ಕಳೆದ ಮೂರು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಕುಶಾಲನಗರ ಸಮೀಪದ ಹಾರಂಗಿ ಟ್ರೀ ಪಾರ್ಕ್ ಮತ್ತು ಸಾಕಾನೆ ಶಿಬಿರದಲ್ಲಿ ಸಾರ್ವಜನಿಕರಿಗಾಗಿ ಆನೆಗಳ ಪ್ರದರ್ಶನವನ್ನು ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಳೆದ ಮೂರು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಕುಶಾಲನಗರ ಸಮೀಪದ ಹಾರಂಗಿ ಟ್ರೀ ಪಾರ್ಕ್ ಮತ್ತು ಸಾಕಾನೆ ಶಿಬಿರದಲ್ಲಿ ಸಾರ್ವಜನಿಕರಿಗಾಗಿ ಆನೆಗಳ ಪ್ರದರ್ಶನವನ್ನು ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಗೊಳಿಸಲಾಗಿದೆ.ಮೇ ತಿಂಗಳಲ್ಲಿ ದುಬಾರೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಓರ್ವ ಪ್ರವಾಸಿ ಮಹಿಳೆ ಸಿಲುಕಿ ಮೃತಪಟ್ಟ ಹಿನ್ನೆಲೆ ಮತ್ತು ತೀವ್ರ ಗಾಯಗೊಂಡ ಆನೆ ಸಾವಿಗೀಡಾದ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆನೆ ಶಿಬಿರಗಳನ್ನು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಇದೀಗ ಹಾರಂಗಿ ಟ್ರೀ ಪಾರ್ಕ್ ಮತ್ತು ಸಾಕಾನೆ ಶಿಬಿರದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಆನೆಗಳ ಪ್ರದರ್ಶನದ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆನೆಗಳ ಸ್ವಭಾವ ಮತ್ತು ಚಲನವಲನವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆನೆಗಳ ಸುರಕ್ಷತೆ ಕಲ್ಯಾಣ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಆನೆಗಳ ಸಂರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆನೆಗಳ ಪ್ರದರ್ಶನವನ್ನು ಪುನರಾರಂಭಿಸಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್ ರಕ್ಷಿತ್ ತಿಳಿಸಿದ್ದಾರೆ.ದುಬಾರೆ ಆನೆ ಶಿಬಿರ ಪ್ರವಾಸಿಗರಿಗೆ ಇನ್ನೂ ಮುಕ್ತಗೊಂಡಿಲ್ಲ.