ನಗರಸಭೆಯಾಗಿ ಮೇಲ್ದರ್ಜೆಗೇರಿದ ಹರಪನಹಳ್ಳಿ ಪುರಸಭೆ

| Published : Nov 22 2025, 02:45 AM IST

ನಗರಸಭೆಯಾಗಿ ಮೇಲ್ದರ್ಜೆಗೇರಿದ ಹರಪನಹಳ್ಳಿ ಪುರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಜನತೆಯ ಬಹುದಿನದ ಬೇಡಿಕೆಯಾಗಿದ್ದ ಹರಪನಹಳ್ಳಿ ಪುರಸಭೆ ಇದೀಗ ಮೇಲ್ದರ್ಜೆಗೇರಿ ನಗರಸಭೆಯಾಗಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಇಲ್ಲಿಯ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಹರಪನಹಳ್ಳಿ ಪುರಸಭೆ ಇದೀಗ ಮೇಲ್ದರ್ಜೆಗೇರಿ ನಗರಸಭೆಯಾಗಿದೆ. ಇನ್ನು ಮುಂದೆ ಹರಪನಹಳ್ಳಿ ನಗರಸಭೆ. ಇದರಿಂದ ಜನತೆ ಸಂತಸಗೊಂಡಿದ್ದಾರೆ. ಸುಮಾರು ವರ್ಷಗಳಿಂದ ಪುರಸಭೆಯಿಂದ ನಗರಸಭೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿತ್ತು.

ನ.20ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಹಿಂದಿನ ಶಾಸಕರು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಈಗಿನ ಶಾಸಕಿ ಎಂ.ಪಿ. ಲತಾ ಬಿಗಿ ಪಟ್ಟು ಹಿಡಿದು ರಾಜ್ಯ ಸರ್ಕಾರದಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಹರಪನಹಳ್ಳಿ ಪುರಸಭೆ ವ್ಯಾಪ್ತಿ ಬರುವ ಪ್ರದೇಶಗಳನ್ನು ಮಾತ್ರ ಒಳಗೊಂಡ ನಗರಸಭೆಯಾಗಿದೆ. 25.36 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಪಟ್ಟಣದಲ್ಲಿ ಅಂದಾಜು 56 ಸಾವಿರ ಜನಸಂಖ್ಯೆ ಇದೆ.

ಮುಂದಿನ ದಿನಗಳಲ್ಲಿ ನಗರಕ್ಕೆ ಸಮೀಪದ ದೇವರ ತಿಮಲಾಪುರ, ಅನಂತನಹಳ್ಳಿ ಶೃಂಗಾರ ತೋಟ ಮುಂತಾದ ಗ್ರಾಮಗಳನ್ನು ಸೇರಿಸಿಕೊಳ್ಳುವ ಚಿಂತನೆ ಇದೆ.

ಈ ಹಿಂದೆ ತಾತ್ಕಾಲಿಕ ಗೆಜೆಟ್‌ ಪ್ರಕಟಿಸಿದ ರಾಜ್ಯ ಸರ್ಕಾರ ಆಕ್ಷೇಪಣೆಗೆ ಕಾಲಾವಕಾಶ ನೀಡಿತ್ತು. ಆಕ್ಷೇಪಣೆ ಸಮಯ ಮುಗಿದ ನಂತರ ಯಾರೂ ಆಕ್ಷೇಪಣೆ ಸಲ್ಲಿಸದ ಕಾರಣ ಇದೀಗ ವಿಸ್ತೀರ್ಣ, ಸರಹದ್ದು ನಿಗದಿ ಮಾಡಿ ಅಂತಿಮ ವಿಶೇಷ ಗೆಜೆಟ್‌ ನಲ್ಲಿ ಪ್ರಕಟಿಸಿದೆ.

ಸದ್ಯ ಪುರಸಭೆಯಲ್ಲಿ 27 ಸದಸ್ಯ ಸ್ಥಾನಗಳಿವೆ. ಇನ್ನು ಮುಂದೆ 31 ಅಥವಾ 32 ಸದಸ್ಯರು ಚುನಾಯಿತರಾಗುತ್ತಾರೆ. ವಾರ್ಡಗಳನ್ನು ವಿಂಗಡಣೆ ಮಾಡಿ ಹೆಚ್ಚಿಸಲು ಶೀಘ್ರ ಆದೇಶ ಹೊರ ಬೀಳುವ ನಿರೀಕ್ಷೆ ಇದೆ.

ನಗರಸಭೆಯಾಗುವುದರಿಂದ ವಿವಿಧ ಯೋಜನೆಯಡಿ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ.

ಈಗಿನ ಕೌನ್ಸಿಲರ್‌ಗಳ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ನಗರಸಭೆಯಾಗಿಯೇ ಚುನಾವಣೆ ಜರುಗುತ್ತದೆ. ಪುರಸಭೆ ಹೆಸರನ್ನು ಬದಲಿಸಿ ನಗರಸಭೆ ಎಂದು ನಾಮಫಲಕ ಅನಾವರಣ ಸಮಾರಂಭ ನ.24ರಂದು ನಡೆಸಲು ನಿಗದಿಯಾಗಿದೆ. ಒಟ್ಟಿನಲ್ಲಿ ಪುರಸಭೆಯಿಂದ ನಗರಸಭೆಯಾಗಿದ್ದು ಎಲ್ಲರಿಗೂ ಖುಷಿ ಸಂಗತಿಯಾಗಿದೆ. ಹೆಚ್ಚಿನ ರೀತಿಯಲ್ಲಿ ನಗರದ ಅಭಿವೃದ್ಧಿಯಾಗಬೇಕೆಂಬುದು ನಗರದ ಜನತೆಯ ನಿರೀಕ್ಷೆಯಾಗಿದೆ.

ಪುರಸಭೆ ನಗರಸಭೆಯಾಗಬೇಕೆಂಬುದು ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆ ಪ್ರಕಾರ ನಗರಸಭೆಯನ್ನಾಗಿ ಮಾಡಿಸಿದ್ದೇನೆ. ಇದರಿಂದ ಅನುದಾನ ಹೆಚ್ಚು ಬಂದು ಹರಪನಹಳ್ಳಿ ನಗರ ಸರ್ವತೋಮುಖ ಅಭಿವೃದ್ಧಿ ಹೊಂದುವ ವಿಶ್ವಾಸವಿದೆ ಎನ್ನುತ್ತಾರೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ.

ಜನರ ಬಹುದಿನಗಳ ಬೇಡಿಕೆಯಂತೆ ಹರಪನಹಳ್ಳಿ ಪುರಸಭೆ ಇದೀಗ ನಗರಸಭೆಯಾಗಿದೆ. ಹೆಚ್ಚು ಅನುದಾನ, ಹೆಚ್ಚಿನ ಸಿಬ್ಬಂದಿ ಬರ್ತಾರೆ. ಈಗಿನಕ್ಕಿಂತ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಹರಪನಹಳ್ಳಿ ಹಿರಿಯ ಪುರಸಭಾ ಸದಸ್ಯ ಎಂ.ವಿ.ಅಂಜಿನಪ್ಪ.