ಸರ್ವೇ ಹೆಸರಿನಲ್ಲಿ ನೀರಾವರಿ ಇಲಾಖೆಯಿಂದ ಕಿರುಕುಳ!

| Published : Dec 03 2024, 12:31 AM IST

ಸಾರಾಂಶ

ಮಸ್ಕಿಯ ಪುರಸಭೆ ಕಚೇರಿಯಲ್ಲಿ ಸೋಮವಾರ ಸೋಮನಾಥ ನಗರದ ನಿವಾಸಿಗಳೊಂದಿಗೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಸ್ಕಿಪಟ್ಟಣದ ಸೋಮನಾಥ ನಗರದಲ್ಲಿ 30-40 ವರ್ಷಗಳಿಂದ ವಾಸಿಸುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಹಕ್ಕುಪತ್ರ ಕೊಡಿಸುವ ಸಂಬಂಧ ಪ್ರಾಮಾಣಿಕ ಪಯತ್ನಗಳು ನಡೆದಿವೆ. ಆದರೆ, ನೀರಾವರಿ ಇಲಾಖೆಯ ಕೆಲವು ಸಿಬ್ಬಂದಿ ಪುರಸಭೆ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ಬಾರದೆ ಮನೆ ಮನೆಗೆ ತೆರಳಿ ಸರ್ವೇ ಹೆಸರಿನಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಬರುತ್ತಿದ್ದು, ಇದು ನಿಲ್ಲಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.ಪಟ್ಟಣದ ಸೋಮನಾಥ ನಗರದ ನೂರಕ್ಕೂ ಹೆಚ್ಚು ಜನರು ಸೋಮವಾರ ಪುರಸಭೆ ಆಗಮಿಸಿ ನೀರಾವರಿ ಇಲಾಖೆ ಸಿಬ್ಬಂದಿಯಿಂದ ಆಗುತ್ತಿರುವ ಕಿರುಕುಳ ಬಗ್ಗೆ ದೂರು ಸ್ವೀಕರಿಸಿ ಮಾತನಾಡಿದ ಅವರು, ಈ ಬಗ್ಗೆ ಸ್ಥಳೀಯ ಮುಖಂಡರು ಗಮನಕ್ಕೆ ತಂದಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದೆ ಸಿಬ್ಬಂದಿಗಳು ಸರ್ವೇ ಹೆಸರಿನಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆ ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಗರದ ನಿವಾಸಿಗಳು ಯಾರೂ ಆತಂಕ ಪಡಬೇಕಾಗಿಲ್ಲ. ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಪರ ನಾವು ಬೀದಿಗೆ ಇಳಿಯುತ್ತೇವೆ ಎಂದು ಭರವಸೆ ನೀಡಿದರು. ನೀರಾವರಿ ಇಲಾಖೆಯ ಮಸ್ಕಿ ಉಪ ವಿಭಾಗದ ಪ್ರಭಾರ ಎಇಇ ದಾವುದ್ ಮಾತನಾಡಿ ಸೋಮನಾಥ ನಗರದ ಜನರಿಗೆ ಹಕ್ಕುಪತ್ರ ಸಂಬಂಧ ಸರ್ಕಾರಕ್ಕೆ ಈಗಾಗಲೇ ಮರು ಪ್ರಸ್ಥಾವನೆ ಕಳಿಸಲಾಗಿದೆ. ಸಿಬಂದಿಗು ಸರ್ವೇ ಹೆಸರಿನಲ್ಲಿ ನಿವಾಸಿಗಳ ದಾಖಲೆ ಕೇಳಿದ ಬಗ್ಗೆ ನಮ್ಮ ಗಮನಕ್ಕೆ ಇಲ್ಲಾ ಎಂದರು. ಪುರಸಭೆ ಸದಸ್ಯ ರವಿಕುಮಾರ ಪಾಟೀಲ ಮಾತನಾಡಿ ಇಲಾಖೆ ಹಾಗೂ ಪುರಸಭೆ ಗಮನಕ್ಕೆ ಬಾರದೆ ದಾಖಲೆ ಕೇಳಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮುಖಂಡ ಬಸನಗೌಡ ಪೊಲೀಸ ಪಾಟೀಲ, ಸೋಮನಾಥ ನಗರದ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಪುರಸಭೆ ಸದಸ್ಯ ರಾದ ಸುರೇಶ ಹರಸೂರು, ರಮೇಶ ಗುಡಿಸಲಿ, ಪುರಸಭೆ ಮ್ಯಾನೇಜರ್ ಸತ್ಯನಾರಾಯಣ ಸೇರಿದಂತೆ ಮುಖಂಡರು ಹಾಗೂ ಸೋಮನಾಥ ನಗರದ ನಿವಾಸಿಗಳು ಇದ್ದರು. ಸೋಮನಾಥ ನಗರ ನಿವಾಸಿಗಳಿಗೆ ಪುರಸಭೆಯ ಗಮನಕ್ಕೆ ಬಾರದೆ ಯಾವುದೇ ದಾಖಲೆ ಹಾಗೂ ಸರ್ವೆಗಳನ್ನು ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಮಸ್ಕಿಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.ಇನ್ನು ಸೋಮನಾಥ ನಗರದ ನಿವಾಸಿಗಳ ದಾಖಲೆಗಳನ್ನು ನೀರಾವರಿ ಇಲಾಖೆ ಸಿಬ್ಬಂದಿ ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮಸ್ಕಿಉಪ ವಿಭಾಗದ ಎಇಇ ನೀರಾವರಿ ಇಲಾಖೆ (ಪ್ರಭಾರ) ದಾವೂದ್‌ ಹೇಳಿದರು.