ಬಿಜೆಪಿ ವಿರುದ್ಧ ವಾಗ್ದಾಳಿ, ಸರ್ಕಾರದ ಸಮರ್ಥನೆ

| Published : Mar 06 2024, 02:19 AM IST

ಸಾರಾಂಶ

ಸರ್ಕಾರದ ಗ್ಯಾರಂಟಿ ಯೋಜನೆ, ಬಿಜೆಪಿ ವಿರುದ್ಧ ವಾಗ್ದಾಳಿ, ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬನವಾಸಿ ಕದಂಬೋತ್ಸವ ಉದ್ಘಾಟನಾ ಭಾಷಣವನ್ನು ಮಾಡಿದರು.

ಕಾರವಾರ:

ಸರ್ಕಾರದ ಗ್ಯಾರಂಟಿ ಯೋಜನೆ, ಬಿಜೆಪಿ ವಿರುದ್ಧ ವಾಗ್ದಾಳಿ, ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬನವಾಸಿ ಕದಂಬೋತ್ಸವ ಉದ್ಘಾಟನಾ ಭಾಷಣವನ್ನು ಮಾಡಿದರು.

ಬಸವ, ಬುದ್ಧ, ಅಂಬೇಡ್ಕರ್, ಗಾಂಧಿ ಅವರ ಆದರ್ಶಗಳನ್ನು ಬಣ್ಣಿಸುತ್ತ ಅವರ ತತ್ವಗಳನ್ನು ನಾವು ಅಳವಡಿಸಿಕೊಂಡಿರುವುದಾಗಿ ಕಾಂಗ್ರೆಸ್ ಸರ್ಕಾರ, ಆಡಳಿತವನ್ನು ಸಮರ್ಥಿಸಿಕೊಂಡರು. ತಮ್ಮ ಭಾಷಣದುದ್ದಕ್ಕೂ ಬಸವಾದಿ ಶಿವಶರಣರ ತತ್ವವನ್ನು ಪ್ರತಿಪಾದಿಸಿದ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಆ ತತ್ವದ ಮೇಲೆ ನಂಬಿಕೆ ಇಟ್ಟಿದೆ ಎಂದು ಪ್ರತಿಪಾದಿಸಿದರು. ಜತೆಗೆ ಜಾತಿ, ಜಾತಿಯ ನಡುವೆ, ಧರ್ಮ-ಧರ್ಮದ ನಡುವೆ ದ್ವೇಷ ಹುಟ್ಟಿಸಿದರೆ ಸಮಾನತೆ ಉಂಟಾಗದು. ಅಭಿವೃದ್ಧಿಯೂ ಆಗದು ಎಂದು ಪರೋಕ್ಷವಾಗಿ ಬಿಜೆಪಿಯನ್ನು ತಿವಿದರು.ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಅಂಥವರನ್ನು ನೀವು ಬೆಂಬಲಿಸುವುದಿಲ್ಲ. ನೀವು ವಿದ್ಯಾವಂತರು ಎಂದು ತಾವು ಅರ್ಥಮಾಡಿಕೊಂಡಿದ್ದಾಗಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷದ ನಾಲ್ವರು ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡುವಂತೆ ಕೋರಿದರು. ನಾವು ₹ 100 ತೆರಿಗೆ ಕೇಂದ್ರಕ್ಕೆ ನೀಡಿದರೆ ಅವರು ಕೇವಲ ₹ 13 ವಾಪಸ್ ಕೊಡುತ್ತಿದ್ದಾರೆ. ತೆರಿಗೆ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಹೇಳಿದರೆ ನಮಗೆ ರಾಷ್ಟ್ರ ವಿಭಜನೆ ಮಾಡುತ್ತಾರೆ ಎಂಬ ಪಟ್ಟ ಕಟ್ಟಿದರು. ಅಭಿವೃದ್ಧಿಯ ಪಥದಲ್ಲಿರುವ ರಾಜ್ಯವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ತಳ್ಳುತ್ತಿದೆ ಎಂದು ಆಪಾದಿಸಿದರು.