ಕೋರ್ಟ್‌ ಸುದ್ದಿ ಪ್ರಕಟಿಸುವಾಗ ಕನಿಷ್ಠ ಜ್ಞಾನವಿರಲಿ: ಜಿ.ಎಸ್‌. ಸಂಗ್ರೇಶಿ ಸಲಹೆ

| Published : Dec 03 2024, 12:31 AM IST

ಕೋರ್ಟ್‌ ಸುದ್ದಿ ಪ್ರಕಟಿಸುವಾಗ ಕನಿಷ್ಠ ಜ್ಞಾನವಿರಲಿ: ಜಿ.ಎಸ್‌. ಸಂಗ್ರೇಶಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರು ಸಾಮಾಜಿಕ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಬೇಕು. ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ವಾಸ್ತವಿಕ ವಿಚಾರ ಮರೆಯಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯುನ್ಮಾನ ಮಾಧ್ಯಮಗಳಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸುವಾಗ ಅದರ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ಕಿವಿಮಾತು ಹೇಳಿದರು.

ನಗರದಲ್ಲಿ ಸೋಮವಾರ ಲಾಗೈಡ್ ಕಾನೂನು ಮಾಸಪತ್ರಿಕೆ ಬಳಗದ 2025ನೇ ವರ್ಷದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ನ್ಯಾಯಾಲಯಕ್ಕೆ ಸಂಬಂಧಿಸಿದ ಸುದ್ಧಿಗಳನ್ನು ಪ್ರಕಟಿಸುವಾಗ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಕನಿಷ್ಠ ಜ್ಞಾನ ಹೊಂದಬೇಕು. ತಪ್ಪಿದಲ್ಲಿ ವರದಿ ಲೋಪದಿಂದ ಕೂಡಿರುತ್ತದೆ. ಪತ್ರಕರ್ತರು ಸಾಮಾಜಿಕ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಬೇಕು. ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ವಾಸ್ತವಿಕ ವಿಚಾರ ಮರೆಯಬಾರದು. ಕಾನೂನು ಬಲ್ಲವರ ಎದುರು ನಗೆಪಾಟೀಲಿಗೆ ಈಡಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಶಾಸಕ ಎ. ಮಂಜು ಲಾಗೈಡ್ ಹಾಗೂ ಅವರ ಒಡನಾಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ವೆಂಕಟೇಶ್ ಮಾತ್ರವಲ್ಲ ಅವರ ಇಡೀ ಕುಟುಂಬ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ. ಅವರ ಪತ್ನಿ ಹಾಗೂ ಮಗ ರೋಹನ್ ಗಂಗಡ್ಕರ್ ಇವರ ಕೆಲಸಗಳಲ್ಲಿ ಕೈ ಜೋಡಿಸಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ವೆಂಕಟೇಶ್ ಒಬ್ಬ ವಕೀಲರಾಗಿ ಕಾನೂನು ಸೇವೆಯ ಜೊತೆಗೆ ತನ್ನ ವೃತ್ತಿ ಭಾಂದವರ ಕ್ಷೇವಾಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಅವರು ಲಾಗೈಡ್ ಗೌರವ ಸಂಪಾದಕ ಎಚ್. ಎನ್. ವೆಂಕಟೇಶ್ ಹಾಗೂ ಲಾಗೈಡ್ ಬಳಗದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಕೆಲಸ ಗುರುತಿಸಿ ಲಾಗೈಡ್ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ನೀಡಿದೆ ಇದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಮುಂದೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಸಮಾಜ ಸೇವೆ ಮಾಡುವುದಾಗಿ ತಿಳಿಸಿದರು.

ವಕೀಲ ಎಚ್.ಎನ್. ವೆಂಕಟೇಶ್ ಅವರು ಲಾಗೈಡ್ ಪತ್ರಿಕೆ ಆರಂಭವಾದ ರೀತಿ ನಡೆದು ಬಂದ ಹಾದಿ ಆ ವೇಳೆ ಅವರ ಜೊತೆಗೆ ನಿಂತ ಹಿರಿಯರನ್ನು ಸ್ಮರಿಸಿದರು. ಲಾಗೈಡ್‌ ನ ಗುರಿ ಧ್ಯೇಯೋದ್ದೇಶ ವಿವರಿಸಿದರು.

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಹಿರಿಯ ವಕೀಲ ಎಂ.ಡಿ. ಹರೀಶ್ ಕುಮಾರ್ ಹೆಗ್ಡೆ ಸೇರಿ ಹಲವು ಮಂದಿ ಹಿರಿಯ, ಕಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಉದ್ಯಮಿಗಳು ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವು ಮಂದಿ ಪಾಲ್ಗೊಂಡಿದ್ದರು.