ಸಾರಾಂಶ
ಕಲಘಟಗಿ, ಧಾರವಾಡ, ಕಿತ್ತೂರು ಸೇರಿದಂತೆ ಇತರೆಡೆಯಿಂದ ಬಂದು ಸಂಘಗಳನ್ನು ಆರಂಭಿಸಿ ಸಾಲ ನೀಡುವುದಾಗಿ ಹೇಳಿ ಮರುಳುಗೊಳಿಸಿ ನಮ್ಮನ್ನೆಲ್ಲ ಸಾಲದ ಬಲೆಯಲ್ಲಿ ನೂಕಿದ್ದಾರೆ ಎಂದು ಮಹಿಳೆಯರು ದೂರಿದರು.
ಹಳಿಯಾಳ: ಮೈಕ್ರೋ ಫೈನಾನ್ಸ್‌ನವರು ಸಾಕಷ್ಟು ಕಿರುಕುಳ ನೀಡುತ್ತಿದ್ದು, ತಮಗೆ ಬದುಕು ನಡೆಸಲು ದುಸ್ತರವಾಗುತ್ತಿದ್ದು, ಇವರ ಕಾಟದಿಂದ ರಕ್ಷಣೆ ನೀಡಬೇಕೆಂದು ತಾಲೂಕಿನ ಗ್ರಾಮಾಂತರ ಭಾಗದ ಮಹಿಳೆಯರು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರ ಎದುರು ಅಳಲು ತೋಡಿಕೊಂಡರು.
ಶುಕ್ರವಾರ ತಾಪಂ ಸಭಾಂಗಣಕ್ಕೆ ಕೆಡಿಪಿ ಸಭೆಗೆ ಆಗಮಿಸಿದ್ದ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಭೇಟಿಯಾದ ಗ್ರಾಮೀಣ ಮಹಿಳೆಯರು ಮೈಕ್ರೋ ಫೈನಾನ್ಸ್‌ನವರ ಕಾಟದ ಬಗ್ಗೆ ಹೇಳಿ ಕಣ್ಣೀರಿಟ್ಟರು.ಸಾಲದ ಬಡ್ಡಿ ತುಂಬಿದ್ದರೂ ಹತ್ತು ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದು, ಇವರ ಕಾಟದಿಂದ ಮನೆಯಲ್ಲಿ ಇರುವುದೇ ಸಮಸ್ಯೆಯಾಗಿದೆ. ಅಲ್ಲದೇ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕರಿಗೆ ತಿಳಿಸಿದರು.
ಕಲಘಟಗಿ, ಧಾರವಾಡ, ಕಿತ್ತೂರು ಸೇರಿದಂತೆ ಇತರೆಡೆಯಿಂದ ಬಂದು ಸಂಘಗಳನ್ನು ಆರಂಭಿಸಿ ಸಾಲ ನೀಡುವುದಾಗಿ ಹೇಳಿ ಮರುಳುಗೊಳಿಸಿ ನಮ್ಮನ್ನೆಲ್ಲ ಸಾಲದ ಬಲೆಯಲ್ಲಿ ನೂಕಿದ್ದಾರೆ ಎಂದರು.ಅಹವಾಲು ಆಲಿಸಿದ ಶಾಸಕ ದೇಶಪಾಂಡೆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಕಾರವಾರ ಎಸಿ ಕನಿಷ್ಕ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ಸತೀಶ್ ಆರ್. ಇದ್ದರು.ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ
ಅಂಕೋಲಾ: ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ದಬ್ಬಾಳಿಕೆ, ದೌರ್ಜನ್ಯದಿಂದ ನೊಂದು ಸಾಲ ಪಡೆದುಕೊಂಡವರು ಆತ್ಮಹತ್ಯೆಗೆ ಯತ್ನ ನಡೆಸುತ್ತಿರುವ ಘಟನೆ, ವರದಿಗಳ ನಡುವೆ ಶುಕ್ರವಾರ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೋರ್ವ ವಸೂಲಿ ಮಾಡಿದ ಹಣ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ.ಹಾನಗಲ್ಲ ಮೂಲದ ಗುರುರಾಜ್ ಸೋಮಲಿಂಗ್ ಬಂಡಿವಡ್ಡರ (24) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ಅಂಕೋಲಾದ ಭಾರತ್ ಮೈಕ್ರೋ ಫೈನಾನ್ಸ್‌ನಲ್ಲಿ ಫೀಲ್ಡ್ ಕಲೆಕ್ಷನ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸುಂಕಸಾಳ ಸುತ್ತಮುತ್ತಲಿನ ಪ್ರದೇಶದಿಂದ ಸಾಲದ ಬಾಕಿ ಹಣ ವಸೂಲಿ ಮಾಡಿ ಬರುತ್ತಿರುವಾಗ ವಸೂಲಿಯಾದ ₹40 ಸಾವಿರ ಹಣ ಕಳೆದುಕೊಂಡಿದ್ದರು. ಈ ಹಣ ಮರಳಿ ಬರುವಾಗ ದಾರಿಯಲ್ಲಿ ಬಿದ್ದುಹೋಗಿದೆ ಎನ್ನಲಾಗಿದೆ. ಈ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಹೋದ್ಯೋಗಿಗಳು ಆತನನ್ನು ಕೂಡಲೇ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.