ಸಾರಾಂಶ
ಕೀರ್ತನಾ
ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಹಾಗೂ ನೆರೆ ಜಿಲ್ಲೆಗಳ ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರಿಗೆ ಆಶ್ರಯವಾಗಿರುವ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಬಹುತೇಕ ಕ್ಷೀಣಗೊಂಡಿದ್ದು ಬೇಸಿಗೆ ಬೆಳೆಗೆ ನೀರಿನ ಅಭಾವ ಎದ್ದು ಕಾಣುತ್ತಿದೆ.
8.5 ಟಿ.ಎಂ.ಸಿ. ಸಂಗ್ರಹ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಇದೀಗ ಕೇವಲ 2.6 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಇದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಬಹುತೇಕ ಕಡಿಮೆಯಾಗಿದೆ.ಒಂದೇ ಬಾರಿ ಭರ್ತಿ:ವಾರ್ಷಿಕ 3 ಬಾರಿ ಭರ್ತಿ ಆಗಬೇಕಾದ ಹಾರಂಗಿ ಜಲಾಶಯ ಈ ಬಾರಿಯ ಮಳೆಗಾಲದಲ್ಲಿ ಕೇವಲ ಒಂದು ಬಾರಿ ಮಾತ್ರ ಭರ್ತಿಯಾಗಿದ್ದು, ಜಲಾಶಯಕ್ಕೆ ಒಟ್ಟು 27.14 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿತ್ತು.
ಹಾರಂಗಿ ಜಲಾಶಯದಿಂದ ಸಮೀಪದ ಗ್ರಾಮಗಳಿಗೆ ಸೇರಿದಂತೆ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಇದೀಗ ನದಿಗೆ ಜಲಾಶಯದಿಂದ 200 ಕ್ಯುಸೆಕ್ ಪ್ರಮಾಣದ ನೀರು ಹರಿಸಲಾಗಿದೆ.ಜಲಾಶಯಕ್ಕೆ ಜಲಾನಯನ ಪ್ರದೇಶದ ಜಲಮೂಲಗಳಿಂದ ಕೇವಲ 195 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿರುವುದಾಗಿ ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಮಾಹಿತಿ ನೀಡಿದ್ದಾರೆ.
2859 ಅಡಿಗಳ ಗರಿಷ್ಠ ಪ್ರಮಾಣದ ಜಲಾಶಯದ ನೀರಿನ ಮಟ್ಟ ಇದೀಗ 2830.77 ಅಡಿಗಳ ತಳಭಾಗಕ್ಕೆ ಇಳಿದಿದೆ.ವಿದ್ಯುತ್ ಉತ್ಪಾದನೆ ಸ್ಥಗಿತ:ಹಾರಂಗಿ ಜಲಾಶಯದ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಖಾಸಗಿ ಸಂಸ್ಥೆ ಪ್ರಸಕ್ತ ನೀರಿನ ಕೊರತೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದೆ.
ಕಾಲುವೆ ಮೂಲಕ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದ್ದು ಕಾಲುವೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.----ಮಳೆಗಾಲ ಅವಧಿಯಲ್ಲಿ ಜಲಾಶಯದಿಂದ ನದಿಗೆ 18.3 ಟಿಎಂಸಿ ಪ್ರಮಾಣದ ಹೆಚ್ಚುವರಿ ನೀರು ಹರಿಸಲಾಗಿದ್ದು ಕೃಷಿ ಚಟುವಟಿಕೆಗೆ ಕಾಲುವೆ ಮೂಲಕ 7.3 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ.-ಪುಟ್ಟಸ್ವಾಮಿ, ಹಾರಂಗಿ ಅಣೆಕಟ್ಟು ವಿಭಾಗ ಕಾರ್ಯಪಾಲಕ ಅಭಿಯಂತರ.