ಕನ್ನಡಪ್ರಭವಾರ್ತೆ ನಾಗಮಂಗಲ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಾಶಿವರಾತ್ರಿ ಅಂಗವಾಗಿ ೨೮ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಭಾನುವಾರ ಸಂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಮಹಾಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷ ಜರುಗುವ ಸರ್ವಾಲಂಕೃತ ವೈಭವದ ಲಕ್ಷ ದೀಪೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ಶ್ರೀಸೌಮ್ಯಕೇಶವಸ್ವಾಮಿಗೆ ವಿಶೇಷ ಅಲಂಕಾರ, ತೋಮಾಲೆ ಸೇವೆ, ಅಷ್ಟೋತ್ತರ, ಸಹಸ್ರನಾಮ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಸಂಜೆ ೭ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿನ ೪೮ ಅಡಿ ಎತ್ತರದ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೀಪ ಹಚ್ಚುವ ಮೂಲಕ ಶ್ರೀಸೌಮ್ಯಕೇಶವನಿಗೆ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಶಿವಾಲಯಗಳಲ್ಲಿ ವಿಶೇಷ ಪೂಜೆ: ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಶಿವನಾಮಸ್ಮರಣೆಯೊಂದಿಗೆ ಭಜನೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿದವು.


ಪಟ್ಟಣದ ಶ್ರೀಭುವನೇಶ್ವರ ದೇವಸ್ಥಾನ, ಶ್ರೀ ವಿರಭದ್ರೇಶ್ವರಸ್ವಾಮಿ ದೇವಸ್ಥಾನ, ನಗರೇಶ್ವರಸ್ವಾಮಿ ದೇಗುಲ, ಶನೇಶ್ವರ ಮತ್ತು ಮುನೇಶ್ವರ ದೇವಸ್ಥಾನಗಳಲ್ಲಿ ಭಾನುವಾರ ಬೆಳಗಿನಿಂದಲೇ ಹೋಮ ಹವನಾದಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ತಾಲೂಕಿನ ಪಡುವಲಟ್ಟಣ ಗ್ರಾಮದ ಶ್ರೀಕಾನನ ಬ್ರಹ್ಮಲಿಂಗೇಶ್ವರ, ದೊಡ್ಡಜಕ್ಕನಹಳ್ಳಿಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ, ಕಲ್ಲಿನಾಥಪುರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ, ದಂ.ಜಕ್ಕನಹಳ್ಳಿ ಗ್ರಾಮದ ಶ್ರೀ ಮಹಾಗುರು ಶನೇಶ್ವರ, ಅರಕೆರೆ ಗ್ರಾಮದ ಶ್ರೀ ಶನೇಶ್ವರ, ವಜ್ರಮುನೇಶ್ವರ, ಲಕ್ಷ್ಮೀದೇವಿ ದೇವಸ್ಥಾನ, ದಾಸಗೋಳಪುರ ಗ್ರಾಮದ ಶ್ರೀ ಶನಿದೇವರ ದೇವಸ್ಥಾನ ಮತ್ತು ಬೀರೇಶ್ವರಪುರ ಗ್ರಾಮದ ಶ್ರೀ ದೊಡ್ಡಯ್ಯಸ್ವಾಮಿ, ಹುಲ್ಲೇಕೆರೆ, ತೊಳಲಿ, ಬೆಟ್ಟದಮಲ್ಲೇನಹಳ್ಳಿ, ತಟ್ಟಹಳ್ಳಿ, ದೇವಲಾಪುರ, ಬಿಂಡಿಗನವಿಲೆ, ಬೆಳ್ಳೂರು ಮತ್ತು ಬೋಗಾದಿಯ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆದವು.