ಸಾರಾಂಶ
ಅತಿಥಿಗಳು ಬಾರದ ಕಾರಣದ ಹಾರಂಗಿ ಹಿನ್ನೀರು ಜಲಕ್ರೀಡೆ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜಲ ಸಾಹಸ ಕ್ರೀಡೆಯ ಆಯೋಜಕರಾದ ಏಸ್ ಪ್ಯಾಡ್ಲರ್ಸ್ ಸಂಸ್ಥೆಯ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಜಲ ಕ್ರೀಡೆಯಿಂದ ನೀರು ಕಲುಷಿತಗೊಳ್ಳುತ್ತದೆ. ಆದ್ದರಿಂದ ಇದನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂಬ ವಾದವೂ ಕೇಳಿ ಬಂದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮಾಡಲಾಗಿರುವ ಜಲ ಸಾಹಸ ಕ್ರೀಡೆ ಗುರುವಾರ ಉದ್ಘಾಟನೆಯಾಗಬೇಕಿದ್ದು, ಉದ್ದೇಶಿತ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಅತಿಥಿಗಳು ಬಾರದ ಕಾರಣದ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜಲ ಸಾಹಸ ಕ್ರೀಡೆಯ ಆಯೋಜಕರಾದ ಏಸ್ ಪ್ಯಾಡ್ಲರ್ಸ್ ಸಂಸ್ಥೆಯ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಜಲ ಕ್ರೀಡೆಯಿಂದ ನೀರು ಕಲುಷಿತಗೊಳ್ಳುತ್ತದೆ. ಆದ್ದರಿಂದ ಇದನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂಬ ವಾದವೂ ಕೇಳಿ ಬಂದಿದೆ. ರಾಜ್ಯ ಸರ್ಕಾರ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಯಮಿತ ಮೂಲಕ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಜಲ ಕ್ರೀಡೆ ನಡೆಸಲಾಗುತ್ತಿದೆ. ಗುರುವಾರ ನಿಗದಿಯಂತೆ ಜಲ ಕ್ರೀಡೆಗೆ ಅಧಿಕೃತ ಚಾಲನೆಗೊಳ್ಳಬೇಕಿತ್ತು. ನಾವು ಸರ್ಕಾರದ ನಿಯಮದಂತೆ ಟೆಂಡರ್ ಪಡೆದುಕೊಂಡು ಜಲ ಸಾಹಸ ಕ್ರೀಡೆ ಮಾಡುತ್ತಿದ್ದೇವೆ. ಈ ಕ್ರೀಡೆಯಿಂದ ಯಾವುದೇ ರೀತಿ ನೀರು ಕಲುಷಿತಗೊಳ್ಳುವುದಿಲ್ಲ ಎಂದು ಸಂಸ್ಥೆಯ ಸಿಇಒ ಮಂಜುನಾಥ್ ಹೇಳುತ್ತಾರೆ.ಜಲ ಸಾಹಸ ಕ್ರೀಡೆಗೆ ಗುರುವಾರ ಚಾಲನೆ ನೀಡಬೇಕಿತ್ತು. ಆದರೆ ಜಂಗಲ್ ಜಾಡ್ಜ್ ನ ಪ್ರಮುಖರು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ನಿರತರಾದ ಹಿನ್ನೆಲೆ ಅವರು ಆಗಮಿಸಲು ಸಾಧ್ಯವಾಗಿಲ್ಲ. ಇದರಿಂದ ಉದ್ಘಾಟನಾ ಕಾರ್ಯ ಮುಂದೂಡಲಾಗಿದ್ದು, ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಮಂಜುನಾಥ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಯೋಜನೆಗೆ ವಿರೋಧ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ‘ಕನ್ನಡಪ್ರಭ’ ಜೊತೆ ಮಾತನಾಡಿ, ನಾವು ಹಾರಂಗಿ ನೀರನ್ನು ಕುಡಿಯುತ್ತಿದ್ದೇವೆ. ಈಗಾಗಲೇ ನೀರು ಕಲುಷಿತಗೊಂಡಿದೆ. ಆದರೆ ಇದೀಗ ಬೋಟ್ ಚಾಲನೆ ಮಾಡಿ ನೀರು ಮತ್ತಷ್ಟು ಕಲುಷಿತಗೊಳ್ಳುತ್ತದೆ. ಇದರಿಂದ ಈ ನೀರು ಕುಡಿದು ಕಾಯಿಲೆ ಬರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ನಾವು ಮನವಿ ಮಾಡಿದ್ದೇವೆ. ಆದ್ದರಿಂದ ಜಲ ಸಾಹಸ ಕ್ರೀಡೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಜಲ ಸಾಹಸ ಕ್ರೀಡೆ ಕಾನೂನು ಪ್ರಕಾರ ಹಾಗೂ ಪರಿಸರಕ್ಕೆ ಪೂರಕವಾಗಿದ್ದರೆ ಅದಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ----------------ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆ ನಡೆಸುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಆದ್ದರಿಂದ ಈ ಜಲ ಕ್ರೀಡೆ ತಡೆ ಹಿಡಿಯಬೇಕು. ಜಲ ಕ್ರೀಡೆಯಿಂದ ಪ್ರವಾಸಿಗರಿಗೆ ಆಪತ್ತು ಎದುರಾಗಿದೆ. ಕಾಡಾನೆಗಳು ಕೂಡ ದಾಟುವ ಜಾಗ ಇದಾಗಿದ್ದು, ಇದರಿಂದ ಪ್ರವಾಸಿಗರ ಜೀವಕ್ಕೆ ಅಪಾಯ ಇದೆ. ಆದ್ದರಿಂದ ಈ ಜಲ ಕ್ರೀಡೆಯನ್ನು ಸ್ಥಗಿತಗೊಳಿಸಬೇಕು.-ಭಾಸ್ಕರ್ ನಾಯಕ್, ಅಧ್ಯಕ್ಷ ಕೂಡುಮಂಗಳೂರು ಗ್ರಾ.ಪಂ.
--------------ನಾವು ಸರ್ಕಾರದ ನಿಯಮದಂತೆ ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆಗೆ ಅನುಮತಿ ಪಡೆದುಕೊಂಡು ಇದನ್ನು ನಡೆಸುತ್ತಿದ್ದೇವೆ. ಜಲ ಕ್ರೀಡೆ ಮಾಡುವುದರಿಂದ ನೀರು ಕಲುಷಿತ ಆಗುವುದಿಲ್ಲ. ಅತಿಥಿಗಳಿಗೆ ಒತ್ತಡ ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿದ್ದೇವೆ. ಆದಷ್ಟು ಬೇಗ ಜಲ ಕ್ರೀಡೆಗೆ ಚಾಲನೆ ನೀಡುತ್ತೇವೆ. -ಮಂಜುನಾಥ್, ಸಿಇಒ, ಏಸ್ ಪ್ಯಾಡ್ಲರ್ಸ್ ಸಂಸ್ಥೆ.
------------ಸಾಹಸ ಜಲ ಕ್ರೀಡೆಯಲ್ಲಿ ಪರಿಸರಕ್ಕೆ ಪೂರಕವಾದ ನಿಯಮಗಳನ್ನು ಪಾಲಿಸಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಪರಿಶೀಲನೆ ನೀಡಿ ಅವಕಾಶ ಮಾಡಲಾಗುವುದು. ಹಾರಂಗಿ ವಿಶಾಲವಾದ ಜಾಗ, ಮಹಶೀರ್ ಮೀನಿನ ತಾಣವಾಗಿದೆ. ನಿಯಮ ಪ್ರಕಾರ ಅನುಮತಿ ಪಡೆದುಕೊಂಡಿದ್ದರೆ ಪರಿಶೀಲನೆ ಮಾಡಿ ಅವಕಾಶ ಮಾಡಲಾಗುವುದು. -ಡಾ. ಮಂತರ್ ಗೌಡ, ಮಡಿಕೇರಿ ಶಾಸಕ.