ಸಾರಾಂಶ
ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಚೆನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ, ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣತಾಲೂಕಿನ ಹಾರಕೂಡದಲ್ಲಿ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಚೆನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವವು ಮಂಗಳವಾರ ಭಕ್ತರ ಜಯಘೋಷದ ಮಧ್ಯೆ ಜರುಗಿತು.
ಮಂಗಳವಾರ ಬೆಳಗ್ಗೆ ಅಭಿಷೇಕ ನಡೆದರೆ ಸಾಯಂಕಾಲ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ 6 ಗಂಟೆಗೆ ಗ್ರಾಮದಲ್ಲಿ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಪೂಜೆ ಸಲ್ಲಿಸಲು ಬೆಂಡು ಬತಾಸು, ಕೊಬ್ಬರಿ, ಬಾಳೆ ಹಣ್ಣು ಸೇರಿದಂತೆ ಅನೇಕ ವಸ್ತುಗಳನ್ನು ರಥದ ಮೇಲೆ ಹಾರಿಸುವ ಪರಂಪರೆ ಅನೇಕ ವರ್ಷಗಳಿಂದ ನಡೆದು ಬರುತ್ತಿದೆ. ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಗಳಿಂದಲು ರಥೋತ್ಸವ ಹಾಗೂ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಮ್ಮ ಹರಕೆ ತಿರಿಸಿ ಪೂಜ್ಯರ ಆಶೀರ್ವಾದ ಪಡೆಯುತ್ತಾರೆ.ಗ್ರಾಮದಲ್ಲಿ ರಥೋತ್ಸವ ನಡೆದ ನಂತರ ಮಠಾಧೀಶರಾದ ಡಾ.ಚೆನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ರಥೋತ್ಸವದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಶಾಸಕ ಶರಣು ಸಲಗರ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಹುಮನಾಬಾದ ಶಾಸಕ ಡಾ. ಸಿದ್ಧಲಿಂಗಪ್ಪಾ ಪಾಟೀಲ, ಮಾಜಿ ಶಾಸಕರಾದ ಎಂ.ಜಿ.ಮೂಳೆ, ಕಾಂಗ್ರೆಸ್ ಮುಖಂಡರಾದ ಬಾಬು ಹೊನ್ನಾನಾಯಕ, ಧನರಾಜ ತಾಡಂಪಳ್ಳಿ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.