ಸಮೈರಾ ಕೈಗೂಡಿತು ''''''''ಗಗನ'''''''' ಕನಸು

| Published : Dec 03 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಕೆ ಆಗಿನ್ನೂ ಬಾಲಕಿ, ಉತ್ಸವದಲ್ಲಿ ಹೆಲಿಕಾಪ್ಟರ್ ಟೂರ್ ನಡೆಸಲಾಗುತ್ತಿತ್ತು. ಈ ವೇಳೆ ಆ ಪುಟ್ಟ ಪೋರಿಯ ತಂದೆ ಕುಟುಂಬ ಸಮೇತ ಹೆಲಿಕಾಪ್ಟರ್ ಹತ್ತಿದ್ದರು. ಆಗಲೇ ತಾನು ಸಹ ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದ ಆ 8 ವರ್ಷದ ಬಾಲಕಿ ಮುಂದೆ ಕೇವಲ 10 ವರ್ಷಕ್ಕೆ ಅಂದುಕೊಂಡಿದ್ದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಇದೀಗ ಆಗಸದಲ್ಲಿ ಹಾರುವ ಮೂಲಕ ಆ ಬಾಲಕಿ ಭಾರತದ ಅತ್ಯಂತ ಕಿರಿಯ ಪೈಲಟ್ ಎಂದು ಹೆಸರು ಮಾಡಿದ್ದು, ಜಿಲ್ಲೆ, ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದಾಳೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಆಕೆ ಆಗಿನ್ನೂ ಬಾಲಕಿ, ಉತ್ಸವದಲ್ಲಿ ಹೆಲಿಕಾಪ್ಟರ್ ಟೂರ್ ನಡೆಸಲಾಗುತ್ತಿತ್ತು. ಈ ವೇಳೆ ಆ ಪುಟ್ಟ ಪೋರಿಯ ತಂದೆ ಕುಟುಂಬ ಸಮೇತ ಹೆಲಿಕಾಪ್ಟರ್ ಹತ್ತಿದ್ದರು. ಆಗಲೇ ತಾನು ಸಹ ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದ ಆ 8 ವರ್ಷದ ಬಾಲಕಿ ಮುಂದೆ ಕೇವಲ 10 ವರ್ಷಕ್ಕೆ ಅಂದುಕೊಂಡಿದ್ದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಇದೀಗ ಆಗಸದಲ್ಲಿ ಹಾರುವ ಮೂಲಕ ಆ ಬಾಲಕಿ ಭಾರತದ ಅತ್ಯಂತ ಕಿರಿಯ ಪೈಲಟ್ ಎಂದು ಹೆಸರು ಮಾಡಿದ್ದು, ಜಿಲ್ಲೆ, ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದಾಳೆ.

ವಿಜಯಪುರದ ಸಮೈರಾ ಹುಲ್ಲೂರ ತನ್ನ 18ನೇ ವಯಸ್ಸಿನಲ್ಲಿಯೇ ಕಮರ್ಷಿಯಲ್ ಪೈಲಟ್ ಲೈಸನ್ಸ್(ಸಿಪಿಎಲ್) ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ ಪೈಲಟ್ ಎನಿಸಿದ್ದಾಳೆ. ಹೆಣ್ಣುಮಕ್ಕಳು ಎಂದರೆ ಎಷ್ಟು ಎತ್ತರಕ್ಕೆ ಬೇಕಾದರೂ ಹಾರಬಹುದು ಎಂಬುದನ್ನು ಸಮೈರಾ ತೋರಿಸಿದ್ದಾಳೆ. ದೆಹಲಿ ಹಾಗೂ ಮಹಾರಾಷ್ಟ್ರದ ಏವಿಯೇಷನ್ ಅಕಾಡೆಮಿಗಳಲ್ಲಿ ತರಬೇತಿ ಪಡೆದು 200 ಗಂಟೆಗಳ ಫ್ಲೈಯಿಂಗ್ ತರಬೇತಿ ಮುಗಿಸಿ ಈಗ ಅಧಿಕೃತ ಪೈಲಟ್ ಆಗಿದ್ದಾಳೆ.

