ಸಾಗುವಳಿಗೆ ಅವಕಾಶ ನೀಡದೆ ರೈತರಿಗೆ ಕಿರುಕುಳ

| Published : May 14 2024, 01:02 AM IST

ಸಾರಾಂಶ

ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಡಿ.ಬಿ ಹಳ್ಳಿ ಗ್ರಾಮದ ರೈತರಿಗೆ ಯಡೇಹಳ್ಳಿ ಗ್ರಾಮದ ಸರ್ವೆ ನಂ.೬೬ರಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡದ ಒಟ್ಟು ೩೪ ಜನರಿಗೆ ೧೯೬೧-೬೨ರಲ್ಲಿ ಪ್ರತಿಯೊಬ್ಬ ರೈತರಿಗೂ ತಲಾ ೨ ಎಕರೆ ಜಮೀನು ಸರ್ಕಾರ ಮಂಜೂರು ಮಾಡಿದೆ. ಈ ಜಮೀನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಜಮೀನು ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಡಿ.ಬಿ ಹಳ್ಳಿ ಗ್ರಾಮದ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿಗೆ ಅವಕಾಶ ನೀಡದೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ತಕ್ಷಣ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಕೆ.ಆರ್ ನಾಗರಾಜುರಿಗೆ ಸೋಮವಾರ ರೈತರು ಆಗ್ರಹಿಸಿದರು.

ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಡಿ.ಬಿ ಹಳ್ಳಿ ಗ್ರಾಮದ ರೈತರಿಗೆ ಯಡೇಹಳ್ಳಿ ಗ್ರಾಮದ ಸರ್ವೆ ನಂ.೬೬ರಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡದ ಒಟ್ಟು ೩೪ ಜನರಿಗೆ ೧೯೬೧-೬೨ರಲ್ಲಿ ಪ್ರತಿಯೊಬ್ಬ ರೈತರಿಗೂ ತಲಾ ೨ ಎಕರೆ ಜಮೀನು ಸರ್ಕಾರ ಮಂಜೂರು ಮಾಡಿದೆ. ಈ ಜಮೀನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಜಮೀನು ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಮಂಜೂರು ಮಾಡಿದ ಜಮೀನಿನಲ್ಲಿ ಕೆಲವು ರೈತರು ಜಮೀನಿನ ಅಡಮಾನ ಸಾಲ ಪಡೆದಿದ್ದು, ಅಲ್ಲದೆ ಕೆಲವರು ಇದೇ ಜಮೀನನ್ನು ಬೇರೆಯವರಿಗೆ ವಿಲ್ (ಮರಣ ಶಾಸನದ) ಮೂಲಕ ಖಾತೆ ಬದಲಾವಣೆ ಮಾಡಿರುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಜಮೀನಿನ ಅಧಿಕಾರ ರೈತರಿಗೆ ನೀಡಿದ್ದಾರೆ. ಆದರೂ ಕಾನೂನು ಬದಿಗೆ ತಳ್ಳಿ ಅರಣ್ಯ ಇಲಾಖೆ ಮಾವಿನಕಟ್ಟೆ, ಶಾಂತಿಸಾಗರ ವಲಯದ ಅರಣ್ಯಾಧಿಕಾರಿ ರಾಮಪ್ಪ ದೊಡ್ಡಮನಿ ಮತ್ತು ಸಿಬ್ಬಂದಿ ಮೇ ೬ರಂದು ವಿನಾಕಾರಣ ಜಮೀನಿಗೆ ನುಗ್ಗಿ ಸಾಗುವಳಿ ಮಾಡದಂತೆ ತಡೆದು ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ರೈತ ಪ್ರಮುಖರಾದ ಆರ್. ಸಂತೋಷ್, ಎಸ್. ಈರೇಶ್, ಸತೀಶ್, ಯಲ್ಲಪ್ಪ, ಬಿ. ರೇಣುಕಪ್ಪ, ನಾಗರಾಜ್, ಆರ್. ತಿಮ್ಮಪ್ಪ, ನಂಜುಂಡಪ್ಪ, ರುದ್ರೇಶಪ್ಪ, ರಂಗಪ್ಪ, ಜಿ.ಎಂ ರುದ್ರೇಶ್, ಆರ್.ಎಂ ರುದ್ರಪ್ಪ, ಹನುಮಂತಪ್ಪ, ರಾಜಪ್ಪ, ಸುನಿಲ, ಹರೀಶ್, ಸುಶೀಲಬಾಯಿ, ರತ್ನಮ್ಮ, ಮಂಜಮ್ಮ, ಈರಮ್ಮ, ಪವಿತ್ರ ಮತ್ತು ಸಂಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.