ಸಾರಾಂಶ
ಅರಸೀಕೆರೆ : ತಾಲೂಕಿನಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣವಿದ್ದು ತಂತುರು ಮಳೆಯಾಗುತ್ತಿದೆ. ಇದರ ನಡುವೆಯೇ ರೈತರು ರಾಗಿ ಮತ್ತು ಮುಸುಕಿನ ಜೋಳದ ಕಟಾವು ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೆಎಸ್‌ಎನ್‌ಡಿಎಂಸಿ ಇಲಾಖೆಯ ಹವಾಮಾನ ಮುನ್ಸೂಚನೆಯಂತೆ ಮುಂದಿನ ೨-೩ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ರೈತರು ಕಟಾವು ಕಾರ್ಯವನ್ನು ಮುಂದಿನ ೩-೪ ದಿನಗಳವರೆಗೆ ಮುಂದೂಡಬಹುದು. ಈಗಾಗಲೇ ಕಟಾವು ಕಾರ್ಯ ಪೂರ್ಣಗೊಂಡಿರುವ ಬೆಳೆಯನ್ನು ಒಕ್ಕಣೆ ಕಣಗಳಲ್ಲಿ ಟಾರ್ಪಲ್ ಮೂಲಕ ರಕ್ಷಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಪಿ. ಶಿವಕುಮಾರ್ ತಿಳಿಸಿದ್ದಾರೆ
೨೦೨೪-೨೫ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಓರಿಯೆಂಟಲ್ ಇನ್ಸೂರೆನ್ಸ್ ಕಂಪೆನಿ, ಬೆಂಗಳೂರು ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿರುವ ರೈತರು, ಬೆಳೆ ವಿಮೆ ಯೋಜನೆಯ ಪರಿಸ್ಕೃತ ಅನುಷ್ಠಾನ ಮಾರ್ಗಸೂಚಿ ಅನ್ವಯ ಹವಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಇತ್ಯಾದಿಗಳಿಂದ ಬೆಳೆ ಹಾನಿ ಸಂಭವಿಸಿದ್ದಲ್ಲಿ ಘಟಕದಡಿ ರೈತರು ಬೆಳೆ ನಷ್ಟ ಪರಿಹಾರ ಪಡೆಯಲು ಅವಕಾಶವಿದೆ ಎಂದರು.
ಬೆಳೆ ವಿಮೆಗೆ ನೋಂದಾಯಿಸಿಕೊಂಡಿರುವ ರೈತರು ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ, ಕಟಾವು ಕೈಗೊಳ್ಳುವ ಎರಡು ವಾರದೊಳಗೆ (14 ದಿನ) ಹವಾಮಾನ ವೈಪರಿತ್ಯಗಳಿಂದ ಬೆಳೆ ನಷ್ಟವಾದರೆ ರೈತರು ನೇರವಾಗಿ ಬೆಳೆ ವಿಮಾ ಸಂಸ್ಥೆ/ಕೃಷಿ/ತೋಟಗಾರಿಕಾ ಇಲಾಖೆಗೆ ಅರ್ಜಿ ಮೂಲಕ ತಕ್ಷಣ ಮಾಹಿತಿ ನೀಡಬಹುದಾಗಿದೆ. ಅಂತಹ ಪ್ರಕರಣಗಳನ್ನು ವೈಯಕ್ತಿಕವಾಗಿ ವಿಮಾ ಸಂಸ್ಥೆಯವರು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತಾರೆ ಎಂದಿದ್ದಾರೆ.
ಅರಸೀಕೆರೆ ತಾಲೂಕಿನಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಚಿರಂಜೀವಿ-೯೧೧೩೬೬೭೧೦೫ ಅವರನ್ನು ಸಂಪರ್ಕಿಸಿ ಬೆಳೆ ನಷ್ಟದ ಮಾಹಿತಿಯನ್ನು ನೀಡಬಹುದು. ಅಥವಾ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂರ್ಪಕಿಸಬಹುದು.