ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಭಾರತೀಯ ಮಹಿಳೆ ಭಾವಶ್ರೀಮಂತಿಕೆಯ ಗಣಿ ಆಗಿದ್ದು ಮಾನವೀಯ ಸಂಬಂಧಗಳ ತಾಯಿ ಬೇರು ಎನ್ನುವಲ್ಲಿ ಹೆಮ್ಮೆ ಅನಿಸುತ್ತದೆ. ಮಹಿಳೆ ಎಂಬ ಪದವೇ ಆಕೆಯ ಅಗಾಧ ಹಾಗೂ ಶ್ರೇಷ್ಠ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಗುಂಡೂರ ಗ್ರಾಮದ ಮಹಿಳಾ ಭಕ್ತರಿಂದ ಆಯೋಜಿಸಿದ ಗುರುವಂದನೆ ಹಾಗೂ 732ನೇ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮಾನವ ವಿಕಾಸದಲ್ಲಿ ಮಹಿಳೆಯ ಪಾತ್ರ ಅತ್ಯಂತ ಹಿರಿದಾಗಿದೆ. ಸಹನೆ, ತಾಳ್ಮೆ, ಶಿಸ್ತು ಬದ್ಧತೆ, ಗುರು ಭಕ್ತಿ, ದೈವ ಶ್ರದ್ಧೆ, ಧೈರ್ಯ, ಸಾಹಸ, ಸಾಧನಾಶೀಲತೆ, ಮಮತೆ, ವಾತ್ಸಲ್ಯ ಇವೆಲ್ಲವುಗಳು ಸ್ತ್ರೀ ಕುಲದ ವಿಶೇಷತೆಗಳಾಗಿವೆ.
ವೇದಕಾಲದ ಗಾರ್ಗಿ, ಮೈತ್ರೇಯರಿಂದ ಮೊದಲುಗೊಂಡು ಇವತ್ತಿನ ಆಧುನಿಕ ಕಾಲದವರೆಗೂ ವಿಶ್ವ ವಿಕಾಸಕ್ಕಾಗಿ ಮಾನವ ಕುಲದ ಶ್ರೇಯಸ್ಸಿಗಾಗಿ ಅಸಂಖ್ಯಾತ ಮಹಿಳಾ ಮಣಿಗಳು ತಮ್ಮ ಅಮೂಲ್ಯ ಯೋಗದಾನ ನೀಡಿದ್ದಾರೆ. ಸ್ತ್ರೀ ಸೇವೆ ಇಲ್ಲದ ಕ್ಷೇತ್ರವೇ ಇಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಪುರುಷನಿಗೆ ಸಮನಾಗಿ ಸಮಾಜದ ಉನ್ನತಿಗಾಗಿ ಮಹಿಳೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾಳೆ ಎಂದರು.ಗುಂಡೂರ ಗ್ರಾಮದ ಮಹಿಳೆಯರು ಹಾರಕೂಡ ಮಠದ ಮೇಲೆ ಇಟ್ಟಿರುವ ಭಕ್ತಿ ಶ್ರದ್ಧೆ ನಿಜವಾಗಿಯೂ ಮೆಚ್ಚುವಂತಹದ್ದು, ನಿಮ್ಮ ದೃಢವಾದ ಗುರು ನಿಷ್ಠೆಗೆ ಹಾರಕೂಡ ಅಜ್ಜನವರು ಖಂಡಿತ ತೃಪ್ತರಾಗಿದ್ದಾರೆ. ಶಿವ ಸ್ವರೂಪಿ ಚೆನ್ನಬಸವ ಶಿವಯೋಗಿಗಳು ನಿಮ್ಮೆಲ್ಲರ ಬಾಳಲ್ಲಿ ಕೃಪಾ ಕಿರಣ ಹರಿಸಿ ಅರಳು ಮಲ್ಲಿಗೆಯ ಪರಿಮಳ ಬೀರುತ್ತಿರಲಿ, ಸಕಲರಿಗೂ ಸನ್ಮಂಗಳವಾಗಲೆಂದು ಶುಭ ಹಾರೈಸಿದರು.
ಮಹಾನಂದಾ ಮೇತ್ರೆ ಹಾರಕೂಡ ಶ್ರೀಗಳ ಆಶೀರ್ವಚನ ವಾಚನ ಮಾಡಿದರು. ರಾಧಿಕಾ ಪಾಟೀಲ ಸ್ವಾಗತಿಸಿದರು. ಅಸೂಯ ಸಿಂಗ್ರೆ, ರುಕ್ಮಣಿ ಮೈತ್ರೆ, ಜ್ಯೋತಿ ಸಿಂಗ್ರೆ, ಮಹಾದೇವಿ ಮಾಲ್ದೆ, ಅಂಬಿಕಾ ಮೇತ್ರೆ, ಸಂತಕ್ಕ ಸಿಂಗ್ರೆ ಚಿತ್ರಿಕಾ ವಣಕೆ ಮುಂತಾದವರು ಉಪಸ್ಥಿತರಿದ್ದರು.ಕಾರ್ತಿಕ ಸ್ವಾಮಿ ಯಲದಗುಂಡಿ, ಭಾಗ್ಯಶ್ರೀ ಬಿರಾದಾರ, ಸುನಿತಾ ಸಿರಶೆಟ್ಟಿ,ಇದ್ದರು.ಇದಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.