಕಡೆಗಳಿಂದ ವಿಶೇಷ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿತ್ತು.ಅಗತ್ಯ ನೀರಿನ ಪೂರೈಕೆ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಭಕ್ತರಿಗಾಗಿ 8 ಕಡೆಗಳಲ್ಲಿ ಸ್ಟ್ಯಾಂಡ್ ಪೋಸ್ಟ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಹಾಗೂ 2 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು, 2 ಕಡೆಗೆ ಜಾನುವಾರು ತೊಟ್ಟಿ ನಿರ್ಮಿಸಿ ನೀರಿನ ತೊಂದರೆ ಆಗದಂತೆ ನಿಗಾ ವಹಿಸಿದ್ದಾರೆ.
ತಂಪುಪಾನೀಯ: ಪಾದಯಾತ್ರೆ ಮೂಲಕ ಕುರುವತ್ತಿಗೆ ಬರುವ ಭಕ್ತರಿಗೆ ದಾರಿ ಮಧ್ಯೆದಲ್ಲಿ ಭಕ್ತರು ಶರಬತ್ತು ಸೇರಿದಂತೆ ಇತರೆ ತಂಪು ಪಾನೀಯ ನೀಡಿ ಭಕ್ತಿ ಮೆರೆದರು.