ಸಮೈರಾಗೆ ಕುಟುಂಬಸ್ಥರ ಸಹಕಾರ:

ಗುತ್ತಿಗೆದಾರರಾಗಿರುವ ನಗರ ನಿವಾಸಿ ಅಮೀನುದ್ದೀನ್ ಹುಲ್ಲೂರ ಹಾಗೂ ನಾಜಿಯಾ ಹುಲ್ಲೂರ ದಂಪತಿ ಪುತ್ರಿ ಸಮೈರಾ ಹುಲ್ಲೂರ ಈ ಸಾಧನೆ ಮಾಡಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಸಮೈರಾಳ ತಂದೆ-ತಾಯಿ ಹಾಗೂ ಅಜ್ಜ ಅಜ್ಜಿ. ಕಾರಣ ಚಿಕ್ಕಂದಿನಿಂದಲೂ ಪೈಲಟ್ ಆಗುವ ಕನಸು ಕಂಡಿದ್ದ ಸಮೈರಾಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಿದ್ದು ಕುಟುಂಬಸ್ಥರು.

ಎಲ್‌ಕೆಜಿಯಿಂದ 3ನೇ ತರಗತಿವರೆಗೆ ನಗರದ ಸೈನಿಕ ಶಾಲೆಯಲ್ಲಿ ಓದಿದ ಬಳಿಕ 4ರಿಂದ 10ನೇ ತರಗತಿಯವರೆಗೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದಿದ್ದಾಳೆ. ಬಳಿಕ ನಗರದ ಕೇಂದ್ರಿಯ ವಿದ್ಯಾಲಯದಲ್ಲಿ ಪಿಯು ಸೈನ್ಸ್ ಮುಗಿಸಿದ ಸಮೈರಾ ನೇರವಾಗಿ ದೆಹಲಿಗೆ ಹೋಗಿ ಅಲ್ಲಿ ಡಿಜಿಸಿಎ ಫ್ಲೈಯಿಂಗ್ ಎಂಬ ಪರೀಕ್ಷೆ ಬರೆದು ಪಾಸಾಗಿದ್ದಳು. ಆ ಬಳಿಕ ದೆಹಲಿಯಲ್ಲಿನ ವಿನೋದ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಕೋಚಿಂಗ್ ಸೇರಿ ತರಬೇತಿ ಪಡೆದು ಪರೀಕ್ಷೆಯನ್ನು ಪೂರ್ಣಗೊಳಿಸಿ, ಬಳಿಕ ಮಹಾರಾಷ್ಟ್ರದ ಬಾರಾಮತಿಯಲ್ಲಿನ ಕಾರ್ವೇ ಏವಿಯೇಷನ್ ಅಕಾಡೆಮಿಗೆ ಬಂದು ಅಲ್ಲಿ ಪ್ರಾಯೋಗಿಕ ತರಬೇತಿ ಪಡೆದಿದ್ದಾರೆ. ಆ ಬಳಿಕ 200 ತಾಸುಗಳ ಫ್ಲೈಯಿಂಗ್ ಅನುಭವವನ್ನು ಪೂರ್ಣಗೊಳಿಸಿದ್ದಾರೆ.

ಗುರಿ ಒಂದು, ರೆಕಾರ್ಡ್ ಎರಡು:

ಮೊದಲನೇಯದಾಗಿ ಕೇವಲ 18 ವರ್ಷ 8 ತಿಂಗಳಿನಲ್ಲಿ ವಿಮಾನ ಹಾರಾಟದ ತರಬೇತಿ ಪಡೆದು, ಭಾರತೀಯ ಅತ್ಯಂತ ಕಿರಿಯ ಪೈಲಟ್ ಎಂದು ಹೆಸರು ಪಡೆದಿದ್ದಾಳೆ. ಎರಡನೇಯದಾಗಿ ಪೈಲಟ್ ಆಗಲು ಸುಮಾರು 3 ರಿಂದ 4 ವರ್ಷಗಳ ಕಾಲ ಸಮಯ ಬೇಕಿದ್ದು, ಸಮೈರಾ ಮಾತ್ರ ಕೇವಲ 1 ವರ್ಷ 7 ತಿಂಗಳಿನಲ್ಲಿ ತರಬೇತಿ ಪೂರ್ಣಗೊಳಿಸಿ ಪೈಲಟ್ ಆಗಿದ್ದಾರೆ.

