ನೀಲಿ ನಕ್ಷೆ ತರಿಸಿಕೊಂಡು ಶೀಘ್ರದಲ್ಲೇ ನ್ಯಾಯಾಲಯದ ಜಾಗದ ಸುತ್ತ ಕಂಪೌಂಡ್ ನಿರ್ಮಾಣ ಮಾಡಬೇಕು.

ಹರಪನಹಳ್ಳಿ: ಸರ್ಕಾರ ಕೋಟಿ ಕೋಟಿ ಹಣ ನೀಡಿ ನ್ಯಾಯಾಲಯದ ನೂತನ ಕಟ್ಟಡ ನಿರ್ಮಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನ್ಯಾಯಾಲಯ ಕಟ್ಟಡದ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಿದ್ದಾರೆ ಎಂದು ವಿಜಯನಗರ ಜಿಲ್ಲಾ ಮತ್ತು ಸತ್ತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಹೊಸಪೇಟೆ ರಸ್ತೆಯ ಗೋಸಾಯಿ ಗುಡ್ಡದ ಮೇಲಿರುವ ನೂತನ ನ್ಯಾಯಾಲಯ ಕಟ್ಟಡಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಬಳಿಕ ತಾಲೂಕು ವಕೀಲರ ಸಂಘಕ್ಕೆ ಭೇಟಿ ನೀಡಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ನೂತನ ನ್ಯಾಯಾಲಯದ ಸುತ್ತ ಕಂಪೌಂಡ್ ನಿರ್ಮಾಣ ಮಾಡುವುದರ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ನೀಲಿ ನಕ್ಷೆ ತರಿಸಿಕೊಂಡು ಶೀಘ್ರದಲ್ಲೇ ನ್ಯಾಯಾಲಯದ ಜಾಗದ ಸುತ್ತ ಕಂಪೌಂಡ್ ನಿರ್ಮಾಣ ಮಾಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ಸೂಚಿಸಿದರು.

ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಹಣದ ಆಸೆಗಾಗಿ ಸರಿಯಾಗಿ ಕೆಲಸ ಮಾಡದೇ ಶೀತಲಾವಸ್ಥೆ ಮಾಡಿ ಆತುರಾತುರವಾಗಿ ನ್ಯಾಯಾಲಯದ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೆಲ್ಲ ಕೂಡಲೇ ಸರಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನೂತನ ನ್ಯಾಯಾಲಯದ ಕಟ್ಟಡದ ಬಾಗಿಲು, ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಹೊಡೆದು ಹಾನಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನೂತನ ನ್ಯಾಯಾಲಯದ ಕಟ್ಟಡವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಕಾವಲುಗಾರನನ್ನು ನೇಮಿಸಿಕೊಂಡಾಗ ಮಾತ್ರ ಇಂತಹ ಘಟನೆಗಳನ್ನು ತಡೆಯುವುದಕ್ಕೆ ಸಾಧ್ಯ ಎಂದು ಲೋಕೋಪಯೋಗಿ ಎಂಜಿನಿಯರ್‌ ಮಲ್ಲಿಕಾರ್ಜುನ್ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು.

ಸರ್ಕಾರದ ಹಣ ಸಾರ್ವಜನಿಕರ ತೆರಿಗೆಯ ಹಣ ಅನವಶ್ಯಕವಾಗಿ ಕಿಟಕಿ, ಬಾಗಿಲು ಹಾನಿ ಮಾಡುವುದರಿಂದ ಯಾರಿಗೆ ಲಾಭವಾಗುತ್ತದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ನೂತನ ನ್ಯಾಯಾಲಯದಲ್ಲಿ ವಿದ್ಯುತ್ ವ್ಯವಸ್ಥೆನೇ ಇಲ್ಲ. ನ್ಯಾಯಾಧೀಶರ ಕೊಠಡಿಯಲ್ಲಿ ಎಸಿ ಅಳವಡಿಸಿದ್ದೀರಿ ಏಕೆ? ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದೀರಿ. ಸರ್ಕಾರದ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ ಎಂದರು.

ಹರಪನಹಳ್ಳಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಕಣಗಳಿದ್ದು, ಹೆಚ್ಚುವರಿಯಾಗಿ ಮತ್ತೊಂದು ಜೆಎಂಎಫ್ಸಿ ನ್ಯಾಯಾಲಯ ಅತಿ ಶೀಘ್ರದಲ್ಲೇ ಆರಂಭವಾಗಲಿದೆ. ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ತಾಲೂಕುಗಳು ಸೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪನೆ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿ, ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ನಿರ್ಮಾಣಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾಗೆಯೇ ನೂತನ ನ್ಯಾಯಾಲಯಕ್ಕೆ ವಕೀಲರ ಸಂಘ ನಿರ್ಮಾಣ ಮಾಡಲು ಎಲ್ಲ ರೀತಿಯಾದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ಈ ಸಂದರ್ಭದಲ್ಲಿ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶೆ ಉಷಾರಾಣಿ ಆರ್. ಸಿವಿಲ್ ನ್ಯಾಯಾಧೀಶ ಮನುಶರ್ಮ ಎಸ್.ಪಿ. ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್ ಎಸ್. ಬಾಗಳಿ, ಕಾರ್ಯದರ್ಶಿ, ಎಂ.ಮಲ್ಲಪ್ಪ, ವಕೀಲ ಸಂಘದ ಖಜಾಂಚಿ ಕೆ.ಸಣ್ಣ ನಿಂಗನಗೌಡ, ಅಪರ ಸರ್ಕಾರಿ ವಕೀಲ ಕೆ.ಬಸವರಾಜ್, ಸರ್ಕಾರಿ ಅಭಿಯೋಜಕಿಯರಾದ ಮೀನಾಕ್ಷಿ ಎನ್. ನಿರ್ಲಮ, ಹಿರಿಯ ವಕೀಲರಾದ ಬಿ.ಕೃಷ್ಣಮೂರ್ತಿ, ಪಿ.ಜಗದೀಶ್ ಗೌಡ, ಕೆ.ಜಗದಪ್ಪ, ರಾಮನಗೌಡ, ರೇವನಗೌಡ, ಈರಣ್ಣ, ಮತ್ತಿಹಳ್ಳಿ ಅಜ್ಜಣ್ಣ, ಕೆ.ಎಂ. ಚಂದ್ರಮೌಳಿ, ಮುತ್ತಿಗಿ ರೇವಣಸಿದ್ದಪ್ಪ, ಬಿ.ಗೋಣಿಬಸಪ್ಪ, ಕೆ.ಪ್ರಕಾಶ್ ಸೇರಿದಂತೆ ಇತರೆ ವಕೀಲರ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಇದ್ದರು.