ಸಾರಾಂಶ
ಹೂವಿನಹಡಗಲಿ: ಸರ್ಕಾರಿ ವೈದ್ಯಾಧಿಕಾರಿಗಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ಹೂವಿನಹಡಗಲಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹೊಳಗುಂದಿ ಗ್ರಾಮದ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೊರಗೇರಿ ಸುರೇಶ ಬಂಧಿತ ಆರೋಪಿ.ಅವರ ಕಿರುಕುಳಕ್ಕೆ ರೋಸಿಹೋದ ಇಲ್ಲಿನ ಆರೋಗ್ಯಾಧಿಕಾರಿ ಕಚೇರಿಯ ಟಿಎಚ್‌ಒ, ಹೊಳಗುಂದಿ ಆಸ್ಪತ್ರೆ ವೈದ್ಯರು ಶನಿವಾರ ತಡರಾತ್ರಿ ಪ್ರತ್ಯೇಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಠಾಣೆ ಎದುರು ಹೈಡ್ರಾಮಾ:ಡಿಎಚ್‌ಒ ಡಾ. ಶಂಕರ ನಾಯ್ಕ, ಟಿಎಚ್‌ಒ ಡಾ. ಸಪ್ನಾ ಕಟ್ಟಿ, ಹೊಳಗುದಿ ಆಸ್ಪತ್ರೆಯ ವೈದ್ಯ ಡಾ. ಅಶೋಕ ಕುಮಾರ ಸೇರಿದಂತೆ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಸಿಬ್ಬಂದಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಶನಿವಾರ ತಡರಾತ್ರಿ 1 ಗಂಟೆಯವರೆಗೂ ಇದ್ದರು.
ಮಹಿಳಾ ವೈದ್ಯಾಧಿಕಾರಿಗೆ ಸಾಮಾಜಿಕ ಕಾರ್ಯಕರ್ತ ಸುರೇಶ ರಾತ್ರಿ 11 ಗಂಟೆಗೆ ವೇಳೆಗೆ ದೂರವಾಣಿ ಕರೆ ಮಾಡಿ, ಮಾಹಿತಿ ಕೊಡುವಂತೆ ಒತ್ತಾಯಿಸುತ್ತಾರೆ. ಜತೆಗೆ ಸಾಕಷ್ಟು ಬಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಕೆಲವು ವೈದ್ಯರ ಬಳಿ ಆರ್‌ಟಿಐ ಅರ್ಜಿ ಸಲ್ಲಿಸಿ, ಹಣದ ಬೇಡಿಕೆ ಇಟ್ಟಿದ್ದಾರೆಂದು ಟಿಎಚ್‌ಒ ಆರೋಪಿಸಿದರು.ಇಂತಹ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಲು ಸಿದ್ಧರಿಲ್ಲ. ನಮಗೆ ಜೀವ ಬೆದರಿಕೆ ಇದೆ. ವೈದ್ಯರು ಹಾಗೂ ಸಿಬ್ಬಂದಿ ರಾಜೀನಾಮೆ ನೀಡುತ್ತೇವೆ ಎಂದರು. ದೂರು ದಾಖಲಾಗುವ ವರೆಗೂ ಠಾಣೆಯಿಂದ ಯಾವುದೇ ವೈದ್ಯರು, ಅಧಿಕಾರಿಗಳು ಹೊರ ಹೋಗುವುದಿಲ್ಲವೆಂದು ಪಟ್ಟು ಹಿಡಿದರು.
ದೂರು ಸ್ವೀಕರಿಸಿದ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡರು. ಬಳಿಕ ಆರೋಪಿಯನ್ನು ಹಗರಿಬೊಮ್ಮನಹಳ್ಳಿಯ ಅವರ ಮಗಳ ಮನೆಯಲ್ಲಿದ್ದಾಗ ಶನಿವಾರ ತಡರಾತ್ರಿಯೇ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.