ಸಮೈರಾ ಮುಂದಿರುವ ಅವಕಾಶಗಳು:

ಕಮರ್ಷಿಯಲ್ ಫೈಲೆಟ್ ಲೈಸನ್ಸ್‌(ಸಿಪಿಎಲ್) ಪಡೆದಿರುವ ಸಮೈರಾ ಮುಂದೆ ಸಾಕಷ್ಟು ಅವಕಾಶಗಳಿವೆ. ಬೇರೆ ಬೇರೆ ವಿಮಾನಯಾನ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತುದಾರರಾಗಬಹುದು. ಭಾರತೀಯ ವಾಯುಸೇನೆಯಲ್ಲಿ ಕೋಸ್ಟ್ ಗಾರ್ಡ್‌ನಲ್ಲಿ ಸೇರಬಹುದು. ಖಾಸಗಿ ವಿಮಾನ ಹಾರಿಸಬಹುದು. ಹಾಗಾಗಿ ಪುಣೆಯಲ್ಲಿ ಸಂಸ್ಥೆಯೊಂದರಲ್ಲಿ ಸಮೈರಾ ಈಗಾಗಲೇ ಗ್ರೌಂಡ್ ಕ್ಲಾಸ್ ತರಬೇತಿದಾರರಾಗಿ ಸೇರ್ಪಡೆಯಾಗಿದ್ದಾರೆ.---------

ಕೋಟ್

ಆಗಸದಲ್ಲಿ ವಿಮಾನ ಹಾರುವುದನ್ನು ನೋಡಿದ್ದಾಗ ನಾನು ಹಾಗೆ ಪೈಲಟ್ ಆಗಬೇಕು ಎಂಬ ಆಸೆಯಿತ್ತು. ನನ್ನ ಆಸೆಗೆ ನಮ್ಮ ಮನೆಯಲ್ಲಿ ಎಲ್ಲರೂ ಬೆಂಬಲಿಸಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಹೆಣ್ಣುಮಕ್ಕಳ ಆಸೆ ತಿಳಿದುಕೊಂಡು ಅವರಿಗೆ ಪ್ರೋತ್ಸಾಹಿಸುವ ಮೂಲಕ ಅವರ ಕನಸಿಗೆ ಸಹಕಾರ ನೀಡಬೇಕು.

- ಸಮೈರಾ ಹುಲ್ಲೂರ, ಭಾರತರ ಕಿರಿಯ ಪೈಲಟ್ಚಿಕ್ಕ ವಯಸ್ಸಿನಲ್ಲಿಯೇ ಪೈಲಟ್ ಆಗಿ ಸಾಧನೆ ಮಾಡಿದ ಸಮೈರಾ ಹುಲ್ಲೂರ ಎಲ್ಲರಿಗೂ ಮಾದರಿಯಾಗಿದ್ದಾಳೆ. ಸಮೈರಾ ತಂದೆ-ತಾಯಿಯಂತೆ ಎಲ್ಲರೂ ತಮ್ಮ ಮಕ್ಕಳ ಆಸೆಗೆ ಬೆಂಬಲವಾಗಿ ನಿಲ್ಲಬೇಕಿದೆ. ಭಾರತದಾದ್ಯಂತ ಹೆಸರು ಮಾಡಿದ ಈ ವಿದ್ಯಾರ್ಥಿನಿ ನಮ್ಮ ಶಾಲೆಯಲ್ಲಿ ಓದಿರುವುದು ನಮಗೂ ಮತ್ತು ಶಾಲೆಗೂ ಹೆಮ್ಮೆಯ ವಿಷಯವಾಗಿದೆ.

- ಡಾ.ಸುರೇಶ ಬಿರಾದಾರ, ಅಧ್ಯಕ್ಷರು, ಶಾಂತಿನಿಕೇತನ ಶಿಕ್ಷಣ ಸಂಸ್ಥೆ