ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹರ ಹರ ಮಹಾದೇವ ಘೋಷಣೆ ಕೇಳುತ್ತಿದ್ದಂತೆಯೇ ಮುಸ್ಲಿಂ ಯುವಕರು ಅಲ್ಲಾಹು ಅಕ್ಟರ್ ಎಂದು ಪ್ರತಿಯಾಗಿ ಘೋಷಣೆ ಕೂಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಬೆಳಗಾವಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಕೀಲರು ಕಾಲೇಜು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ ಫೋಟೋ ಪ್ರದರ್ಶಿಸಿದರು. ಆಗ ವಕೀಲರು ಹರ ಹರ ಮಹಾದೇವ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದ ಮುಸ್ಲಿಂ ಯುವಕರು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಮುಸ್ಲಿಂ ಯುವಕರನ್ನು ಸಮಾಧಾನಗೊಳಿಸಿ ಅಲ್ಲಿಂದ ಮೆರವಣಿಗೆಯನ್ನು ಮುಂದೆ ಸಾಗಿಸಿದರು.
ಪಂಚಮಸಾಲಿ ವಕೀಲರ ಸಮಾವೇಶದ ನಿರ್ಣಯ:2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ಏಳನೇ ಹಂತದ ಹೋರಾಟಕ್ಕೆ ರಾಜ್ಯ ಪಂಚಮಸಾಲಿ ವಕೀಲರ ಮಹಾಪರಿಷತ್ ಸಮಾವೇಶದಲ್ಲಿ ನಿರ್ಣಯಗೊಳ್ಳಲಾಗಿದೆ.ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಸ್ವಾಮೀಜಿ ಅವರು ಸಮಾವೇಶದ ನಿರ್ಣಯಗಳನ್ನು ಘೋಷಿಸಿದರು. ಹಿಂದುಳಿದ ಆಯೋಗದಿಂದ ಪೂರ್ಣಪ್ರಮಾಣದ ವರದಿ ಪಡೆದು 2ಎ ಮೀಸಲಾತಿ ನೀಡಬೇಕು. ಪಂಚಮಸಾಲಿ ಸೇರಿ ಎಲ್ಲ ಲಿಂಗಾಯತರನ್ನು ಕೇಂದ್ರದ ಒಬಿಸಿಗೆ ಸೇರ್ಪಡೆ ಕ್ರಮ ವಹಿಸಬೇಕು. ಸಂಪುಟ ಸಭೆಯಲ್ಲಿ ನಿರ್ಣಯಿಸಿ ಕೇಂದ್ರ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಚಳಿಗಾಲ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.